ಸಾರಾಂಶ
ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತ ಶಿಕ್ಷಣ ನಿಲ್ಲಿಸಿ ಕಾಲೇಜು ಪದ್ಧತಿ ಶಿಕ್ಷಣ ಮುಂದುವರಿಸಲು ಸರ್ಕಾರ ಮುಂದಾಗಿದೆ. ಅದನ್ನು ಬಿಟ್ಟು ಈ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗುರುಕುಲ ಪದ್ಧತಿಯಂತೆ ಸಂಗೀತ ಶಿಕ್ಷಣ ನೀಡಲು ಆದೇಶಿಸಿ ಹಸ್ತಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ.
ಹುಬ್ಬಳ್ಳಿ:
ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿರುವುದು ಖಂಡನೀಯ. ಕೂಡಲೇ ಈ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಇಲ್ಲದಿದ್ದರೆ ಆ. 12ರಂದು ಎಬಿವಿಪಿ ನೇತೃತ್ವದಲ್ಲಿ ಗುರುಕುಲದ ಎದುರು ಪ್ರತಿಭಟನೆ ನಡೆಸಿ ಪರೀಕ್ಷೆಗೆ ಅಡ್ಡಿಪಡಿಸಲಾಗುವುದು ಎಂದು ಸಂಘಟನೆಯ ಕರ್ನಾಟಕ ಉತ್ತರ ರಾಜ್ಯ ಕಾರ್ಯದರ್ಶಿ ಸಚಿನ್ ಕುಳಗೇರಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2022ರಲ್ಲಿ 19 ವಿದ್ಯಾರ್ಥಿಗಳಿಗೆ 4 ವರ್ಷದ ಸಂಗೀತ ಶಿಕ್ಷಣಕ್ಕಾಗಿ ಪ್ರವೇಶಾತಿ ನೀಡಲಾಗಿತ್ತು. ಇದರಲ್ಲಿ 2 ವರ್ಷ ಪೂರ್ಣಗೊಂಡಿದ್ದು, ಈಗ ಕಳೆದ 2 ತಿಂಗಳಿಂದ ಈ ಗುರುಕುಲ ಸ್ಥಗಿತಗೊಳಿಸಲಾಗಿದೆ. ಇನ್ನೂ ಎರಡು ವರ್ಷ ಶಿಕ್ಷಣ ಬಾಕಿ ಇದ್ದು ಗುರುಕುಲ ಪದ್ಧತಿ ಹಾಗೂ ಗುರುೃಶಿಷ್ಯ ಪರಂಪರೆಯಲ್ಲಿಯೇ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಗುರು-ಶಿಷ್ಯ ಪರಂಪರೆಯಲ್ಲಿ ಸಂಗೀತ ಶಿಕ್ಷಣ ನಿಲ್ಲಿಸಿ ಕಾಲೇಜು ಪದ್ಧತಿ ಶಿಕ್ಷಣ ಮುಂದುವರಿಸಲು ಸರ್ಕಾರ ಮುಂದಾಗಿದೆ. ಅದನ್ನು ಬಿಟ್ಟು ಈ ಗುರುಕುಲವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗುರುಕುಲ ಪದ್ಧತಿಯಂತೆ ಸಂಗೀತ ಶಿಕ್ಷಣ ನೀಡಲು ಆದೇಶಿಸಿ ಹಸ್ತಾಂತರಿಸಬೇಕು ಎಂದರು.14 ವಿದ್ಯಾರ್ಥಿಗಳು ಕಳೆದ 10 ದಿನಗಳಿಂದ ಗುರುಗಳು ಇಲ್ಲದೆ ಗುರುಕುಲದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಊಟ ನಿಲ್ಲಿಸಿದ್ದು ನೀರು ಹಾಗೂ ವಿದ್ಯುತ್ ವ್ಯವಸ್ಥೆ ಸರಿಯಾಗಿ ನೀಡುತ್ತಿಲ್ಲ. ಕೊಠಡಿ ಖಾಲಿ ಮಾಡುವಂತೆ ಸೂಚಿಸಿರುವುದು ಖಂಡೀನಿಯ ಎಂದರು.
ಗುರುಕುಲದಲ್ಲಿಯೇ ಸಂಗೀತ ಶಿಕ್ಷಣ ಮುಂದುವರಿಸುವ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದೇ ಇದ್ದರೆ ಸೋಮವಾರ ಗುರುಕುಲದಲ್ಲಿ ನಡೆಯುತ್ತಿರುವ ಪರೀಕ್ಷೆಗೆ ಅವಕಾಶ ನೀಡದೇ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಕಾಲೇಜು ಮರುಪ್ರಾರಂಭಿಸಿ:
ಸರ್ಕಾರಿ ಅನುದಾನಿತ ಬಿವಿಬಿ ಎಂಜನಿಯರಿಂಗ್ ಕಾಲೇಜು 240 ಸೀಟ್‌ಗಳನ್ನು ಖಾಸಗಿಕರಣಗೊಳಿಸಿ ಅವ್ಯವಹಾರ ನಡೆಸಿದೆ. ಆದಷ್ಟು ಬೇಗನೆ ಇಲ್ಲಿ ನಡೆಯುತ್ತಿರುವ ಅವ್ಯವಹಾರದ ತನಿಖೆ ನಡೆಸುವಂತೆ ಈ ಕುರಿತು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಂಬಂಧಿಸಿದ ನಾಯಕರಿಗೆ ಮನವಿ ಸಲ್ಲಿಸಲಾಗಿದೆ. ಹಾಗೂ ಸರ್ಕಾರಿ ಅನುದಾನಿತ ಬಿವಿಬಿ ಎಂಜನಿಯರಿಂಗ್ ಕಾಲೇಜನ್ನು ಮರು ಪ್ರಾರಂಭಿಸುವ ಮೂಲಕ ನೂರಾರು ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸಿಕೊಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಿದ್ಧಾರ್ಥ್ ಕೋರಿ, ಗುರುಕುಲ ವಿದ್ಯಾರ್ಥಿಗಳಾದ ಪ್ರತೀಕ ಜೇವರ್ಗಿಕರ, ಶಿವು ಸ್ವಾಮಿ ಸೇರಿದಂತೆ ಹಲವರಿದ್ದರು.