ತರಹೇವಾರಿ ತಳಿಗಳಲ್ಲೆಲ್ಲಾ ಭರ್ಪೂರ ಹೂವು, ಕಾಯಿ

| Published : Nov 18 2024, 12:03 AM IST

ಸಾರಾಂಶ

ಕಲಬುರಗಿ ರೈತರಲ್ಲಿ ಸಂತಸ, ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 7 ತಂಡಗಳು ರಚಿಸಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಸಂಚಾರ ಕೈಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಂದಾಜು 6 ಲಕ್ಷ ಹೆಕ್ಟೇರ್‌ನಷ್ಟು ತೊಗರಿ ಬಿತ್ತನೆಯಾಗಿರುವ ಜಿಲ್ಲೆಯಾದ್ಯಂತ ವಾತಾವರಣ ಚೆನ್ನಾಗಿದೆ. ಗುಲ್ಯಾಳ, ಟಿಎಸ್‌3 ಆರ್‌, ಜಿರ್‌ಜಿ 811, 152 ತಳಿಗಳಲ್ಲಿಯೂ ಹೂವು, ಕಾಯಿ ಕಂಡಿದೆ. ಹೀಗಾಗಿ ಉತ್ತಮ ಇಳುವರಿಯ ಕನಸಿನೊಂದಿಗೆ ಜಿಲ್ಲೆಯ ರೈತರ ಮನದಲ್ಲಿ ಸಂಭ್ರಮ ಮನೆಮಾಡಿದೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 7 ತಂಡಗಳು ರಚಿಸಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ಸಂಚಾರ ಕೈಗೊಂಡಿದ್ದಾರೆ.

ಈ ಕುರಿತಂತೆ ಜಂಟಿ ಕೃಷಿ ನಿರ್ದೇಶಕರಾದ ಸಮದ್ ಪಟೇಲ್ ಹೇಳಿಕೆ ನೀಡಿದ್ದು, ತೊಗರಿ ಸಂಪೂರ್ಣವಾಗಿ ಹೂವಾಡುವ ಹಂತದಲ್ಲಿದ್ದು, ಕೆಲೆವಡೆ ಕಾಳು ಕಟ್ಟುವ ಹಂತದಲ್ಲಿದೆ ಎಂದಿದ್ದಾರೆ.

ಅಲ್ಪಾವಧಿ ತಳಿಗಳಾದ ಟಿಎಸ್‌3ಆರ್‌ ಮತ್ತು ಗುಲ್ಯಾಳ ತಳಿಗಳಲ್ಲಿ ಕಾಳು ಕಟ್ಟಿದ್ದು, ಕಾಳುಗಳು ಗಟ್ಟಿಯಾಗುವ ಹಂತದಲ್ಲಿವೆ. ಮಧ್ಯಮಾವಧಿ ಜಿಆರ್‌ಜಿ 811 ಮತ್ತು 152 ತಳಿಗಳಲ್ಲಿ ಸಹ ಕಾಳು ಕಟ್ಟಿರುವುದು ಕಂಡು ಬಂದಿದೆ. ತಡವಾಗಿ ಬಿತ್ತನೆಯಾದಲ್ಲಿಯೂ ಸಹ ಬೆಳೆ ಹೂವಾಡುವ ಹಂತದಲ್ಲಿದೆ.

ತೊಗರಿ ಬೆಳೆಯಲ್ಲಿ ಕಳೆದ ಒಂದು ವಾರದಿಂದ ಶೇ.30ಕ್ಕಿಂತಲೂ ಹೆಚ್ಚಾಗಿ ಹೂವು ಉದುರುತ್ತಿರುವುದು ಕಂಡು ಬಂದಿದೆ. ಬೆಳಗಿನ ಜಾವ ಮಂಜು ಬೀಳುತ್ತಿರುವ ಕಾರಣ ಎಲೆ, ಕಾಂಡ ಹಾಗೂ ದೇಟುಗಳ ಮೇಲೆ ಅಲಟನೇರಿಯ ಎಲೆ ಚುಕ್ಕೆ ರೋಗದ ಬಾಧೆ ಉಂಟಾಗುತ್ತಿದ್ದು, ಹೂವು ಮತ್ತು ಕಾಯಿ ಉದುರುತ್ತಿವೆ.

ರೋಗದ ನಿರ್ವಹಣೆ:

ಕಾರ್ಬೆಂಡೆಜಿಮ್ 50 ಡಬ್ಲೂಪಿ 1 ಗ್ರಾಂ/ಲೀ. ನೀರಿಗೆ ಅಥವಾ ಹೆಕ್ಸಾಕೋನಾ ಜೋಲ 5 ಇ.ಸಿ. 1ಮೀ/ಲೀ ನೀರಿಗೆ ಬೆರೆಸಿ ಸಿಂಪಡಣೆ ಮಾಡುವಂತೆ ರೈತರಿಗೆ ಸೂಚಿಸಲಾಗುತ್ತಿದೆ. ಬೆಳೆಗೆ ಲಘು ಪೋಷಕಾಂಶಗಳ ಮಿಶ್ರಣವನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂ. ಹಾಗೂ ಸಂಯುಕ್ತ ರಸಗೊಬ್ಬರವಾದ 19:19:19ನ್ನು 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದರಿಂದ ಬೆಳೆಯಲ್ಲಿ ಮತ್ತೆ ಹೂವಾಡುವ ಸಾಧ್ಯತೆ ಹೆಚ್ಚಾಗಲಿದೆ.

ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಇರದೆ ಹೂವು ಉದುರುತ್ತಿರುವ ಬೆಳೆಗೆ ಎನ್.ಎ. ಸಸ್ಯ ಪ್ರಚೋದಕವನ್ನು 0.25 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಣೆ ಮಾಡುವುದರಿಂದ ಹೂಗಳನ್ನು ರಕ್ಷಿಸಬಹುದು.

