ಸಾರಾಂಶ
ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಲಕ್ಷಾಂತರ ಮೋದಿ ಪ್ರೇಮಿಗಳು ಅವರನ್ನು ನೋಡಲು ತವಕಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಕ್ಷಣಗಣನೆ ಆರಂಭವಾಗಿದ್ದು, ಲಕ್ಷಾಂತರ ಮೋದಿ ಪ್ರೇಮಿಗಳು ಅವರನ್ನು ನೋಡಲು ತವಕಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನರೇದ್ರ ಮೋದಿ ಆಗಮನ ಹಿನ್ನೆಲೆ ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ ಸಜ್ಜುಗೊಳ್ಳುತ್ತಿರುವ ಬಹೃತ್ ವೇದಿಕೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೋದಿಯವರು ಮಾ.18ರಂದು ಮಧ್ಯಾಹ್ನ ಸರಿಯಾಗಿ 1.15ಕ್ಕೆ ವೇದಿಕೆಗೆ ಆಗಮಿಸುವರು.
2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಸ್ವಇಚ್ಛೆಯಿಂದ ಮೋದಿ ನೋಡುವವರ ಸಂಖ್ಯೆಯೇ ಹೆಚ್ಚಾಗಿದೆ. ಎಲ್ಲ ಸಿದ್ಧತೆಗಳು ಈಗ ಪೂರ್ಣವಾಗಿವೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರು ರಾಜ್ಯದ ಪ್ರಮುಖ ನಾಯಕರು ಕಾರ್ಯಕರ್ತರು ಉಪಸ್ಥಿತರಿರುತ್ತಾರೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಮಧ್ಯಾಹ್ನ 12.30ರೊಳಗೆ ವೇದಿಕೆಗೆ ಬರಬೇಕು. ಹೊರ ಜಿಲ್ಲೆಗಳಿಂದ ಬರುವವರಿಗೆ ಅಲ್ಲಿಲ್ಲಿ ವಾಹನದ ನಿಲ್ದಾಣಗಳನ್ನು ಮಾಡಲಾಗಿದೆ. ಬಿ.ಎಚ್. ರಸ್ತೆಯ ಸೈನ್ಸ್ ಮೈದಾನ, ಬೊಮ್ಮನಕಟ್ಟೆಯ ಖಾಲಿ ಇರುವ ಮೈದಾನದಲ್ಲಿ ಎಪಿಎಂಸಿ ಯಾರ್ಡ್ ಹೀಗೆ ವಿವಿಧ ಭಾಗಗಳಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಮತ್ತಷ್ಟು ವಿವರಗಳನ್ನು ಪೊಲೀಸ್ ಇಲಾಖೆ ನೀಡಲಿದೆ ಎಂದರು.
ನೀತಿ ಸಂಹಿತೆ ಈ ದಿನವೇ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರ ಸಮಾರಂಭ ಕೂಡ ನಿಯಮದ ಅಡಿಯಲ್ಲಿಯೇ ನಡೆಸಲಾಗುವುದು. ವಿಶ್ವನಾಯಕ ಮೋದಿ ಅವರು ಶಿವಮೊಗ್ಗಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಪ್ರಮುಖರಾದ ರಘುಪತಿ ಭಟ್, ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಗಿರೀಶ್ ಪಟೇಲ್, ಆರ್.ಕೆ. ಸಿದ್ರಾಮಣ್ಣಾ, ಕೆ.ಜಿ.ಕುಮಾರಸ್ವಾಮಿ, ಅಶೋಕ್ ನಾಯ್ಕ ಮತ್ತಿತರರು ಇದ್ದರು.
ಈಶ್ವರಪ್ಪ ನಡೆ ಬಗ್ಗೆ ಪ್ರತಿಕ್ರಿಯಿಸಿದ ಸಂಸದ
ಜಿಲ್ಲೆಯಲ್ಲಿ ಸ್ವಪಕ್ಷೀಯ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ಬಗ್ಗೆ ಸಂಸದ ರಾಘವೇಂದ್ರ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನಾವು ಈಗ ಸಂಪೂರ್ಣವಾಗಿ ಮೋದಿ ಅವರ ನಿರೀಕ್ಷೆಯಲ್ಲಿದ್ದೇವೆ. ಕುದುರೆಗೆ ಕಣ್ಣುಪಟ್ಟಿ ಕಟ್ಟಿದ್ದಂತೆ ಇದ್ದೇವೆ. ನಮ್ಮ ದೃಷ್ಠಿಯಲ್ಲಿ ಮೋದಿಯ ಕಡೆಗೆ ಇದೇಯೇ ವಿನಃ, ಬೇರೆ ಏನು ಅಲ್ಲ ಎಂದಷ್ಟೇ ಹೇಳಿದರು.
ಮತ್ತೆ ಅದೇ ಪ್ರಶ್ನೆಯನ್ನೇ ಕೇಳಿದಾಗ ಮೈಕ್ ಅನ್ನು ಶಾಸಕ ಎಸ್.ಎನ್. ಚನ್ನಬಸಪ್ಪನವರ ಕಡೆ ನೀಡಿದರು. ಶಾಸಕರು ಅದನ್ನು ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅವರ ಕೈಯಿಗೆ ಕೊಟ್ಟರು. ಮೇಘರಾಜ್ ಮೈಕ್ ಹಿಡಿದು, ಎಲ್ಲರಿಗೂ ಧನ್ಯವಾದ ಹೇಳಿದರು.
ಶಿವಮೊಗ್ಗ ನಗರದಲ್ಲಿ ಪ್ರಧಾನಿ ಮೋದಿ ಸಭೆ ಹಿನ್ನೆಲೆ ಶನಿವಾರ ಸಂಸದ ಬಿ.ವೈ.ರಾಘವೇಂದ್ರ ಅವರು ಅಲ್ಲಮ ಪ್ರಭು ಮೈದಾನಕ್ಕೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ವೀಕ್ಷಿಸಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದರು.