೧ ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೆ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲಿನ ಘಟಕ

| Published : Jan 21 2024, 01:31 AM IST

೧ ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೆ ಉತ್ತರ ಕನ್ನಡ ಜಿಲ್ಲೆಗೆ ಪ್ರತ್ಯೇಕ ಹಾಲಿನ ಘಟಕ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಲು ಸಾಗಾಣೆ ವೆಚ್ಚ ಕಡಿಮೆ ಮಾಡಲು ಶಿರಸಿಯಲ್ಲಿಯೇ ಕೆಎಂಎಫ್‌ ಹಾಲು ಉತ್ಪಾದನಾ ಘಟಕ ತೆರೆಯಲಾಗಿದೆ. ಜಿಲ್ಲೆಗೆ ಪ್ರತ್ಯೇಕ ಹಾಲಿನ ಘಟಕ ತೆರೆಯಬೇಕಾದರೆ ಕನಿಷ್ಠ ೧ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಬೇಕು.

ಮುಂಡಗೋಡ:

ರೈತರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾಲು ಸಾಗಾಣೆ ವೆಚ್ಚ ಕಡಿಮೆ ಮಾಡಲು ಶಿರಸಿಯಲ್ಲಿಯೇ ಕೆಎಂಎಫ್‌ ಹಾಲು ಉತ್ಪಾದನಾ ಘಟಕ ತೆರೆಯಲಾಗಿದೆ. ಜಿಲ್ಲೆಗೆ ಪ್ರತ್ಯೇಕ ಹಾಲಿನ ಘಟಕ ತೆರೆಯಬೇಕಾದರೆ ಕನಿಷ್ಠ ೧ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಬೇಕು. ಹಾಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡುವುದು ಅನಿವಾರ್ಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಶನಿವಾರ ತಾಲೂಕಿನ ಬಾಚಣಕಿ ಗ್ರಾಮದಲ್ಲಿ ಜಿಪಂ, ತಾಪಂ, ಹಾಲು ಉತ್ಪಾದಕರ ಸಹಕಾರಿ ಸಂಘ ಬಾಚಣಕಿ, ಕೆನರಾ ಬ್ಯಾಂಕ್ ರುಡ್ ಸೆಟಿ ಹಾಗೂ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಅಶ್ರಯದಲ್ಲಿ ಜಾನುವಾರು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಈ ಹಿಂದೆ ೫೨ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಅದು ೪೦ ಸಾವಿರ ಲೀಟರ್ ಗೆ ಇಳಿಕೆಯಾಗಿದೆ. ಒಂದು ದಿನಕ್ಕೆ ಜಿಲ್ಲೆಯಲ್ಲಿ ಮಾರಾಟವಾಗುವ ಹಾಲು ೪೭ ಸಾವಿರ ಲೀಟರ್. ಹಾಗಾಗಿ ಮಾರಾಟಕ್ಕಿಂತ ಉದ್ಪಾದನೆ ಕಡಿಮೆಯಾಗುತ್ತಿರುವುದು ನೋಡಿದರೆ ಹೈನುಗಾರಿಕೆಗೆ ಹಿನ್ನಡೆ ಕಾಣಿಸುತ್ತಿದೆ ಎಂದ ಅವರು, ಹೈನುಗಾರಿಕೆ ಜಾನುವಾರು ಸಾಕಾಣಿಕೆಗೆ ರೈತರಿಗಿರುವಷ್ಟು ಪೂರಕ ವಾತಾವರಣ ಇನ್ನಾರಿಗೂ ಇಲ್ಲ ಎಂದರು.