ಸಾರಾಂಶ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕೊತ್ತನಹಳ್ಳಿಯ ಕೃಷ್ಣೇಗೌಡರು ಹೊಸಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ 60 ನಿವೇಶನಗಳನ್ನು ನಿರ್ಮಿಸಿದ್ದರು. ಈ ನಿವೇಶನಗಳಿಗೆ ಈ ಖಾತೆ ಮಾಡಿಕೊಡುವಂತೆ ಕೃಷ್ಣೇಗೌಡ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಮದ್ದೂರು
ರಿಯಲ್ ಎಸ್ಟೇಟ್ ಉದ್ಯಮಿಗೆ ನಿವೇಶನಗಳ ಈ ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅವರ ಕಾರು ಚಾಲಕ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತಾಲೂಕಿನ ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಹಾಗೂ ಆಕೆಯ ಖಾಸಗಿ ಕಾರು ಚಾಲಕ ಅಭಿಷೇಕ್ ಗೌಡನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕೊತ್ತನಹಳ್ಳಿಯ ಕೃಷ್ಣೇಗೌಡರು ಹೊಸಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ಜಮೀನು ಖರೀದಿಸಿ 60 ನಿವೇಶನಗಳನ್ನು ನಿರ್ಮಿಸಿದ್ದರು. ಈ ನಿವೇಶನಗಳಿಗೆ ಈ ಖಾತೆ ಮಾಡಿಕೊಡುವಂತೆ ಕೃಷ್ಣೇಗೌಡ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು.ಪ್ರತಿ ನಿವೇಶನಕ್ಕೆ ಖಾತೆ ಮಾಡಲು 2,000 ರು. ನಂತೆ 1.20 ಲಕ್ಷ ರು. ಲಂಚ ನೀಡುವಂತೆ ಪಿಡಿಒ ಮಂಜಮ್ಮ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣೇಗೌಡ ಮಂಡ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್, ಇನ್ಸ್ ಪೆಕ್ಟರ್ ಗಳಾದ ಬ್ಯಾಟರಾಯ ಗೌಡ, ಪ್ರಕಾಶ್, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಶಂಕರ್ ಹಾಗೂ ಮಾನಸ ಅವರು ಕಾರ್ಯಾಚರಣೆ ನಡೆಸಿ ಪಿಡಿಒ ಮಂಜಮ್ಮ ಹಾಗೂ ಕಾರು ಚಾಲಕ ಅಭಿಷೇಕ್ ಗೌಡ ಶನಿವಾರ ಮಧ್ಯಾಹ್ನ ನಿವೇಶನದ ಸ್ಥಳದಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರ್ ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.