ಎರೆಹುಳು ಗೊಬ್ಬರ ತಯಾರಿಸುವ ಯೋಜನೆಗೆ ಕ್ರಮ

| Published : Dec 02 2024, 01:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ: ಪಟ್ಟಣದಲ್ಲಿ ಪ್ರತಿದಿನ 13 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಸದ ಮರುಬಳಕೆಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಯೋಜನೆಯನ್ನು ಪುರಸಭೆ ಕ್ರಮ ಕೈಗೊಳ್ಳಲಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ: ಪಟ್ಟಣದಲ್ಲಿ ಪ್ರತಿದಿನ 13 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಕಸದ ಮರುಬಳಕೆಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಯೋಜನೆಯನ್ನು ಪುರಸಭೆ ಕ್ರಮ ಕೈಗೊಳ್ಳಲಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.ಪಟ್ಟಣದ ಪುರಸಭೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಮೋರಟಗಿ ರಸ್ತೆಯಲ್ಲಿ 19 ಮಟನ್ ಮಾರ್ಕೆಟ್ ಅಂಗಡಿಗಳು ನಿರ್ಮಾಣವಾಗಿ ಸುಮಾರು ವರ್ಷಗಳಾಗಿವೆ. ನಗರದ ಸ್ವಚ್ಛತೆಯ ಉದ್ದೇಶದಿಂದ ಮಟನ್ ವ್ಯಾಪಾರವನ್ನು ಮಟನ್ ಮಾರ್ಕೆಟ್‌ಗೆ ಸ್ಥಳಾಂತರಿಸುವ ಯೋಜನೆಗೆ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ. ನಗರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಗೂಡಂಗಡಿಗಳ ತೆರವು ಕಾರ್ಯಾಚರಣೆ ಎಲ್ಲ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಣೆ ಆಗುತ್ತಿದೆ. ನಗರ ಸೌಂದರೀಕರಣಕ್ಕೆ ಬೇಕಾಗುವ ಅನುದಾನ ಕುರಿತಾಗಿ ಶಾಸಕರ ಜೊತೆಗೆ ಎಲ್ಲ ಸದಸ್ಯರನ್ನ ಒಳಗೊಂಡು ಚರ್ಚೆ ಮಾಡಲಾಗುವುದು. ಹಳೆ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅವುಗಳನ್ನು ಬೇರೆ ಬೇರೆ ವಾರ್ಡ್‌ಗಳ ಮುಖ್ಯ ರಸ್ತೆಗಳಲ್ಲಿ ಜೋಡಿಸಲಾಗುವುದು ಎಂದು ಅವರು, ಬಸವೇಶ್ವರ ವೃತ್ತದಿಂದ ಗಾಂಧಿ ವೃತದ ವರೆಗಿನ ರಸ್ತೆಗೆ ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರರ ಹೆಸರು ಇಡಲು ಈ ಹಿಂದೆ ಪುರಸಭೆ ಸಾಮಾನ್ಯಸಭೆಯಲ್ಲಿ ಠರಾವು ಪಾಸ್‌ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ ರಸ್ತೆಗೆ ಅವರ ಹೆಸರು ಇಡಲು ಸಭೆಯಲ್ಲಿ ಅಧಿಕಾರಿಗಳಿಗೆ ಆದೇಶ ಮಾಡಿದರು.