ಸಾರಾಂಶ
ಗಜೇಂದ್ರಗಡ: ತಾಲೂಕಿನಲ್ಲಿ ವಿವಿಧ ಕ್ರೀಯಾ ಯೋಜನೆಗಳಿಗೆ ಪ್ರಸಕ್ತ ವರ್ಷಕ್ಕೆ ಬಿಡುಗಡೆಯಾಗಿರುವ ಅನುದಾನ ಯಾವುದೇ ಕಾರಣಕ್ಕೂ ಲ್ಯಾಪ್ಸ್ ಆಗದಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಶಶಿಕಾಂತ ಕೋಟಿಮನಿ ಹೇಳಿದರು.
ಪಟ್ಟಣದ ತಾಪಂ ಚಿಂತನ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೨೪-೨೫ನೇ ಸಾಲಿನಲ್ಲಿ ನಾವು ಈಗಾಗಲೇ ೭ ತಿಂಗಳು ಕಳೆದಿದ್ದೇವೆ. ಬಾಕಿ ಉಳಿದ ೫ ತಿಂಗಳ ಅವಧಿಯಲ್ಲಿ ಲಿಂಕ್ಡ್ ಡಾಕುಮೆಟ್‌ನಲ್ಲಿ ಬಿಡುಗಡೆ ಆಗಿರುವ ಬಜೆಟ್‌ನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ಲ್ಯಾಪ್ಸ್ ಆಗದಂತೆ ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದರು.ವಾಯುಭಾರ ಕುಸಿತದಿಂದ ತಾಲೂಕಿನಲ್ಲಿ ಸಾಕಷ್ಟು ಮಳೆಯಾಗಿದ್ದು, ಮಳೆಗೆ ಹಾಳಾಗಿದ್ದ ಬೆಳೆಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಮಾಡಿಕೊಂಡು ರೈತರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳೆಯಿಂದ ಹಾನಿಯಾದ ಬೆಳೆಗಳ ಪ್ರದೇಶ ಭೇಟಿ ನೀಡಿ ಸಮೀಕ್ಷೆ ನೆಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದಾಗ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವೀಂದ್ರಗೌಡ ಪಾಟೀಲ ಮಾತನಾಡಿ, ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು, ಹಿಂಗಾರು ಬಿತ್ತನೆಗೆ ಬೀಜ ರಸಗೊಬ್ಬರ ಸಂಗ್ರಹಣೆ ಮಾಡಿ ವಿತರಣೆ ಮಾಡಲಾಗುತ್ತಿದೆ. ಹಿಂಗಾರಿನಲ್ಲಿ ಶೇ% ೫೨ ರಷ್ಟು ಬಿತ್ತನೆ ಕಾರ್ಯ ಮುಗಿದಿದ್ದು, ಅತಿ ಹೆಚ್ಚು ಕಡಲೆ ಬಿತ್ತನೆಯಾಗಿದೆ. ಇನ್ನೂ ಬಿತ್ತನೆಯಾಬೇಕು. ಕೃಷಿ ಇಲಾಖೆಯಿಂದ ರೈತರಿಗಾಗಿ ಕೃಷಿ ಯಾಂತ್ರಿಕರಣ ಯೋಜನೆಯಡಿ ಶೇ% ೨೬ ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಕೃಷಿ ಹೊಂಡ ಸಹಾಯಧನ ರೈತರಿಗೆ ಜಮಾ ಮಾಡಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ಭೌತಿಕ ೧೫ ರಷ್ಟು ಆರ್ಥಿಕವಾಗಿ ಶೇ% ೧೫.೪೨ ಪ್ರಗತಿ ಸಾಧಿಸಲಾಗಿದೆ ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಬಿ. ಎಸ್. ಭಜೆಂತ್ರಿ ಮಾತನಾಡಿ, ತಾಲೂಕಿನಲ್ಲಿ ಆರೋಗ್ಯ ತಪಾಸಣೆ, ಅಂಗನವಾಡಿ, ಶಾಲಾ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಆರೋಗ್ಯ ಶಿಬಿರಗಳ ನಡೆಯುತ್ತಿವೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿಗಳು ಕಳೆದೊಂದು ತಿಂಗಳಿಂದ ಹೆಚ್ಚಾಗಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ರೋಗಗಳು ಹರಡುತ್ತಿವೆ. ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ಹೊಸೂರ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ತಾಲೂಕಿನಲ್ಲಿ ಪ್ರಸಕ್ತ ವರ್ಷ ಅತಿ ಹೆಚ್ಚು ಈರುಳ್ಳಿಯನ್ನು ರೈತರು ಬೆಳೆದಿದ್ದಾರೆ. ಇದರ ಜತೆಗೆ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ ರೈತರಿಗೆ ನೀಡಲಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ತೋಟಗಾರಿಕೆಯಲ್ಲಿ ಯಾಂತ್ರಿಕರಣ, ನರೇಗಾ ಯೋಜನೆಯ ಸಹಾಯಧನ ಸೇರಿ ಒಟ್ಟು ₹೬೨೨ ಲಕ್ಷ ಗುರಿ ಹೊಂದಿದ್ದು, ಅದರಲ್ಲಿ ₹೩೬೧ ಲಕ್ಷ ರೂ ಸಹಾಯಧನ ಫಲಾನುಭವಿಗಳಿಗೆ ನೀಡಲಾಗಿದೆ. ಇದರಲ್ಲಿ ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಆಡಳಿತಾಧಿಕಾರಿಗಳು, ಅಕಾಲಿಕ ಮಳೆಯಿಂದ ತೋಟಗಾರಿಕೆ ಬೆಳೆಗಳು ಬಹಳಷ್ಟು ಪ್ರಮಾಣದಲ್ಲಿ ಹಾನಿಯಾಗಿವೆ ಎಂಬ ದೂರುಗಳು ರೈತರಿಂದ ಕೇಳಿಬರುತ್ತಿವೆ. ಇದರ ಬಗ್ಗೆ ಸ್ವಂತ ತಾವೇ ಹಾನಿಯಾದ ಪ್ರದೇಶಕ್ಕೆ ಹೋಗಿ ಬೆಳೆ ಹಾನಿ ಪರಿಶೀಲಿಸಿ ವರದಿ ಸಲ್ಲಿಸಲು ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಸ್ವಚ್ಛತೆ ಗುಣ ಮಟ್ಟದ ಆಹಾರ ನೀಡಲು ಸೂಚಿಸಿದರು. ನಂತರ ಅರಣ್ಯ ಇಲಾಖೆ, ನಿರ್ಮಿತಿ ಕೇಂದ್ರ, ಶಿಶು ಅಭಿವೃದ್ಧಿ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಪ್ರಗತಿ ಸಾಧಿಸಲು ತಿಳಿಸಿದರು.
ಈ ವೇಳೆ ನಿರ್ಮಿತಿ ಕೇಂದ್ರದ ಇಂಜನೀಯರ್ ಎಸ್.ಎಸ್.ಪಾಟೀಲ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಜಿ. ಹಿರೇಮಠ, ಟಿಎಚ್‌ಒ ಡಾ.ಬಿ.ಎಸ್. ಭಜೇಂತ್ರಿ, ಹಿಂದುಳಿತ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ಹನಸಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರು, ಪಿಆರ್‌ಇ ಎಇ ಎಸ್.ದಿ. ಪಾಟೀಲ, ಕೃಷಿ ಇಲಾಖೆ ಅಧಿಕಾರಿ ರವೀಂದ್ರಗೌಡ ಪಾಟೀಲ, ವಲಯ ಅರಣ್ಯ ಅಧಿಕಾರಿ ರಾಮಣ್ಣ ಪೂಜಾರ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಜಯಶ್ರೀ ಪಾಟೀಲ ಸೇರಿದಂತೆ ಇತರರಿದ್ದರು.೨೦೨೫-೨೬ನೇ ಸಾಲಿನ ನರೇಗಾ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲು ಪ್ರತಿ ಗ್ರಾಪಂನಲ್ಲಿ ಗ್ರಾಮಸಭೆ ನಡೆಸಲಾಗುತ್ತಿದೆ. ಅದಕ್ಕಾಗಿ ತಾಲೂಕ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಆ ದಿನದಂದು ಇರುವ ನೋಡಲ್ ಅಧಿಕಾರಿಗಳು ತಪ್ಪದೇ ಸಭೆಗೆ ಹಾಜರಾಗಬೇಕು. ಇನ್ನೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಬೇಡಿಕೆ ಅರ್ಜಿ ಬಂದಿರುತ್ತಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಪ್ಪದೇ ಗ್ರಾಮ ಸಭೆಗೆ ಹಾಜರಾಗಿ ಕ್ರಿಯಾಯೋಜನೆಯಲ್ಲಿ ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ತಾಪಂ ಇಒ ಬಸವರಾಜ ಬಡಿಗೇರ ತಿಳಿಸಿದ್ದಾರೆ.