ಬಂಜಾರ ಸಮಾಜ ಅಧ್ಯಕ್ಷರಿಂದ ಸಮಾಜ ದುರ್ಬಳಕೆ

| Published : Apr 24 2025, 02:07 AM IST

ಸಾರಾಂಶ

ಚನ್ನಗಿರಿ: ತಾಲೂಕು ಬಂಜಾರ ಸಮಾಜ ಅಧ್ಯಕ್ಷ ಬಿ.ಎನ್.ವೀರೇಶ್ ನಾಯ್ಕ್ ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಾಲೂಕು ಬಂಜಾರ ಸಮಾಜದ ಮುಖಂಡ, ಕರೇಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ರಾಜು ನಾಯ್ಕ್ ಹೇಳಿದರು.

ಚನ್ನಗಿರಿ: ತಾಲೂಕು ಬಂಜಾರ ಸಮಾಜ ಅಧ್ಯಕ್ಷ ಬಿ.ಎನ್.ವೀರೇಶ್ ನಾಯ್ಕ್ ತಮ್ಮ ಸ್ವಹಿತಾಸಕ್ತಿಗಳನ್ನು ಈಡೇರಿಸಿಕೊಳ್ಳಲು ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ತಾಲೂಕು ಬಂಜಾರ ಸಮಾಜದ ಮುಖಂಡ, ಕರೇಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಪಿ. ರಾಜು ನಾಯ್ಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಸಮಾಜದ ಅಧ್ಯಕ್ಷರಾಗಿರುವ ವೀರೇಶ್ ನಾಯ್ಕ್ ಅವರು ಕ್ಷೇತ್ರದ ಶಾಸಕರು ಅನಧಿಕೃತ ಮತದಾರರ ಪಟ್ಟಿಯನ್ನು ಅವರ ಅನುಯಾಯಿಗಳ ಕಳುಹಿಸಿ ಜಾತಿಗಣತಿ ಮಾಡಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮತದಾರರ ಹೆಸರಿನ ಮುಂದೆ ಒಬಿಸಿ ಎಂದು ನಮೂದಿಸಲು ತಿಳಿಸಿದ್ದಾರೆ. ಯಾರೇ ಬಂದು ಕೇಳಿದರೂ ನೀವು ಮಾಹಿತಿ ನೀಡದೇ ತಿರಸ್ಕರಿಸಬೇಕು ಎಂಬುದೊಂದು ಮೆಸೇಜ್ ಸಮಾಜದ ವಾಟ್ಸ್ ಗ್ರೂಪ್‌ಗಳಲ್ಲಿ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಪ್ರಶ್ನೆ ಮಾಡಿದ ನನಗೆ ರಾಜು ಅವರು ಹುಷಾರ್ ಎಂದು ಹೇಳಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಮೇಲೂ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸಮಾಜದ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದ್ದರು. ಈಗಲೂ ಹಾಲಿ ಶಾಸಕ ಶಿವಗಂಗಾ ಬಸವರಾಜ್ ಮೇಲೂ ಸಮಾಜವನ್ನು ಎತ್ತಿಕಟ್ಟುವ ಪಿತೂರಿ ನಡೆಸಿದ್ದಾರೆ. ಸಮಾಜದ ಜನರು ಪ್ರಜ್ಞಾವಂತರಾಗಿದ್ದು, ಸಲ್ಲದ ಆರೋಪ ಸರಿಯಲ್ಲ ಎಂದರು.

ಬಂಜಾರ ಸಮಾಜದ ಹೆಸರನ್ನು ಹೇಳಿಕೊಳ್ಳುತ್ತ ಸಮಾಜದ ಬಡವರಿಗೆ ಸರ್ಕಾರದ ಯಾವುದೇ ಯೋಜನೆಗಳ ಬಗ್ಗೆ ಮಾಹಿತಿ, ಸೌಲಭ್ಯಗಳನ್ನು ಕೊಡಿಸದೇ ಇವರೊಬ್ಬರೇ ಎಲ್ಲ ಪಡೆದುಕೊಳ್ಳುತ್ತಿದ್ದಾರೆ. ಈಗಿನ ಶಾಸಕರು ಬಂಜಾರ ಸಮಾಜದ ಮೇಲೆ ಅಪಾರ ಅಭಿಮಾನದಿಂದ ಕೆಲಸ ಮಾಡುತ್ತಿದ್ದಾರೆ. ಅಂತಹ ಶಾಸಕರ ತೇಜೋವಧೆ ಸಲ್ಲದು. ಸಾಧ್ಯವಾದರೆ ಸಮಾಜವನ್ನ ಬೆಳೆಸುವ ಕೆಲಸ ಮಾಡಬೇಕೇ ಹೊರತು, ಸಮಾಜದ ಹೆಸರನ್ನು ಹೇಳಿಕೊಂಡು ಸಮಾಜದಲ್ಲಿರುವ ಬಡವರನ್ನು ಶೋಷಣೆ ಮಾಡಬಾರದು ಎಂದರು.

ಪ್ರಸ್ತುತ ತಾಲೂಕಿನಲ್ಲಿ 7 ತಾಲೂಕುಮಟ್ಟದ ಅಧಿಕಾರಿಗಳು ನಮ್ಮ ಬಂಜಾರ ಸಮಾಜದವರೇ ಇದ್ದಾರೆ. ಶಾಸಕರ ಆಪ್ತ ವಲಯದಲ್ಲಿರುವ ಬಂಜಾರ ಸಮಾಜದ ಕೆಲ ಮುಖಂಡರಿಗೆ ನಮ್ಮ ಸಮಾಜದ ತಾಲೂಕು ಅಧ್ಯಕ್ಷರಾಗಿರುವ ವೀರೇಶ್ ನಾಯ್ಕ್ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಮುಜುಗರ ತಂದಿದ್ದಾರೆ. ಜನಪ್ರತಿನಿಧಿಗಳಿಗೆ ಬೈದರೆ ದೊಡ್ಡವರಾಗಬಹುದು ಎಂಬ ಮನಸ್ಥಿತಿಯಿಂದ ಮೊದಲು ಹೊರಬರಬೇಕು. ಸಮುದಾಯದಲ್ಲಿ ನಿರುದ್ಯೋಗ ನಿವಾರಣೆಗೆ ಶ್ರಮಿಸಲಿ ಎಂದು ಸಲಹೆ ನೀಡಿದರು.

ತಾಲೂಕು ಮುಖಂಡರಾದ ಕರೇಕಟ್ಟೆ ಪರಮೇಶ್ವರ ನಾಯ್ಕ್, ಕಂಚಿಗನಾಳ್ ಚಂದ್ರ ನಾಯ್ಕ್, ಸುರೇಶ್ ನಾಯ್ಕ್, ಚಂದ್ರಶೇಖರ ನಾಯ್ಕ್ ಹಾಜರಿದ್ದರು.