ಕನ್ನಡ ತಾಯಿಗೆ ಭಾರವಾದ ಅಕಾಡೆಮಿಗಳು

| Published : Jan 22 2025, 12:30 AM IST

ಸಾರಾಂಶ

ಕನ್ನಡ ಉಳಿಸುವ, ಬೆಳೆಸುವ ಕಾರ್ಯವನ್ನು ಅಕಾಡೆಮಿಗಳು ಮರೆತಂತಿವೆ.

ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಮರೆತ ಅಕಾಡೆಮಿಗಳು

ಪ್ರಶಸ್ತಿ, ಪುರಸ್ಕಾರ, ಕಾರ್ಯಕ್ರಮ ನಿರ್ವಹಣೆ ವೆಚ್ಚದ್ದೇ ದೊಡ್ಡ ಹೊರೆ

ಓಬಿರಾಯನ ಕಾಲದಂತೆಯೇ ಮುಂದುವರೆದ ಅಕಾಡೆಮಿಗಳು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ರಾಜ್ಯದ ಶೇ. 70ರಷ್ಟು ಮಕ್ಕಳು ಆಂಗ್ಲಮಾಧ್ಯಮ ಶಾಲೆಯಲ್ಲಿ ಓದುತ್ತಾ ಕನ್ನಡದಿಂದ ದೂರವಾಗುತ್ತಿದ್ದಾರೆ. ಕನ್ನಡ ನೆಲದಲ್ಲಿಯೂ ಅನ್ಯ ಭಾಷಿಕರ ಲಗ್ಗೆ ಹೆಚ್ಚುತ್ತಲೇ ಇದೆ. ಬೆಳೆದ ತಂತ್ರಜ್ಞಾನದಲ್ಲಿಯೂ ಕನ್ನಡ ಅಷ್ಟಕ್ಕೆ ಎನ್ನುವಂತಾಗಿದ್ದರಿಂದ ಕನ್ನಡ ತಾಯಿ ಸಂಕಷ್ಟದಲ್ಲಿದ್ದಾಳೆ. ಕನ್ನಡ ಉಳಿಸುವ, ಬೆಳೆಸುವ ಕಾರ್ಯವನ್ನು ಅಕಾಡೆಮಿಗಳು ಮರೆತಂತಿವೆ.

ಹೌದು, ಜಗತ್ತಿನಾದ್ಯಂದ ಆಗುತ್ತಿರುವ ಸಂಶೋಧನೆ, ಬೆಳೆವಣಿಗೆ, ವಿಜ್ಞಾನದಲ್ಲಾಗುತ್ತಿರುವ ಆವಿಷ್ಕಾರಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಆಗುತ್ತಲೇ ಇಲ್ಲ. ಹೀಗಾಗಿ ಪಂಪ, ರನ್ನ ಕಾಲದಲ್ಲಿದ್ದ ಕನ್ನಡ ಶ್ರೀಮಂತಿಕೆ ಈಗಿಲ್ಲವಾಗುತ್ತಿದೆ. ಪರಿಣಾಮ ಕನ್ನಡಿಗರೇ ಕನ್ನಡದಿಂದ ದೂರವಾಗಿ ಆಂಗ್ಲದ ನೆರಳಿಗೆ ಹೋಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಂಡು, ಕನ್ನಡ ಶ್ರೀಮಂತಗೊಳಿಸುವ ಕಾರ್ಯ ಮಾಡಬೇಕಾಗಿದ್ದ ಕನ್ನಡ ನೆಲದ ನಾನಾ ಅಕಾಡೆಮಿಗಳೇ ಕನ್ನಡ ತಾಯಿಗೆ ಭಾರವಾಗುತ್ತಿವೆ.

ಹತ್ತಾರು ಕೋಟಿ ರುಪಾಯಿ:

ರಾಜ್ಯದಲ್ಲಿ ಕನ್ನಡ ಉಳಿಸಲು ಮತ್ತು ಬೆಳೆಸುವುದಕ್ಕಾಗಿ ನಾಲ್ಕು ಪ್ರಾಧಿಕಾರಗಳು, ಹತ್ತು ಹಲವು ಅಕಾಡೆಮಿಗಳು ಇವೆ. ಇವೆಲ್ಲವೂ ಸಹ ಮಾಡುತ್ತಿರುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೆಲಸವನ್ನು ಎನ್ನುವುದು ಗಮನಾರ್ಹ ಸಂಗತಿ.