ಜಾನುವಾರುಗಳ ಬದಲು ಯಂತ್ರೋಪಕರಣ ಬಳಕೆ ಹಾಗೂ ರಾಸಾಯನಿಕ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿರುವುದರಿಂದ ಆಹಾರ ಕೂಡ ವಿಷವಾಗುತ್ತಿದೆ. ಹಾಗಾಗಿ ಹೆಚ್ಚು ಜಾನುವಾರು ಸಾಕಿ ಹೈನುಗಾರಿಕೆಗೆ ಒತ್ತು ನೀಡಬೇಕು. ಈ ಮೂಲಕ ಸಾವಯವ ಕೃಷಿಗೆ ಪ್ರಾಧಾನ್ಯತೆ ನೀಡಿ ಭೂಮಿಯ ಆರೋಗ್ಯದೊಂದಿಗೆ ಜನರ ಆರೋಗ್ಯ ಕೂಡ ಕಾಪಾಡುವ ಹೊಣೆಗಾರಿಕೆ ರೈತರ ಮೇಲಿದೆ ಎಂದು ಶಾಸಕರು ಹೇಳಿದರು.ಜವಾರಿ ಆಕಳು ಹಾಗೂ ಎಮ್ಮೆ ಹಾಲಿನಲ್ಲಿರುವ ಪೌಷ್ಟಿಕಾಂಶ ಜರ್ಸಿ ಆಕಳಿನ ಹಾಲಿನಲ್ಲಿ ಇರುವುದಿಲ್ಲ ಎಂದ ಅವರು, ಹೈನುಗಾರಿಕೆಯೇ ಕುಲಕಸುಬು ಮಾಡಿಕೊಂಡಿದ್ದ ತಾಲೂಕಿನ ದನಗರ ಗೌಳಿಗರಲ್ಲಿ ಕೂಡ ಹೈನುಗಾರಿಕೆ ಆಸಕ್ತಿ ಕಡಿಮೆಯಾಗಿದೆ ಎಂದ ಅವರು, ದನಗರ ಗೌಳಿ ಸಮಾಜ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಯಲ್ಲಿ ತೊಡಗಿಸಿಕೊಂಡು ಸರ್ಕಾರದಿಂದ ಸಿಗುವ ಸವಲತ್ತು ಪಡೆದುಕೊಂಡು ಆರ್ಥಿಕವಾಗಿ ಗಟ್ಟಿಯಾಗಬೇಕು ಎಂದು ಕರೆ ನೀಡಿದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ರೈತರ ಮನೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸು ಸಾಕಲಾಗುತ್ತಿತ್ತು. ಇದು ಕೃಷಿಯ ಒಂದು ಅಂಗವಾಗಿತ್ತು. ಆದರೆ ಇಂದು ರೈತರ ಮನೆಗಳಲ್ಲಿ ದನಗಳು ಕಾಣುವುದಿಲ್ಲ. ಹಸು ಸಾಕಾಣಿಕೆಯಿಂದ ಹಾಲು ಸೇರಿದಂತೆ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುತ್ತದೆ ಹಾಗೂ ಗದ್ದೆಗಳಿಗೆ ಸೆಗಣಿ ಗೊಬ್ಬರ ಸಿಗುತ್ತದೆ. ಹಸು ರೈತರಿಗೆ ಸಂಜೀವಿನಿ ಇದ್ದಂತೆ. ಹಾಗಾಗಿ ನಮ್ಮ ಮೂಲ ಪದ್ಧತಿಯಂತೆ ಜಾನುವಾರುಗಳ ಸಾಕಾಣಿಕೆಗೆ ಒತ್ತು ನೀಡುವಂತೆ ರೈತರಿಗೆ ಕರೆ ನೀಡಿದರು.ಗ್ರಾಪಂ ಅಧ್ಯಕ್ಷ ಫಕೀರವ್ವ ಮಲ್ಲಿಕಾರ್ಜುನ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಪಶು ವೈದ್ಯಾಧಿಕಾರಿ ಕೃಷ್ಣಮೂರ್ತಿ ಹೆಗಡೆ, ಗ್ರಾಪಂ ಉಪಾಧ್ಯಕ್ಷ ಇಸ್ಮಾಯಿಲ್ ಶೇಖಲಿ, ನಾಗರಾಜ ಉಪಾದ್ಯ, ಸಂತೋಷ ಸಣ್ಮನಿ, ಮಾಸಾಬಿ ಮುಲ್ಲಾನವರ, ತಿಪ್ಪವ್ವ ಲಮಾಣಿ, ವಿಜಯ ಲಮಾಣಿ, ಶೋಬಾ ಥೋಮಸ್ ಉಪಸ್ಥಿತರಿದ್ದರು.