ಸಾರಾಂಶ
ಗದಗ: ಮನಸ್ಸಿನಲ್ಲಿರುವ ಮಲೀನತೆಯನ್ನು ಹೋಗಲಾಡಿಸಲು 12ನೇ ಶತಮಾನದ ಶರಣರು ತಾವು ರಚಿಸಿದ ವಚನಗಳಂತೆಯೇ ಜೀವನವನ್ನು ನಡೆಸಿದ್ದು, ಅವರ ತತ್ವಾದರ್ಶಗಳನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿಯ ನಾ. ಡಾ. ಅನ್ನದಾನೀಶ್ವರ ಸ್ವಾಮಿಗಳು ಹೇಳಿದರು.ತಾಲೂಕಿನ ಲಕ್ಕುಂಡಿ ಗ್ರಾಮದ ಶ್ರೀಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದಂಗವಾಗಿ ಹಮ್ಮಿಕೊಂಡ ಶರಣರ ತತ್ವ ಚಿಂತನೆಯ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಐತಿಹಾಸಿಕ ಗ್ರಾಮದಲ್ಲಿ ಹಲವಾರು ಶರಣ-ಶರಣೆಯರು ಸಮಾಜಮುಖಿ ಕಾರ್ಯವನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖರಾದ ಅಜಗಣ್ಣ ಮುಕ್ತಾಯಕ್ಕರ ಸಹೋದರತ್ವದ ಜೀವನವೇ ನಮಗೆಲ್ಲ ದಾರಿ ದೀಪವಾಗಿದೆ. ಶರಣರು ತಾವು ನುಡಿದಂತೆ ನಡೆದು ಇಂದಿಗೂ ಅಮರರಾಗಿದ್ದಾರೆ ಎಂದರು.ನಿವೃತ್ತ ಯೋಧ ದತ್ತಾತ್ರೇಯ ಜೋಶಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಶ್ರೇಷ್ಠವಾಗಿದೆ. ಈ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹೆಚ್ಚಾಗಿ ಚರ್ಚಿಸಬೇಕು. ಶ್ರವಣ ಅಂದರೆ ಕೇಳುವುದು. ದುಷ್ಟ ಕಾರ್ಯಗಳು ನಮ್ಮಿಂದ ಕಡಿಮೆಯಾಗಬೇಕು ಎಂದರೆ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ಶರಣರ ತತ್ವ, ಆದರ್ಶ, ಸತ್ಸಂಗಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯ ಮತ್ತು ಆಧ್ಯಾತ್ಮಿಕತೆ ವೃದ್ಧರಿಗೆ ಮಾತ್ರ ಎನ್ನುವ ಭಾವನೆ ತಪ್ಪು. ನಿಜವಾಗಲೂ ಆರೋಗ್ಯ ಮತ್ತು ಆಧ್ಯಾತ್ಮಿಕತೆ ಯುವ ಪೀಳಿಗೆಗೆ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಈ ಪ್ರವಚನ ಆಯೋಜನೆಯಲ್ಲಿ ಯುವಕರೇ ಅಧಿಕವಾಗಿರುವುದು ಶ್ಲಾಘನೀಯ ಎಂದರು.
ಈ ವೇಳೆ ಡಾ. ಗಿರಿಜಾ ಹಸಿಬಿ ಮಾತನಾಡಿದರು. ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು. ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ಕಲಕೇರಿ, ಅನ್ನದಾನೀಶ್ವರ ಸೇವಾ ಸಮಿತಿಯ ಅಧ್ಯಕ್ಷ ಮಾರ್ಕೆಂಡೆಪ್ಪ ಗಡ್ಡದ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಗ್ರಾಪಂ ಸದಸ್ಯ ವಿರೂಪಾಕ್ಷಪ್ಪ ಬೆಟಗೇರಿ ಇದ್ದರು. ಅಂಬರೀಶ ಕರೆಕಲ್ಲ ನಿರೂಪಿಸಿದರು. ಶಿವಯೋಗಿ ಡಿಗ್ಗಾವಿ ವಂದಿಸಿದರು.