ರಾಜಕೀಯ ಕೃಪಾಪೋಷಿತ ಸಾಹಿತಿಗಳಿಗೆ ಪ್ರಶಸ್ತಿ ನೀಡುವುದು, ನಗದು ಬಹುಮಾನ ನೀಡುವುದು ಮಾಡುತ್ತಿವೆ. ಇದಕ್ಕಾಗಿ ಕೋಟಿ ಕೋಟಿ ರುಪಾಯಿ ವೆಚ್ಚ ಮಾಡುತ್ತಿವೆ. ಪ್ರತಿ ವರ್ಷ ಪ್ರಶಸ್ತಿಯ ನಗದು ಪುರಸ್ಕಾರಕ್ಕೇ ಬರೋಬ್ಬರಿ ₹25 ಕೋಟಿಗೂ ಅಧಿಕ ವೆಚ್ಚವಾಗುತ್ತದೆ. ಇದರ ಜೊತೆಗೆ ಪುಸ್ತಕ ಬಹುಮಾನ, ಪುಸ್ತಕ ಮುದ್ರಣ ಸೇರಿದಂತೆ ಉಪನ್ಯಾಸ, ವಿಚಾರ ಸಂಕಿರಣ ಸೇರಿದಂತೆ ಸಾಲು ಸಾಲು ಕಾರ್ಯಕ್ರಮಗಳಿಗಾಗಿಯೇ ವೆಚ್ಚ ಮಾಡಲಾಗುತ್ತಿದೆ. ಹೀಗೆ ವೆಚ್ಚ ಮಾಡಿದ ಹಣ ಎಷ್ಟರಮಟ್ಟಿಗೆ ಸದ್ಬಳಕೆಯಾಗುತ್ತದೆ. ಮುದ್ರಿತ ಪುಸ್ತಕಗಳು ಕನ್ನಡವನ್ನು ಸಮೃದ್ಧಗೊಳಿಸುತ್ತಿವೆಯೇ ಎಂದರೆ ಅದಕ್ಕೆ ಉತ್ತರವೇ ಇಲ್ಲ.

ಅಕಾಡೆಮಿಗಳು ಒಂದೇ ಮಾದರಿ:

ಇರುವ ಅಷ್ಟೂ ಅಕಾಡೆಮಿಗಳು, ಪ್ರಾಧಿಕಾರಿಗಳ ಕೆಲಸದ ಮಾದರಿ ಒಂದೇ ಆಗಿದೆ. ಪ್ರಶಸ್ತಿ ನೀಡುವುದು, ಪುಸ್ತಕ ಬಹುಮಾನ, ಮುದ್ರಣ, ವಿಚಾರ ಸಂಕಿರಣ, ಉಪನ್ಯಾಸ ಕಾರ್ಯಕ್ರಮಗಳನ್ನೇ ಮಾಡುತ್ತಿವೆ. ಅಳಿದು ಹೋಗುತ್ತಿರುವ ಕನ್ನಡವನ್ನು ಸಮೃದ್ಧಗೊಳಿಸುವ, ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿಲ್ಲ. ಅಷ್ಟೇ ಅಲ್ಲ ಕನ್ನಡ ಭಾಷೆ ತಂತ್ರಜ್ಞಾನದಲ್ಲಿ ಗಾವುದ ದೂರ ಎನ್ನುವಂತೆ ಇದೆ. ಈಗಲೂ ಸಹ ಕನ್ನಡಕ್ಕೊಂದು ಯುನಿಕೋಡ್ ಎನ್ನುವ ತಂತ್ರಜ್ಞಾನ ಇಲ್ಲ. ಆ ಲಿಪಿ ಇಲ್ಲಿ ಬರುವುದಿಲ್ಲ, ಈ ಲಿಪಿ ಅಲ್ಲಿ ಬರುವುದಿಲ್ಲ. ಆಂಗ್ಲ ಭಾಷೆಯಂತೆ ಸರ್ವವ್ಯಾಪಿಯಾಗಿ ಬಳಕೆಯಾಗುವುದಕ್ಕೆ, ತೆರೆದುಕೊಳ್ಳುವುದಕ್ಕೆ ಆಗುತ್ತಿಲ್ಲ.

