ಮುಂಗಾರು ಹದ ಮಳೆಗೆ ಅನ್ನದಾತರಲ್ಲಿ ಮಂದಹಾಸ

| Published : Jul 06 2024, 12:49 AM IST

ಸಾರಾಂಶ

ನಿಜವಾದ ಮುಂಗಾರು ಮಳೆಯ ದರ್ಶನಕ್ಕೆ ನಗರ, ಜಿಲ್ಲೆಯ ವಿವಿಧ ಭಾಗಗಳು ಶುಕ್ರವಾರ ಸಾಕ್ಷಿಯಾಗಿವೆ. ಹದ ಮಳೆಯಿಂದಾಗಿ ನಿನ್ನೆ, ಮೊನ್ನೆ ಬಿತ್ತನೆ ಮಾಡಿದ್ದ ರೈತರಲ್ಲಿ ಮಂದಹಾಸ ಮೂಡಿದ್ದರೆ, ಬಿತ್ತನೆಗೆ ಸಿದ್ಧರಾಗಿದ್ದ ರೈತರು ಮತ್ತೆ 2-3 ದಿನ ಕಾಯಬೇಕಾಗಿದೆ.

- ನಗರ, ಜಿಲ್ಲಾದ್ಯಂತ ಮಳೆರಾಯನ ಕೃಪಾಕಟಾಕ್ಷ । ಸದ್ದಿಲ್ಲದ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಮಹಾಜನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ನಿಜವಾದ ಮುಂಗಾರು ಮಳೆಯ ದರ್ಶನಕ್ಕೆ ನಗರ, ಜಿಲ್ಲೆಯ ವಿವಿಧ ಭಾಗಗಳು ಶುಕ್ರವಾರ ಸಾಕ್ಷಿಯಾಗಿವೆ. ಹದ ಮಳೆಯಿಂದಾಗಿ ನಿನ್ನೆ, ಮೊನ್ನೆ ಬಿತ್ತನೆ ಮಾಡಿದ್ದ ರೈತರಲ್ಲಿ ಮಂದಹಾಸ ಮೂಡಿದ್ದರೆ, ಬಿತ್ತನೆಗೆ ಸಿದ್ಧರಾಗಿದ್ದ ರೈತರು ಮತ್ತೆ 2-3 ದಿನ ಕಾಯಬೇಕಾಗಿದೆ.

ಜಿಲ್ಲಾದ್ಯಂತ 2 ದಿನದಿಂದ ದಟ್ಟಮೋಡಗಳು ಆವರಿಸಿದ್ದವು. ಶುಕ್ರವಾರ ಬೆಳಗ್ಗೆಯಿಂದ ಇಡೀ ನಗರ, ಜಿಲ್ಲೆಯ ಬಹುತೇಕ ಕಡೆ ಮುಂಗಾರು ಮಳೆಯ ವೃಷ್ಟಿಯಾಯಿತು. ಅದರಲ್ಲೂ ಜಿಲ್ಲಾ ಕೇಂದ್ರದ ಮೇಲಂದೂ ಕಪ್ಪುಮೋಡಗಳು ಆವರಿಸಿ, ಮಧ್ಯದಲ್ಲಿ ಸುರುಳಿಯಂತಾಗಿ ಮಳೆಯಾಗುತ್ತಿದ್ದ ನಯನ ಮನೋಹರ ದೃಶ್ಯ ಊರ ಹೊರಗಿನ ಪ್ರದೇಶ, ಎತ್ತರ ಪ್ರದೇಶದಿಂದ ಕಣ್ಮನ ಸೆಳೆಯುವಂತೆ ಕಂಡುಬಂದಿತು.

ಇವತ್ತು ಹದ ಮಳೆ ಆಗಬಹುದು, ನಾಳೆ ಆಗಬಹುದೆಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರು ಮೊನ್ನೆ ಸುರಿದ ಮಳೆಯಿಂದಾಗಿ ಬಿತ್ತನೆ ಮಾಡಿದ್ದರು. ಅಂತಹ ರೈತರ ಮೊಗದಲ್ಲಿ ಖುಷಿಯು ಕಂಡುಬಂದಿತು. ಬಿತ್ತನೆಗೆ ಸಿದ್ಧರಾಗಿದ್ದ ರೈತರು ಇಂದಿನ ಮಳೆಯಿಂದಾಗಿ ಮತ್ತೆ 2-3 ದಿನ ಕಾಯುವಂತಾಗಿದೆ. 3-4 ದಿನಗಳಿಂದ ಬಿತ್ತನೆ ಮಾಡಿದ್ದ ರೈತರು ಮಳೆಯಲ್ಲಿ ನೆನೆಯುತ್ತಲೇ ಖುಷಿಯಲ್ಲಿ ತಮ್ಮ ಹೊಲದತ್ತ ಹೋಗಿ ಬರುತ್ತಿದ್ದುದು ಸಾಮಾನ್ಯವಾಗಿತ್ತು.

