ಅಬ್ಬಿ ಫಾಲ್ಸ್ ಸಂಪರ್ಕ ರಸ್ತೆ ಕೆಸರುಮಯ

| Published : Jul 29 2024, 12:49 AM IST

ಸಾರಾಂಶ

ಅಬ್ಬಿಫಾಲ್ಸ್‌ಗೆ ತೆರಳುವ ವಾಹನಗಳು ಸೇರಿದಂತೆ ಜನ ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಬ್ಬಿ ಫಾಲ್ಸ್ ಗೆ ತೆರಳುವ ವಾಹನಗಳು ಸೇರಿದಂತೆ ಜನ ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು ಮಡಿಕೇರಿಯಿಂದ ಮಾಂದಲ್ ಪಟ್ಟಿ ಹಾಗೂ ಅಬ್ಬಿ ಫಾಲ್ಸ್ ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಚಿತ್ರಣವಿದು. ಇತ್ತ ಭಗವತಿ ನಗರ ಸೇರಿದಂತೆ ನಗರದ ಹಲವು ರಸ್ತೆಗಳ ಪರಿಸ್ಥಿತಿ ಕೂಡ ಇದೇ ರೀತಿ ಅವಸ್ಥೆಯಿಂದ ಕೂಡಿದೆ.

ಪ್ರಮುಖ ಪ್ರವಾಸಿ ತಾಣಕ್ಕೆ ತೆರಳುವ ಈ ಮಾರ್ಗ ಕೆಸರು ಗದ್ದೆಯಾಗಿ ಪರಿವರ್ತನೆಯಾಗಿದ್ದು, ರಸ್ತೆಯಲ್ಲಿ ಓಡಾಟ ದುಸ್ತರವಾಗಿದೆ. ನಡೆದಾಡುವುದು ಕೂಡ ಕಷ್ಟಕರವಾಗಿರುವ ಇದೇ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ದೇಶ ವಿದೇಶದಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ರಸ್ತೆಯ ದುಸ್ಥಿತಿ ಕಂಡು ಈ ರಸ್ತೆ ಸಹವಾಸವೇ ಬೇಡ ಎಂದು ಹಿಡಿಶಾಪ ಹಾಕಿ ಮುನ್ನಡೆದಿದ್ದಾರೆ. ಇತ್ತ ಅಟೋ ಚಾಲಕರ ಪಾಡಂತೂ ಹೇಳತೀರದು.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಸಿ, ರಸ್ತೆಗೆ ಡಾಂಬರೀಕರಣದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬುವುದು ಸಾರ್ವಜನಿಕರು ಆಗ್ರಹಿಸಿದ್ದಾರೆ.