ಜೇಡ ಬಲೆ ಕಟ್ಟಿರುವುದು ಹಾಗೂ ಎಲೆಯಲ್ಲಿ ಸುರುಳಿ ಸುತ್ತಿಕೊಂಡಿರುವ ಕೀಟದ ಬಾಧೆ ಕಂಡು ಬಂದಿದ್ದಲ್ಲಿ ಪ್ರೋಫೆನೋಫಾಸ್ 50 ಇ.ಸಿ. 1 ಮಿ.ಲೀ. ಅಥವಾ ಕಾರಟಾಪ ಹೈಡ್ರೋಕ್ಲೋರೈಡ್ 50 ಎಸ್‌.ಪಿ. 1ಗ್ರಾಂ.ನಂತೆ ಪ್ರತಿ ಲೀಟರ್ ನೀರಲ್ಲಿ ಬೆರೆಸಿ ಸಿಂಪಡಣೆ ಕೈಗೊಳ್ಳುವುದು ಸೂಕ್ತವಾಗಿದೆ.

ಬೆಳೆಯಲ್ಲಿ ಕಾಯಿ ಕೊರಕ ಕೀಟದ ಮೊಟ್ಟೆಗಳು ಹಾಗೂ ಮರಿಗಳ ಬಾಧೆ ಕಂಡು ಬರುತ್ತಿದ್ದು, ರೈತರು ಮುಂಜಾಗೃತ ಕ್ರಮವಾಗಿ ಪ್ರತಿ ಎಕರೆಗೆ 8 ಮೊಹಕ ಬಲೆಗಳನ್ನು ಬಳಸುವುದು ಸೂಕ್ತ. ಈ ಕೀಟ ಪ್ರಾರಂಭದ ಹಂತದಲ್ಲಿರುವುದರಿಂದ ಬೇವಿನ ಎಣ್ಣೆಯನ್ನು ಪ್ರತಿ ಲೀಟರ್ ನೀರಿಗೆ 5 ಮಿ.ಲೀ.ಯಂತೆ ಬಳಸಿ ಸಿಂಪಡಣೆ ಮಾಡುವುದು ಸೂಕ್ತವಾಗಿದೆ. ಕೀಟಗಳು ದೊಡ್ಡದಾಗಿದ್ದಲ್ಲಿ ಇಮಾಮೆಕ್ಟಿನ್ ಬೆಂಜೋಯೆಟ್ 5 ಡಬ್ಲೂಜಿಯನ್ನು ಪ್ರತಿ ಲೀ. ನೀರಿಗೆ 5 ಗ್ರಾಂ.ನಂತೆ ಬೆರೆಸಿ ಸಿಂಪಡಣೆ ಕೈಗೊಳ್ಳಬೇಕು.

ಅಲ್ಲಲ್ಲಿ ಕಾಂಡಮಚ್ಚೆ ರೋಗ ಬಾಧೆ:

ಕೆಲವೊಂದು ಕ್ಷೇತ್ರಗಳಲ್ಲಿ ಬೆಳೆಯು ಮೈಕ್ರೋಫೊಮಿನ್ ಕಾಂಡ ಮಚ್ಚೆ ರೋಗ ಹಾಗೂ ಒಣ ಬುಡ ಕೊಳೆ ರೋಗಧ ಬಾಧೆಗೆ ತುತ್ತಾಗಿರುವುದನ್ನು ಶೇ.10 ರಿಂದ 20ರಷ್ಟು ಗಮನಿಸಲಾಗಿದೆ. ಒಣ ಬೇಸಾಯದಲ್ಲು ಬೆಳೆದ ಟಿ.ಎಸ್. 3 ಆರ್. ತಳಿಯಲ್ಲಿ ಹೆಚ್ಚಿನ ಬಾಧೆ ಕಂಡು ಬಂದಿದೆ.

ರೋಗದ ನಿರ್ವಹಣೆಯನ್ನು ಮ್ಯಾಂಕೊಜೆಬ್ + ಕಾರ್ಬೆಂಡೆಜಿಮ್ ಸಂಯುಕ್ತ ಶೀಲಿಂದ್ರನಾಶಕವನ್ನು 3ಗ್ರಾಂ/ ಲೀ. ನೀರಿಗೆ ಬೆರೆಸಿ ಗಿಡದ ಕಾಂಡಗಳ ಮೇಲೆ ಸಂಪೂರ್ಣವಾಗಿ ಸಿಂಪಡಣೆ ಮಾಡಲು ತಿಳಿಸಲಾಗಿದೆ. ರೋಗ ಬಾರದೇ ಇದ್ದಲ್ಲೂ ಸಹ ಇದನ್ನು ಮುಂಜಾಗ್ರತ ಕ್ರಮವಾಗಿ ಕೈಗೊಳ್ಳುವುದು ಸೂಕ್ತ.

ಮಣ್ಣಿನಲ್ಲಿನ ತೇವಾಂಶ ಕಾಪಾಡಬೇಕು. ನೀರಿನ ಲಭ್ಯತೆ ಇದ್ದಲ್ಲಿ ತೊಗರಿ ಬೆಳೆಯಲ್ಲಿ ಕಾಳು ಕಟ್ಟುವ ಹಂತದಲ್ಲಿ ಒಂದು ಬಾರಿ ನೀರನ್ನು ಕೊಡುವುದರಿಂದ ಇಳುವರಿಯನ್ನು ಹೆಚ್ಚಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್‌ ಪಟೇಲ್‌ ಹೇಳಿದ್ದಾರೆ.