ಸಾರಾಂಶ
ಸೆ. 1ಕ್ಕೆ ತುಮಕೂರಿನ ಪರಮೇಶ್ವರ್ ಮನೆವರೆಗೆ ಜಾಥಾ ಕನ್ನಡಪ್ರಭ ವಾರ್ತೆ ಶಿರಾಒಳಮೀಸಲಾತಿ ಅಂಗೀಕರಿಸಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಮಾದಿಗ ಮಹಾಸಭಾ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ದಂಡು ವತಿಯಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರು ಮನೆವರೆಗೆ ಸೆ.1ರಂದು ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾದಿಗ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ರಂಗನಾಥ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಚಿತ ಭಾಗ್ಯಗಳನ್ನು ಘೋಷಿಸಿದ್ದು, ಅದರಲ್ಲಿ 5 ಭಾಗ್ಯಗಳನ್ನು ಜಾರಿಗೆ ತಂದು 6ನೇ ಭಾಗ್ಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಉಪ ಪಂಗಡಗಳಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ದ ಎಂದು ಪ್ರಣಾಳಿಕೆ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಆದ್ದರಿಂದ ನೀವು ಕೊಟ್ಟ ಮಾತಿನಂತೆ ಒಳಮೀಸಲಾತಿ ಅಂಗೀಕರಿಸಿ ಅನುಷ್ಠಾನಗೊಳಿಸಿ ಇಲ್ಲದಿದ್ದರೆ ಮಾದಿಗ ಸಮುದಾಯವು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ದಂಡು ರಾಜ್ಯ ಸಂಘಟನಾ ಕಾರ್ಯದರ್ಶಿ ಎನ್.ಕುಮಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಒಳ ಮೀಸಲಾತಿ ಒತ್ತಾಯಿಸಿ ಬಹುಸಂಖ್ಯಾತ ಮಾದಿಗ ಜನಾಂಗದ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಹಲವು ಪಾದಯಾತ್ರೆಗಳು, ಬೈಕ್ ಜಾಥಾ, ಧರಣಿ ಸತ್ಯಾಗ್ರಹಗಳನ್ನು ನಡೆಸಿದ್ದೇವೆ. ಹೀಗೆ ಮೂರು ದಶಕಗಳ ಕಾಲ ನಮ್ಮ ಸಮುದಾಯ ಸುದೀರ್ಘ ಹೋರಾಟ ಮಾಡುತ್ತ ಬಂದಿದೆ. ಇದಕ್ಕಾಗಿ ಹಲವರು ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.
ಸುಪ್ರಿಂ ಕೋರ್ಟ್ 7 ನ್ಯಾಯಮೂರ್ತಿಗಳ ಪೀಠವು ಸುದೀರ್ಘ ವಿಚಾರಣೆ ನಡೆಸಿ ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ತೀರ್ಪು ನೀಡಿದೆ. ತೀರ್ಪಿನ ಆದೇಶಕ್ಕೆ ಅನುಗುಣವಾಗಿ ಆಯಾ ರಾಜ್ಯ ಸರ್ಕಾರಗಳು ಒಳಮೀಸಲಾತಿ ಅಂಗೀಕರಿಸಬಹುದೆಂದು ತಿಳಿಸಿದೆ. ತೀರ್ಪು ಬಂದ ಒಂದೇ ದಿನದಲ್ಲಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿಧಾನಸಭೆ ಸದನದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಇದುವರೆಗೂ ಒಳಮೀಸಲಾತಿ ಬಗ್ಗೆ ಮೌನ ವಹಿಸಿದೆ ಎಂದರು. ಜಾಥಾ:ಸೆ. 1 ರಂದು ಬೆಳಿಗ್ಗೆ 8 ಗಂಟೆಗೆ ಶಿರಾದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾಲ್ನಡಿಗೆ ಜಾಥಾ ಪ್ರಾರಂಭವಾಗಿ ಸಂಜೆ 5-30ಕ್ಕೆ ದೊಡ್ಡ ಆಲದಮರ ತಲುಪಿ, ಸೆ. 2 ರಂದು ಮತ್ತೆ ಜಾಥಾ ಪ್ರಾರಂಭಿಸಿ ಸಂಜೆ 5-30ಕ್ಕೆ ಶಿರಾ ಗೇಟ್‌ನಲ್ಲಿ ವಾಸ್ತವ್ಯ, ಸೆ. 3 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿದ್ದಾರ್ಥ ನಗರದಲ್ಲಿರುವ ನಿವಾಸದವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು. ಕಾಲ್ನಡಿಗೆ ಜಾಥಾ ಸಮಿತಿಯ ಗೌರವಾಧ್ಯಕ್ಷರು. ಕೆ.ಮಂಜುನಾಥ್, ಪ್ರಚಾರ ಸಮಿತಿ ವೀರ ಖ್ಯಾತಯ್ಯ, ಕಾರ್ಯದರ್ಶಿ ನಾಗರಾಜ್.ಎಸ್, ಪಟ್ಟನಾಯಕನಹಳ್ಳಿ ಹನುಮಂತ, ಚಂದ್ರಣ್ಣ, ದಲಿತ ಮುಖಂಡರಾದ ಭರತ್ ಕುಮಾರ್, ಶಿವಕುಮಾರ್ ಭಾಗವಹಿಸಿದ್ದರು.