ತಾಲೂಕಿನ ತೋಳಹುಣಸೆಯ ಫ್ಲೈಓ‍ರ್ ಮೇಲಿನಿಂದ ಜಿಲ್ಲಾ ಕೇಂದ್ರದಲ್ಲಿ ಸುರಿಯುತ್ತಿದ್ದ ಮಳೆಯಂತೂ ಚಹಾ ಬಣ್ಣದಿಂದ ಮನರಂಜಿಸಿದೆ. ಪಾತ್ರೆಯಿಂದ ಜಾಲರಿ ಮೂಲಕ ಲೋಟಕ್ಕೆ ಬಿಸಿ ಬಿಸಿ ಚಹಾ ಬೀಳುವಂತೆ ಮಳೆನೀರು ಎಲ್ಲೆಡೆ ದರ್ಶನ ತೋರುತ್ತಿದೆ. ಮಣ್ಣುಮಿಶ್ರಿತವಾಗಿ ಹರಿಯುವ ಈ ನೀರಿನ ವಯ್ಯಾರದ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎಂಬ ಭಾವ ಜನರಲ್ಲಿ ಮೂಡಿಸಿದೆ.

ಜೋರು ಗಾಳಿಯಾಗಲೀ, ಗುಡುಗಿನ ಆರ್ಭಟ, ಮಿಂಚಿನ ಸಂಚಾರವಾಗಲೀ ಯಾವುದೇ ಸದ್ದುಗದ್ದಲವಿಲ್ಲದೇ ಮಳೆರಾಯ ಹದವಾಗಿಯೇ ಭೂಮಿಯನ್ನು ನೆನೆಸುತ್ತ ರೈತರಲ್ಲಿ ಮಂದಹಾಸ ಸೃಷ್ಟಿಸಿದ್ದಾನೆ. ಅದೇ ರೀತಿ ದಿನವಿಡೀ ಮಳೆ ವಾತಾವರಣದಿಂದಾಗಿ, ಹದ ಮಳೆಯಿಂದಾಗಿ ಜನರು ತಮ್ಮ ಊರಿನಲ್ಲಿ ದಡ್ಡ ಕಾನನದ ಮಲೆನಾಡಿನ ಮಳೆಯ ಅನುಭವವನ್ನು ಅನುಭವಿಸುತ್ತಿದ್ದಾರೆ. ಇಂಥ ರಮಣೀಯತೆ ಸೃಷ್ಟಿಸಿದ ಮಳೆರಾಯನನ್ನು ಮಕ್ಕಳು, ಮಹಿಳೆಯರು, ಪುರುಷರು, ಹಿರಿಯರು ಕಿಟಕಿ, ಮನೆಯಂಗಳ, ಬಾಗಿಲಲ್ಲಿ ನಿಂತು ಮುಗ್ದಭಾವದಿಂದ ಆಸ್ವಾದಿಸಿದರು.

ರೈತರಿಗೆ ಮಳೆಯಿಂದ ಖುಷಿಯೇನೋ ಆಗಿದೆ. ಆದರೆ, ಮಾರುಕಟ್ಟೆ, ವ್ಯಾಪಾರ, ಖರೀದಿಗೆ ಬಂದವರು, ಪರ ಊರಿನಿಂದ ಬಂದವರಿಗೆ ಇದೇ ಮಳೆ ತೀವ್ರ ತೊಂದರೆಯನ್ನೂ ತಂದಿದೆ. ಜೋರುಮಳೆ ಸುರಿಯುತ್ತಿದ್ದರೂ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡದ ರಸೀದಿ ಮನೆ ಬಾಗಿಲಿಗೆ ಬರುತ್ತದೆಂಬ ಭಯಕ್ಕೆ ಅದೆಷ್ಟೋ ಜನರು ಸಿಗ್ನಲ್‌ಗಳಲ್ಲೇ ನಿಂತು ಮಳೆಯಿಂದ ರಕ್ಷಣೆ ಪಡೆಯುವ ಪ್ರಯತ್ನ ಮಾಡುತ್ತಿದ್ದರು. ಮಳೆಯಲ್ಲೂ ನೆನೆಯುತ್ತಾ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದರೆ, ಮತ್ತೆ ಕೆಲವರು ಮಳೆ ನೆಪದಲ್ಲಿ ಸಿಗ್ನಲ್ ಸಹ ಲೆಕ್ಕಿಸದೇ ಮುಂದೆ ಸಾಗುತ್ತಿದ್ದರು.

