ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿಗೆ ಕ್ರಮ: ನಲಿನ್ ಅತುಲ್

| Published : Aug 28 2024, 12:56 AM IST

ಬೆಂಬಲ ಬೆಲೆಯಡಿ ಹೆಸರು ಕಾಳು ಖರೀದಿಗೆ ಕ್ರಮ: ನಲಿನ್ ಅತುಲ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ₹8,682 ರಂತೆ ಗರಿಷ್ಠ 22,215 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಜಿಲ್ಲೆಯ ರೈತರಿಂದ ಖರೀದಿಸಬೇಕಾಗಿದೆ.

ರೈತರ ನೋಂದಣಿ ಕಾರ್ಯ, ಖರೀದಿ ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೆಸರು ಕಾಳು ಖರೀದಿ ಕೇಂದ್ರಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಿಸಿ ಆದೇಶ ನೀಡುವಂತೆ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಅಧ್ಯಕ್ಷ, ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಕಾಳು ಖರೀದಿಸುವ ಬಗ್ಗೆ ಖರೀದಿ ಕೇಂದ್ರ ಸ್ಥಾಪಿಸುವ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಆದೇಶದಂತೆ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್‌ಗೆ ₹8,682 ರಂತೆ ಗರಿಷ್ಠ 22,215 ಮೆಟ್ರಿಕ್ ಟನ್ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಜಿಲ್ಲೆಯ ರೈತರಿಂದ ಖರೀದಿಸಬೇಕಾಗಿದೆ. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಖರೀದಿ ಕೇಂದ್ರ ತೆರೆದು ಸಂಬಂಧಿಸಿದ ಪಿ.ಎ.ಸಿ.ಎಸ್., ಟಿ.ಎ.ಪಿ.ಸಿ.ಎಂ.ಎಸ್. ಮತ್ತು ಎಫ್.ಪಿ.ಓ.ಗಳ ಮುಖಾಂತರ ನೋಂದಣಿ ಕಾರ್ಯ ಹಾಗೂ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ನಾಫೆಡ್ ಸಂಸ್ಥೆಯಿಂದ ತಂತ್ರಾಂಶ ಹಾಗೂ ತರಬೇತಿ ಆಯೋಜಿಸಿದ ನಂತರ ಕಡ್ಡಾಯವಾಗಿ ರೈತರ ನೋಂದಣಿಯನ್ನು ತಂತ್ರಾಂಶದಲ್ಲಿ ಮಾತ್ರವೇ ನೋಂದಾಯಿಸಿಕೊಳ್ಳಬೇಕು. ಸಹಕಾರ ಸಂಘಗಳ ಉಪ-ನಿಬಂಧಕರಿಗೆ ಸಂಬಂಧಿಸಿದ ಖರೀದಿ ಕೇಂದ್ರಗಳ ಸಹಕಾರ ಸಂಘಗಳು (ಪಿ.ಎ.ಸಿ.ಎಸ್., ಟಿ.ಎ.ಪಿ.ಸಿ.ಎಂ.ಎಸ್. ಮತ್ತು ಎಫ್.ಪಿ.ಓ.) ತಕ್ಷಣವೇ ಖರೀದಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಯಾವುದೇ ನ್ಯೂನ್ಯತೆ ಬರದಂತೆ ಕರ್ತವ್ಯ ನಿರ್ವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಕರ್ನಾಟಕ ಸಹಕಾರ ಮಾರಾಟ ಮಹಾ ಮಂಡಳವು ಸಹಕಾರ ಸಂಘಗಳ ಮೇಲುಸ್ತುವಾರಿ ವಹಿಸಿಕೊಂಡು ವರದಿ ಮಾಡಬೇಕು ಎಂದು ಸೂಚನೆ ನೀಡಿದರು.

ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುಂತೆ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸದೃಢ ಪಿ.ಎ.ಸಿ.ಎಸ್., ವಿ.ಎಸ್.ಎಸ್.ಎನ್., ಎಫ್.ಪಿ.ಓ., ಟಿ.ಎ.ಪಿ.ಸಿ.ಎಂ.ಎಸ್ ಸಂಸ್ಥೆಗಳ ಮುಂಖಾತರ ಒಡಂಬಡಿಕೆ ಮಾಡಿಕೊಂಡು ಖರೀದಿ ಕೇಂದ್ರ ತೆರೆಯಲು ಕ್ರಮವಹಿಸಬೇಕು. ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯವನ್ನು ಡಿಬಿಟಿ ಮೂಲಕ ಜಮೆಯಾಗುವಂತೆ ಪಾವತಿ ಮಾಡಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಖರೀದಿಸಿದ ಹೆಸರುಕಾಳನ್ನು ಸಂಬಂಧಿಸಿದ ರಾಜ್ಯ ಉಗ್ರಾಣ ನಿಗಮ, ಕೊಪ್ಪಳ, ಕುಕನೂರು, ಕುಷ್ಟಗಿ, ಗಂಗಾವತಿ ಹಾಗೂ ಕಾರಟಗಿ ಉಗ್ರಾಣಗಳಲ್ಲಿ ಶೇಖರಿಸಲು ಉಗ್ರಾಣ ನಿಗಮದ ವ್ಯವಸ್ಥಾಪಕರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಓಂಕಾರ ಎನ್.ಕೆ. ಮಾತನಾಡಿದರು.

ಸಭೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕೊಪ್ಪಳ ಶಾಖಾ ವ್ಯವಸ್ಥಾಪಕರು ಹಾಗೂ ಖರೀದಿ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಖರೀದಿ ಕೇಂದ್ರಗಳ ಪ್ರಾರಂಭ:

2024-25ನೇ ಸಾಲಿನಲ್ಲಿ ಕುಕನೂರು, ಯಲಬುರ್ಗಾ, ಬನ್ನಿಕೊಪ್ಪ, ಚಿಕ್ಕನೆಕೊಪ್ಪ, ತೊಂಡಿಹಾಳ, ಮಧೋಳ, ಮಂಡಳಗೇರಿ, ತಾವರಗೇರಾ ಹನುಮಸಾಗರ ಹಿರೇಸಿಂಧೋಗಿ, ಮುದ್ದೇಬಳ್ಳಿ, ಕವಲೂರು ಗ್ರಾಮ ಸೇರಿ ಜಿಲ್ಲೆಯಲ್ಲಿ ಒಟ್ಟು 12 ಖರೀದಿ ಕೇಂದ್ರಗಳಲ್ಲಿ ಹೆಸರು ಖರೀದಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ನೋಡಲ್ ಅಧಿಕಾರಿ, ಸಿಬ್ಬಂದಿ ನೇಮಕ:

ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ ಹೆಸರುಕಾಳು ಖರೀದಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೊಪ್ಪಳ ತಾಲೂಕಿನ ಹಿರೇಸಿಂಧೋಗಿ, ಮುದ್ದೇಬಳ್ಳಿ ಕವಲೂರು ಖರೀದಿ ಕೇಂದ್ರಗಳಿಗೆ ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಅದರಂತೆ ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳ ಯಲಬುರ್ಗಾ, ಬನ್ನಿಕೊಪ್ಪ, ಚಿಕ್ಕಕೊಪ್ಪ, ತೊಂಡಿಹಾಳ, ಮೂಧೋಳ, ಮಂಡಳಗೇರಿ ಖರೀದಿ ಕೇಂದ್ರಗಳಿಗೆ ಯಲಬುರ್ಗಾ-ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ಹಾಗೂ ಕುಷ್ಟಗಿ ತಾಲೂಕಿನ ಹನುಮಸಾಗರ ಮತ್ತು ತಾವರಗೇರಾ ಖರೀದಿ ಕೇಂದ್ರಗಳಿಗೆ ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.