ಮೂಲಸೌಲಭ್ಯಕ್ಕಿಂತ ಆದಾಯಕ್ಕೆ ಒತ್ತು ನೀಡುತ್ತಿರುವ ಸಾರಿಗೆ ಸಂಸ್ಥೆ

| Published : Dec 25 2023, 01:32 AM IST

ಮೂಲಸೌಲಭ್ಯಕ್ಕಿಂತ ಆದಾಯಕ್ಕೆ ಒತ್ತು ನೀಡುತ್ತಿರುವ ಸಾರಿಗೆ ಸಂಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ಸಂಸ್ಥೆ ಬಸ್‌ ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಬಸ್‌ ನಿಲ್ದಾಣಗಳು ಗಿಜಿಗುಡುತ್ತಿವೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ ಹೆಚ್ಚಿಸಬೇಕಿದ್ದ ಸಂಸ್ಥೆಯ ಅಧಿಕಾರಿಗಳು, ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಿ ಸಮಸ್ಯೆ ಹೆಚ್ಚುವಂತೆ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಕನ್ನಪ್ರಭ ವಾರ್ತೆ ಹಾವೇರಿ

ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ಸಂಸ್ಥೆ ಬಸ್‌ ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಬಸ್‌ ನಿಲ್ದಾಣಗಳು ಗಿಜಿಗುಡುತ್ತಿವೆ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮೂಲಸೌಕರ್ಯ ಹೆಚ್ಚಿಸಬೇಕಿದ್ದ ಸಂಸ್ಥೆಯ ಅಧಿಕಾರಿಗಳು, ಇಲ್ಲಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಿ ಸಮಸ್ಯೆ ಹೆಚ್ಚುವಂತೆ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರ ಹಾವೇರಿಗೆ ಸುಸಜ್ಜಿತ ಬಸ್ ನಿಲ್ದಾಣ ಬೇಕು ಎಂಬ ಹಲವು ವರ್ಷಗಳ ಕನಸೇನೋ ಈಡೇರಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಅತ್ಯಂತ ವಿಶಾಲವಾದ ಬಸ್‌ ನಿಲ್ದಾಣ ಹಾವೇರಿಯಲ್ಲಿರುವುದು ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ, ಇತ್ತೀಚೆಗೆ ಇಲ್ಲಿನ ಬಸ್ ನಿಲ್ದಾಣ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಬದಲು ಬರೀ ವಾಣಿಜ್ಯೀಕರಣಗೊಳ್ಳುತ್ತಿದ್ದು, ಜನತೆಗೆ ಇಕ್ಕಟ್ಟಾಗಿ ಪರಿಮಿಸುತ್ತಿದೆ.

ಹಾವೇರಿಯ ಹೃದಯ ಭಾಗದಲ್ಲಿ ಹತ್ತು ವರ್ಷಗಳ ಹಿಂದೆ ಇದ್ದ ಕಿರಿದಾದ ಬಸ್ ನಿಲ್ದಾಣ ನೆಲಸಮಗೊಳಿಸಿ ಪಕ್ಕದಲ್ಲೇ ಇದ್ದ ಡಿಪೋ ಹೊರವಲಯಕ್ಕೆ ಸ್ಥಳಾಂತರಿಸಿ ವಿಶಾಲವಾದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ನಗರ ಪ್ರದೇಶಕ್ಕೆ ಸಂಚರಿಸುವ ಬಸ್‌ಗಳು ಒಂದೆಡೆ, ಗ್ರಾಮೀಣ ಭಾಗಕ್ಕೆ ತೆರಳುವ ಬಸ್‌ಗಳನ್ನು ಮತ್ತೊಂದೆಡೆ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಇತ್ತೀಚೆಗೆ ಜನತೆಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಬರೀ ವಾಣಿಜ್ಯ ಉದ್ದೇಶಕ್ಕೆ ಮಳಿಗೆ ನಿರ್ಮಿಸುವುದು, ಖಾಲಿ ಇರುವ ಜಾಗೆಯನ್ನೂ ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ನೀಡುವ ಕೆಲಸ ನಡೆದಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಹೊರಗಡೆ ಗ್ಯಾಸ್ ಬಳಕೆಯಿಂದ ಅಪಾಯಕ್ಕೆ ಆಹ್ವಾನ: ಬಸ್ ನಿಲ್ದಾಣದ ಒಳಗೆ ಹಾಗೂ ಬಸ್ ನಿಲ್ದಾಣದ ಸುತ್ತಲೂ ಹೋಟೆಲ್‌ಗಳು, ಫಾಸ್ಟ್‌ಫುಡ್ ಸೆಂಟರ್‌ಗಳು ತಲೆ ಎತ್ತಿವೆ. ಕೆಲ ಹೋಟೆಲ್ ಹಾಗೂ ಫಾಸ್ಟ್ ಫುಡ್ ಸೆಂಟರ್‌ಗಳಂತೂ ಹೊರಗಡೆಯೇ ಗ್ಯಾಸ್ ಇಟ್ಟು ಬಳಕೆ ಮಾಡುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಇತ್ತೀಚೆಗೆ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಜನದಟ್ಟಣೆ ಹೆಚ್ಚಾಗಿರುವ ಬಸ್ ನಿಲ್ದಾಣದ ಸುತ್ತಲೂ ಅಪಾಯಕಾರಿ ರೀತಿಯಲ್ಲಿ ಗ್ಯಾಸ್‌ಬಳಕೆಗೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳಬೇಕಿದೆ.

ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆ ಹಾಗೂ ಖುಲ್ಲಾ ಜಾಗೆಯನ್ನು ಬಾಡಿಗೆ ನೀಡಲಾಗಿದೆ. ಆದರೆ, ವಾಣಿಜ್ಯ ಮಳಿಗೆ ಹಾಗೂ ಖುಲ್ಲಾ ಜಾಗೆಯನ್ನು ಆನ್‌ಲೈನ್ ಮೂಲಕ ಟೆಂಡರ್ ಪಡೆದಿರುವ ಕೆಲವರು ಯಾವ ಉದ್ದೇಶಕ್ಕೆ ಬಾಡಿಗೆ ಪಡೆದಿದ್ದಾರೋ ಅದನ್ನು ಬಿಟ್ಟು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಅಲ್ಲದೇ ತಾವು ಪಡೆದಿರುವ ಜಾಗೆಯ ವಿಸ್ತೀರ್ಣವನ್ನೂ ದುಪ್ಪಟ್ಟು ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿದ್ದರೂ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಅನಾಹುತ ಸಂಭವಿಸಿದರೆ ಯಾರು ಹೊಣೆ: ಬಸ್ ನಿಲ್ದಾಣದ ಉದ್ಘಾಟನೆ ವೇಳೆ ಮೊದಲ ಮಹಡಿಯಲ್ಲಿ ದೂರದಿಂದ ಬರುವ ಪ್ರಯಾಣಿಕರು, ಚಾಲಕರು, ನಿರ್ವಾಹಕರು ಸ್ನಾನಗೃಹ, ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿತ್ತು. ಆದರೆ, ಈಗ ಅದನ್ನು ತೆಗೆದು ಖಾಸಗಿ ಅಂಗಡಿಗಳಿಗೆ ಬಾಡಿಗೆ ನೀಡಲಾಗಿದೆ. ಅಲ್ಲದೇ ಬಸ್ ನಿಲ್ದಾಣದ ಹುಬ್ಬಳ್ಳಿ ಕಡೆ ತೆರಳುವ ಬಸ್ ನಿಲ್ಲುವ ಸ್ಥಳದ ಹೊರ ಭಾಗದಲ್ಲಿ ಪ್ರಯಾಣಿಕರು ಬೆಳಗ್ಗೆ ಹಲ್ಲು ಉಜ್ಜಲು, ಕೈತೊಳೆಯಲು ವ್ಯವಸ್ಥೆ ಮಾಡಲಾಗಿತ್ತು. ಈಗ ಆ ಜಾಗೆಯನ್ನು ಮುಚ್ಚಿ ಆ ಜಾಗದಲ್ಲಿ ಹೋಟೆಲ್‌ ತೆರೆಯುವ ಕಾರ್ಯ ನಡೆದಿದೆ. ಅಲ್ಲದೇ ಇರುವ ಜಾಗದಲ್ಲೇ ಎರಡು ಅಂತಸ್ತು ನಿರ್ಮಾಣ ಮಾಡಿ ಕಬಳಿಕೆಯಾಗುತ್ತಿರುವ ಆರೋಪ ಕೇಳಿಬಂದಿದೆ. ಇದರಿಂದಾಗಿ ಎದುರುಗಡೆಯೇ ಇರುವ ಫುಟ್‌ಪಾತ್ ಮೇಲೆ ಸಂಚಾರಕ್ಕೂ ಸಂಚಕಾರ ತರಲಿದೆ. ದ್ವಾರಬಾಗಿಲಲ್ಲೇ ಗ್ಯಾಸ್ ಇಟ್ಟು ಫಾಸ್ಟ್‌ಫುಡ್ ಸೆಂಟರ್ ನಡೆಸುವುದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಬಸ್ ನಿಲ್ದಾಣದ ಆವಣದಲ್ಲಿರುವ ಖಾಲಿ ಜಾಗವನ್ನು ವಾಣಿಜ್ಯೀಕರಣಕ್ಕೆ ಬಳಸಿಕೊಳ್ಳಲು ಇಲಾಖೆಯೇ ಅವಕಾಶ ಕಲ್ಪಿಸಿದೆ. ಯಾವ ಉದ್ದೇಶಕ್ಕಾಗಿ ಟೆಂಡರ್ ಹಾಕಿರುತ್ತಾರೆಯೋ ಅದೇ ಉದ್ದೇಶಕ್ಕೆ ಅಂಗಡಿ, ಖಾಲಿ ಜಾಗ ಬಳಸಿಕೊಳ್ಳಬೇಕು. ಅದನ್ನು ಹೊರತು ಪಡಿಸಿ ಬೇರೆ ಉದ್ದೇಶಕ್ಕೆ ಬಳಸಿದರೆ ಹಾಗೂ ನಿಗದಿತಕ್ಕಿಂತ ಹೆಚ್ಚಿನ ಸ್ಥಳವನ್ನು ಅಕ್ರಮವಾಗಿ ಬಳಕೆ ಮಾಡುತ್ತಿದ್ದರೆ ತೆರವುಗೊಳಿಸಲಾಗುವುದು ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರಸ್ವಾಮಿ ಮರಿದೇವರಮಠ

ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅಗತ್ಯ ಮೂಲಸೌಲಭ್ಯ ಕಲ್ಪಿಸುವುದನ್ನು ಬಿಟ್ಟು ಆದಾಯವನ್ನೇ ನಿರೀಕ್ಷೆ ಮಾಡಬಾರದು. ಈ ಬಗ್ಗೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಗಮನಹರಿಸದೇ ಅಕ್ರಮಕ್ಕೆ ಅವಕಾಶ ನೀಡಿದರೆ ಹೋರಾಟ ಅನಿವಾರ್ಯವಾಗಲಿದೆ ಸಾಮಾಜಿಕ ಕಾರ್ಯಕರ್ತ ಸತೀಶ ಮಡಿವಾಳರ.