ಅಲ್ಲಲ್ಲಿ ರಸ್ತೆಗಳ ದುರಸ್ತಿ, ನಿರ್ಮಾಣ, ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ಪಿ.ಜೆ. ಬಡಾವಣೆ, ಎಂ.ಸಿ. ಕಾಲನಿ ಇತರೆಡೆ ವಾಹನ ದಟ್ಟಣೆ ಹೆಚ್ಚಾಗಿ ಜನರು, ವಾಹನ ಚಾಲಕರು, ಸವಾರರು ಪರದಾಡಿದರು. ಇನ್ನೇನು ಶಾಲೆ, ಕಾಲೇಜು, ಕಚೇರಿಗಳು ಬಿಡುವ ಹೊತ್ತಿನಲ್ಲೂ ಮಳೆ ಆರ್ಭಟ ಮುಂದುವರಿದೇ ಇತ್ತು. ಶಾಲೆಗೆ ಹೋಗಿದ್ದ ಪುಟ್ಟಪುಟ್ಟ ಮಕ್ಕಳನ್ನು ಕರೆ ತರಲು ತಂದೆ, ತಾಯಿ, ಅಜ್ಜ-ಅಜ್ಜಿಯಂದಿರು, ಹಿರಿಯರು ಶಾಲೆ ಕಡೆಗೆ ಕೊಡೆ ಹಿಡಿದು ಹೊರಟಿದ್ದುದು, ರೈನ್ ಕೋಟ್ ಹಾಕಿಕೊಂಡ ಪುಟ್ಟ ಮಕ್ಕಳು ಮಳೆ ನೀರಿನಲ್ಲಿ ಕುಣಿಯುತ್ತಾ, ನೆಗೆಯುತ್ತಾ ಸಂಭ್ರಮದಿಂದ ನೆನೆಯುತ್ತಲೇ ಮನೆ ಕಡೆ ಹೆಜ್ಜೆ ಹಾಕಿದ್ದರು. ರಸ್ತೆ ಬದಿಯಲ್ಲಿ ಸಾಗುವ ಪಾದಚಾರಿಗಳನ್ನೂ ಲೆಕ್ಕಿಸದೇ ವಾಹನಗಳ ಚಾಲಕರು ಅತಿ ವೇಗ, ಅಜಾಗರೂಕತೆಯಿಂದ ಸಾಗುವ ಕಿಡಿಗೇಡಿ ಚಾಲಕರ ದುರ್ವರ್ತನೆಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.

- - - (-ಫೋಟೋಗಳಿವೆ)

-5ಕೆಡಿವಿಜಿ11, 12:

ದಾವಣಗೆರೆ ತಾಲೂಕಿನ ತೋಳಹುಣಸೆ ರೈಲ್ವೆ ಮೇಲ್ಸೇತುವೆಯಿಂದ ಕ್ಯಾಮೆರಾಕ್ಕೆ ಕಂಡ ಕಾರ್ಮೋಡ ದೃಶ್ಯ. -5ಕೆಡಿವಿಜಿ13: ದಾವಣಗೆರೆಯಲ್ಲಿ ಮಳೆ ಮಧ್ಯೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವ ಕುಟುಂಬ.-5ಕೆಡಿವಿಜಿ14: ದಾವಣಗೆರೆಯಲ್ಲಿ ಜೋರು ಮಳೆಯಲ್ಲೇ ಕಾಲೇಜು ವಿದ್ಯಾರ್ಥಿನಿಯರು ಮನೆಗೆ ಮರಳುತ್ತಿರುವುದು.

-5ಕೆಡಿವಿಜಿ15: ದಾವಣಗೆರೆಯಲ್ಲಿ ಶುಕ್ರವಾರ ಮಳೆಯಲ್ಲಿ ಜನರು ಕೊಡೆ ಹಿಡಿದು ಸಾಗುತ್ತಿರುವುದು. -5ಕೆಡಿವಿಜಿ16: ದಾವಣಗೆರೆಯಲ್ಲಿ ಮಳೆ ಲೆಕ್ಕಿಸದೇ ಟ್ರ್ಯಾಕ್ಟರ್‌ನಲ್ಲಿ ಸಾಗುತ್ತರುವ ರೈತರು.