ಅಷ್ಟೇ ಅಲ್ಲ, ಕನ್ನಡಕ್ಕೊಂದು ವಿಜ್ಞಾನದ ನಿಘಂಟು ಇಲ್ಲ. ಅನೇಕ ಕನ್ನಡ ಪದಗಳೇ ಮಾಯವಾಗುತ್ತಿವೆ. ಹೊಸ ಆವಿಷ್ಕಾರಗಳಿಗೆ ಕನ್ನಡ ಭಾಷೆಯ ಪದಗಳು ಹುಟ್ಟಿಕೊಳ್ಳುತ್ತಿಲ್ಲ. ಮುದ್ದಾಗಿರುವ ಕನ್ನಡದ ಅಂಕಿಗಳು ಮರೆತು ಹೋಗಿವೆ. ಅನಕ್ಷರಸ್ಥರು ಕೂಡಾ ಆಂಗ್ಲ ಭಾಷೆಯ ಅಂಕಿಗಳನ್ನೇ ಬಳಕೆ ಮಾಡುತ್ತಾರೆ. ಈಗಾಗಲೇ ಕನ್ನಡ ಅಂಕಿಗಳು ಕಣ್ಮೆರೆಯಾಗಿಯೇ ಬಿಟ್ಟಿವೆ. ಕನ್ನಡ ಭಾಷೆಯ ಪುಸ್ತಕದಲ್ಲಿಯೇ ಕನ್ನಡ ಅಂಕಿಗಳು ಇಲ್ಲವಾಗಿವೆ.

ಇದೆಲ್ಲದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಪ್ರಾಧಿಕಾರಗಳು, ಅಕಾಡೆಮಿಗಳು ಕೇವಲ ಪ್ರಶಸ್ತಿ , ಪುರಸ್ಕಾರದಲ್ಲಿಯೇ ಮುಳುಗಿ ಹೋಗಿವೆ. ಇಂಥ ಪ್ರಶಸ್ತಿ ಕೊಡುವ ಕಾರ್ಯ ಮಾಡುವ ಅಕಾಡೆಮಿಗಳಿಗೆ ಕೋಟಿ ಕೋಟಿ ರುಪಾಯಿ ವ್ಯಯ ಮಾಡಬೇಕು. ರಾಜಕೀಯ ಕೃಪಾಪೋಷಿತ ಸಾಹಿತಿಗಳಿಗೆ ಆಶ್ರಯ ನೀಡುವುದಕ್ಕಾಗಿಯೇ ಅಕಾಡೆಮಿಗಳು ಇರುವಂತಾಗಿರುವುದು ಮಾತ್ರ ಬೇಸರದ ಸಂಗತಿ ಎನ್ನುತ್ತಿದ್ದಾರೆ ಕನ್ನಡಪ್ರೇಮಿಗಳು.ವೃದ್ಧಾಶ್ರಮಗಳಂತೆ ಗೋಚರ:

ಅಕಾಡೆಮಿಗಳು, ಪ್ರಾಧಿಕಾರಿಗಳು ವೃದ್ಧಾಶ್ರಮಗಳಂತೆ ಗೋಚರಿಸುತ್ತಿವೆ. ಸರ್ಕಾರಿ ನೌಕರಿಯಿಂದ ನಿವೃತ್ತಿಯಾದವರು, ವಯಸ್ಸಾದವರೇ ತುಂಬಿಕೊಂಡಿದ್ದಾರೆ. ಕನ್ನಡವನ್ನು ಬೆಳೆಸುವ ಯುವ ಪೀಳಿಗೆಗೆ ಜಾಗವೇ ಇಲ್ಲದಂತೆ ಆಗಿದೆ.

ಕೇವಲ ಸೃಜನಶೀಲ ಸಾಹಿತ್ಯವನ್ನೇ ಪೋಷಿಷಲಾಗುತ್ತದೆ. ಆದರೆ, ವೃತ್ತಿಪರ ಸಾಹಿತ್ಯ, ಪಠ್ಯ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಗಣಕ ಯಂತ್ರದ ಸಾಹಿತ್ಯವನ್ನು ಪ್ರೋತ್ಸಾಹಿಸುವ ಕಾರ್ಯ ಆಗುತ್ತಿಲ್ಲ.

ಪ್ರಾಧಿಕಾರಿಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕನ್ನಡ ಪುಸ್ತಕ ಪ್ರಾಧಿಕಾರ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಗಡಿ ಅಭಿವೃದ್ಧಿ ಪ್ರಾಧಿಕಾರ

ಅಕಾಡೆಮಿಗಳು

ಕನ್ನಡ ಸಾಹಿತ್ಯ ಅಕಾಡೆಮಿ

ಕರ್ನಾಟಕ ನಾಟಕ ಅಕಾಡೆಮಿ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ಕರ್ನಾಟಕ ಲಲಿತಾಕಲಾ ಅಕಾಡೆಮಿ

ಕರ್ನಾಟಕ ಜಾನಪದ ಅಕಾಡೆಮಿ

ಕರ್ನಾಟಕ ಯಕ್ಷಗಾನ ಅಕಾಡೆಮಿ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ

ಕರ್ನಾಟಕ ಬಯಲಾಟ ಅಕಾಡೆಮಿ

ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ

ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