ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ: ಭೋಸರಾಜ್

| Published : Jul 07 2024, 01:23 AM IST

ಸಾರಾಂಶ

ಕುಮಾರಸ್ವಾಮಿ ಅವರೆ ನಿಮ್ಮ ಮೇಲೆ ಗೌರವವಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ ಎಂದು ಸಚಿವ ಬೋಸರಾಜ್‌ ಎಚ್‌.ಡಿ.ಕೆ. ವಿರುದ್ಧ ವಾಗ್ಧಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕುಮಾರಸ್ವಾಮಿ ಅವರೆ ನಿಮ್ಮ ಮೇಲೆ ಗೌರವವಿದೆ. ಅದಕ್ಕೆ ತಕ್ಕಂತೆ ನಡೆದುಕೊಳ್ಳಿ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜ್ ಎಚ್.ಡಿ.ಕೆ. ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈಗ ಕೇಂದ್ರದ ಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಎರಡು ಬಾರಿ ಸಿಎಂ ಆಗಿದ್ದವರು. ಆದರೆ ಏನೇ ವಿಷಯ ಬಂದರೂ ಅದನ್ನು ರಾಮನಗರ ರಾಜಕೀಯಕ್ಕೆ ತಿರುಗಿಸುತ್ತಾರೆ. ಯಾರಿಗೊ ಡ್ಯಾಮೇಜ್ ಮಾಡಬೇಕು ಎಂದು ನೋಡುತ್ತಾರೆ.

ಅವರಿಗೆ ರಾಜ್ಯ, ರಾಷ್ಟ್ರದ ಹಿತದೃಷ್ಟಿ ಗೊತ್ತಿಲ್ಲ. ಇದು ಒಳ್ಳೆಯದಲ್ಲ ಕುಮಾರಸ್ವಾಮಿ ಅವರೆ, ಇದನ್ನು ರಾಮನಗರದ ಜನ ನೋಡುತ್ತಿರುತ್ತಾರೆ. ಇವರದು ಯಾವಾಗಲೂ ಇದೇ ಆಯ್ತು ಅಂತ ತಿಳಿದುಕೊಳ್ಳುತ್ತಾರೆ ಎಂದು ಭೋಸರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ಸಚಿವರಾಗಿ ಏನು ಮಾತನಾಡಬಾರದೋ ಅದನ್ನೆಲ್ಲಾ ಮಾತನಾಡುತ್ತಾರೆ. ಅವರದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಆಯ್ತು. ಅದಕ್ಕೆ ಹಿಂದೆ ಮುಂದೆ ಸಾಕ್ಷ್ಯನೂ ಇರಲ್ಲ, ವಿಷಯನೂ ಇರಲ್ಲ. ಮುಖ್ಯಮಂತ್ರಿ ಅವರ ಪತ್ನಿಗೆ ಸೈಟು ಕೊಟ್ಟಿರುವುದು ಬಿಜೆಪಿ ಸರ್ಕಾರ ಇದ್ದಾಗ, ಲೆಕ್ಕದ ಪ್ರಕಾರ ಸಿಎಂ ಪತ್ನಿ ಅವರಿಗೆ 62 ಕೋಟಿ ಪರಿಹಾರ ಕೊಡಬೇಕು.

ಬಿಜೆಪಿಯವರಿಗೆ ಈಗ ಯಾವುದೇ ವಿಚಾರ ಇಲ್ಲ. ಹೀಗಾಗಿ ಇದನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಮೈತ್ರಿ ಮೂಲಕ 28 ಕ್ಷೇತ್ರ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಕೇಂದ್ರದಲ್ಲಿ 400 ಸೀಟು ಗೆಲ್ಲುತ್ತೇವೆ ಎಂದುಕೊಂಡಿದ್ದರು. ಆದರೆ ಇಂದು ಅವರ ಸೀಟು, ಮತಗಳ ಸಂಖ್ಯೆ ಎರಡು ಕಡಿಮೆ ಆಗಿವೆ. ಮತ್ತೊಂದೆಡೆ ರಾಹುಲ್ ಗಾಂಧಿಯವರು ಮಾತನಾಡುತ್ತಿದ್ದರೆ ಮೋದಿ ಅಮಿತ್ ಶಾ ಎಲ್ಲರೂ ಎರಡೆರಡು ಬಾರಿ ಎದ್ದು ನಿಂತಿದ್ದಾರೆ. ಪ್ರಧಾನಿಯವರು ತುಂಬಾ ಹತಾಶೆಗೆ ಒಳಗಾಗಿದ್ದಾರೆ ಎಂದು ಬೋಸರಾಜ್ ಅಸಮಾಧಾನಗೊಂಡರು.

ಜನಸ್ಪಂದನಕ್ಕೆ ಅವಕಾಶ ನೀಡಿಲ್ಲ ಎಂಬ ಕುಮಾರಸ್ವಾಮಿ ಅವರ ಆಪಾದನೆ ರಾಜಕೀಯ ಪ್ರೇರಿತ. ಅವರು ಕೇಂದ್ರದ ಸಚಿವರು, ಅವರಿಗೆ ಪ್ರೋಟೋಕಾಲ್ ಕೊಡುವುದನ್ನು ಕೊಡಲಾಗುತ್ತದೆ.

ಅವರು ಜನಸ್ಪಂದನೆ ಕಾರ್ಯಕ್ರಮ ಮಾಡಬೇಕೆಂದರೆ ಸಂಬಂಧಿತ ಡಿಸಿ ಮೂಲಕ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಸುಮ್ಮನೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಮಾತನಾಡಬಾರದು. ಅವರದು ಯಾವುದೇ ವಿಷಯವನ್ನು ಗಮನಕ್ಕೆ ತರದೆ ಸಭೆ ಹೇಗೆ ನಡೆಯುತ್ತದೆ. ನಾನು ಕೆಡಿಪಿ ಸಭೆಗೆ ಬರುತ್ತೇನೆ. ಬರುವ ಮುನ್ನ ಡಿಸಿಯವರಿಗೆ ತಿಳಿಸಿ ಸಿದ್ಧತೆ ಮಾಡುತ್ತೇನೆ ಅಲ್ಲವೆ ಎಂದು ಎಚ್ ಡಿಕೆಗೆ ತಿರುಗೇಟು ನೀಡಿದರು.