ದರಸ್ತಿ ಕಾರು ತೆರವುಗೊಳಿಸುವಾಗ ಸರಕು ಸಾಗಾಣಿಕೆ ವಾಹನ ಡಿಕ್ಕಿಯಾಗಿ ಖಾಸಗಿ ಕಂಪನಿ ಉದ್ಯೋಗಿ ಸಾವು

| Published : Aug 05 2024, 01:33 AM IST / Updated: Aug 05 2024, 08:41 AM IST

 road Accident32

ಸಾರಾಂಶ

ದರಸ್ತಿ ಕಾರು ತೆರವುಗೊಳಿಸುವಾಗ ವಾಹನ ಹರಿದು ಸಿಬ್ಬಂದಿ ಮೃತಪಟ್ಟಿರುವುದು.

ಬೆಂಗಳೂರು : ದುರಸ್ತಿ ಕಾರನ್ನು ಟೋಯಿಂಗ್ ಮಾಡುವ ವೇಳೆ ಸರಕು ಸಾಗಾಣಿಕೆ ವಾಹನ ಡಿಕ್ಕಿಯಾಗಿ ಖಾಸಗಿ ಕಂಪನಿ ಉದ್ಯೋಗಿ ಮೃತಪಟ್ಟಿರುವ ಘಟನೆ ಹೊಸೂರು ರಸ್ತೆಯ ಸಿಂಗಸಂದ್ರ ಮೇಲ್ಸೇತುವೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಗೊಲ್ಲಹಳ್ಳಿ ನಿವಾಸಿ ಮಂಜುನಾಥ್ (47) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಚಾಲಕ ರಾಧಕೃಷ್ಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಟಾಟಾ ಏಸ್ ಚಾಲಕ ಸಂದೀಪ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇಲ್ಸೇತುವೆಯಲ್ಲಿ ರಿಪೇರಿಗೆ ಬಂದಿದ್ದ ಕಾರನ್ನು ರಾತ್ರಿ 11.30 ರ ಸುಮಾರಿಗೆ ಬಿಇಟಿಪಿಎಲ್ ಕಂಪನಿ ಸಿಬ್ಬಂದಿ ಸಾಗಿಸುವಾಗ ಈ ದುರಂತ ನಡೆದಿದೆ.

ಮೃತ ಮಂಜುನಾಥ್‌ ಹಾಸನ ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರು ಎಲಿವೆಟೆಡ್‌ ಟೋಲ್ ವೇ ಪ್ರೈ ಲಿ. (ಬಿಇಟಿಪಿಎಲ್‌) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್‌ ಸಿಟಿ ಕಡೆಯಿಂದ ನಗರಕ್ಕೆ ತೆರಳುವಾಗ ಸಿಂಗಸಂದ್ರದ ಮೇಲ್ಸೇತುವೆಯಲ್ಲಿ ಕಾರು ಕೆಟ್ಟು ನಿಂತಿತ್ತು. ಈ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಬಿಇಟಿಪಿಎಲ್‌ ಅಧಿಕಾರಿಗಳಾದ ಸತೀಶ್‌, ಮಂಜುನಾಥ್ ಹಾಗೂ ರಾಧಕೃಷ್ಣ ತೆರಳಿದ್ದಾರೆ.

ಬಳಿಕ ಆ ಕಾರಿನ ಸುರಕ್ಷತೆಗೆ ಸೇಫ್ಟಿ ಬ್ಯಾರಿಕೇಡ್ ಗಳನ್ನು ಹಾಕಿ ಬಿಂಕರ್‌ಗಳ ಸಹಾಯದಿಂದ ಬೇರೆ ವಾಹನಗಳಿಗೆ ಸೂಚನೆಗಳನ್ನು ಕೊಡುತ್ತಿದ್ದರು. ಆಗ ಟೋಯಿಂಗ್ ವಾಹನವನ್ನು ಸ್ಥಳಕ್ಕೆ ಕರೆಸಿದ ಬಿಇಟಿಪಿಎಲ್ ಸಿಬ್ಬಂದಿ, ಕೆಟ್ಟು ನಿಂತಿದ್ದ ಕಾರನ್ನು ಬೇರೆಡೆ ಸಾಗಿಸಲು ಮುಂದಾಗಿದ್ದರು. ಆಗ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಅತಿವೇಗದಿಂದ ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಟಾಟಾ ಏಸ್ ಬಂದಿದೆ. ಆ ವೇಳೆ ಚಾಲಕನಿಗೆ ಸತೀಶ್ ಪಕ್ಕದಲ್ಲಿ ತೆರಳುವ ಸೂಚಿಸಿದರು ಸಹ ಕೇಳದೆ ಅತಿವೇಗವಾಗಿ ಆತ ಮುನ್ನುಗ್ಗಿದ್ದಾನೆ. ಈ ಹಂತದಲ್ಲಿ ಬ್ಯಾರಿಕೇಡ್‌ಗೆ ಟಾಟಾ ಏಸ್ ಗುದ್ದಿಸಿದ ಬಳಿಕ ಕಾರಿನ ಹಿಂಭಾಗದಲ್ಲಿ ಮಂಜುನಾಥ್‌ರವರ ಮೇಲೆ ಹರಿದು ಕೊನೆಗೆ ಕೆಟ್ಟು ನಿಂತಿದ್ದ ಕಾರಿನ ಹಿಂಭಾಗಕ್ಕೆ ಅಪ್ಪಳಿಸಿ ನಿಂತಿದೆ.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಹಾಗೂ ರಾಧಕೃಷ್ಣರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ರಸ್ತಸ್ರಾವದಿಂದ ಮಂಜುನಾಥ್ ಮೃತಪ್ಟಟಿದ್ದು, ರಾಧಾಕೃಷ್ಣ ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಘಾತಕ್ಕೆ ಕಾರಣನಾದ ಟಾಟಾ ಏಸ್ ಚಾಲಕ ಸಂದೀಪ್ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.