ಈ ವೇಳೆ ನಾಮನಿರ್ದೇಶತ ಸದಸ್ಯ ಸಾಹೇಬಣ್ಣ ಪುರದಾಳ ಮಾತನಾಡಿ, ಎಸ್ಸಿಪಿ, ಟಿಎಸ್ಪಿ ಯೋಜನೆಯಲ್ಲಿ ಸಾಕಷ್ಟು ಹಣವಿದ್ದರೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕೇರಿಗಳಿಗ ಅಭಿವೃದ್ಧಿ ವಿಚಾರದಲ್ಲಿ ಪುರಸಭೆ ನಿರ್ಲಕ್ಷ ವಹಿಸಿದೆ. ಹಾಗಾದರೆ ಆ ಹಣ ಎಲ್ಲಿ ಮಾಯವಾಯಿತು. ಕೂಡಲೇ ಆ ಕೇರಿಗಳ ಅಭಿವೃದ್ಧಿಗೆ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಹೇಳಿದರು.ಸದಸ್ಯರಾದ ಬಸವರಾಜ ಯಾರನಾಳ ಮಾತನಾಡಿ, ಪಟ್ಟಣದ ಕೆರೆಯಲ್ಲಿ ಹೂಳು ತುಂಬಿದೆ. ಹೂಳು ತಗೆಯುವ ಕಾರ್ಯವಾಗಬೇಕು ಎಂದರು.ಸಭೆಯಲ್ಲಿ ಸಪ್ಟೆಂಬರ್, ಅಕ್ಟೋಬರ್, ನವಂಬರ್ -2024 ವರೆಗಿನ ಜಮಾ ಖರ್ಚುಗಳ ಅನುಮೋದನೆ, ಕಟ್ಟಡ ಪರವಾನಗಿ ರೆಡ್ ಲೈಸೆನ್ಸ್ ದರಗಳ ಪರಿಷ್ಕರಣೆ, ಘನ ತ್ಯಾಜ್ಯ ನಿರ್ವಹಣೆ ಪರಿಷ್ಕರಣೆ, ಪುರಸಭೆ ಕಾರ್ಯಾಲಯದ ವಾಣಿಜ್ಯ ಮಳಿಗೆಗಳಿಗೆ ಮೆಟ್ಟಿಲುಗಳ ನಿರ್ಮಾಣ ಮಾಡುವ, ಪಟ್ಟಣದ ಮುಖ್ಯ ವೃತ್ತಗಳಲ್ಲಿ ಜಾಹಿರಾತು ಸ್ಟ್ಯಾಂಡ್‌ಗಳನ್ನ ನಿರ್ಮಿಸುವ, ಮಟನ್ ಮಾರ್ಕೆಟ್ ಸ್ಥಳಾಂತರಿಸುವ, ಖಾತಾ ಬದಲಾವಣೆ ಅರ್ಜಿಗಳ ಮಾಹಿತಿ ಕುರಿತಂತೆ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಕರ, ಸದಸ್ಯರಾದ ಸಂದೀಪ ಚೌರ, ಪ್ರತಿಭಾ ಕಲ್ಲೂರ, ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಭಾಷಸಾಬ್ ತಾಂಬೋಳಿ, ಹಾಸಿಂಪೀರ ಆಳಂದ, ಪಾರ್ವತಿ ದುರ್ಗಿ, ಮಹಾಂತೇಶ ಬಿರಾದಾರ, ಭಾಗವ್ವ ಡೋಣೂರ, ಭೀಮಣ್ಣ ಕಲಾಲ, ತಹಸೀನ್ ಮುಲ್ಲಾ, ಗೊಲ್ಲಾಳ ಬಂಕಲಗಿ, ಶರಣಗೌಡ ಪಾಟೀಲ, ಮಹಾದೇವಿ ನಾಯ್ಕೋಡಿ, ನಾಮನಿರ್ದೇಶಿತ ಸದಸ್ಯರಾದ ಚನ್ನಪ್ಪ ಗೋಣಿ, ಸಿದ್ದು ಮಲ್ಲೇದ, ಸದಾನಂದ ಕುಂಬಾರ, ಅಬ್ದುಲ್ ರೆಹಮಾನ ದುದನಿ, ಪುರಸಭೆ ಮುಖ್ಯ ಅಧಿಕಾರಿ ಎಸ್.ರಾಜಶೇಖರ ಸೇರಿದಂತೆ ಪುರಸಭೆಯ ಸಿಬ್ಬಂದಿ ಹಾಜರಿದ್ದರು.