ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಂತ್ರಜ್ಞಾನವು ಮಾನವ ನಿರ್ಮಿತವಾಗಿದ್ದರೂ ಕೂಡಾ, ಅವು ಪ್ರಸಕ್ತ ದಿನಗಳಲ್ಲಿ ಮಾನವನಿಗೆ ಆರ್ಥಿಕ, ಔದ್ಯೋಗಿಕ ಮತ್ತು ಮಾನಸಿಕವಾಗಿ ಹಾನಿ ಉಂಟು ಮಾಡುತ್ತಿವೆ. ಆದರೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅರಿತುಕೊಂಡು ಸದ್ಬಳಕೆ ಮಾಡಿಕೊಂಡಾಗ, ಸಮಾಜ ಪ್ರಗತಿ ಹೊಂದುವುದು ಎಂದು ಬೆಳಗಾವಿಯ ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ ಹೇಳಿದರು.ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನೇತೃತ್ವದಲ್ಲಿ ನವ ಜ್ಞಾನ ಉತ್ಪತ್ತಿ ಮತ್ತು ಕೃತಕ ಬುದ್ಧಿಮತ್ತೆ ವಿಷಯದ ಕುರಿತಾಗಿ ಗುರುವಾರ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಮುಂಬರುವ ದಿನಗಳಲ್ಲಿ ಬಹಳಷ್ಟು ಉದ್ಯೋಗಗಳನ್ನು ಕಸಿದುಕೊಳ್ಳುವುದು ಎಂಬ ಸಂಗತಿ ಎಲ್ಲೆಡೆ ಪ್ರಚಲಿತದಲ್ಲಿದೆ. ಆದರೆ ಇದರಂತೆ 4 ಶತಮಾನಗಳ ಹಿಂದೆ ಕೈಗಾರಿಕೆ ಕ್ರಾಂತಿಯಿಂದ ಇತ್ತೀಚಿನ ಎರಡು ದಶಕಗಳ ಹಿಂದಿನ ಕಂಪ್ಯೂಟರ್ ಬಳಕೆವರೆಗೆ ಅನೇಕ ಹೊಸ ಹೊಸ ಆವಿಷ್ಕಾರಗಳು ಉದ್ಯೋಗ ಕಸಿದುಕೊಳ್ಳುತ್ತವೆ ಎಂಬ ಆತಂಕ ಸೃಷ್ಟಿಸಿದ್ದವು ಎಂಬುದು ಇತಿಹಾಸ. ಅದೇ ರೀತಿ ಕೃತಕ ಬುದ್ಧಿಮತ್ತೆ ಕೂಡಾ ಪ್ರಸಕ್ತ ದಿನಗಳಲ್ಲಿ ಉದ್ಯೋಗ ಕಸಿಯುವ ರಾಕ್ಷಸನಂತೆ ಬಿಂಬಿತಗೊಂಡಿರುವುದು ಸಾಮಾನ್ಯವಾಗಿದೆ ಎಂದರು.ಕೃತಕ ಬುದ್ಧಿಮತ್ತೆ ಮಾತ್ರವಲ್ಲದೆ ಎಲ್ಲ ತಂತ್ರಜ್ಞಾನಗಳು ಮಾನವ ಜೀವನವನ್ನು ಸುಲಭಗೊಳಿಸುವ ಸಾಧನಗಳಾಗಿವೆ. ಅವುಗಳ ಜ್ಞಾನವನ್ನು ಸಂಪೂರ್ಣವಾಗಿ ಅರಿತುಕೊಂಡು, ನಮ್ಮ ದಿನನಿತ್ಯದ ಕಾರ್ಯ ಮತ್ತು ವೃತ್ತಿಪರತೆಯನ್ನು ವೃದ್ಧಿಸಿಕೊಳ್ಳಲು ಕೂಡಾ ಬಳಸಬಹುದು. ಇಲ್ಲಿಯವರೆಗೆ ಪ್ರಪಂಚದಲ್ಲಿ ಅಂದಾಜು 15 ಕೋಟಿ ಪುಸ್ತಕಗಳಿವೆ. ಆದರೆ ಇನ್ನು ಮುಂದೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಪುಸ್ತಕ ಬರೆಯುವುದು ತುಂಬಾ ಸುಲಭ. ಹಾಗಾಗೀ ಮುಂಬರುವ 3 ದಶಕಗಳಲ್ಲಿ ಪುಸ್ತಕಗಳ ಸಂಖ್ಯೆ 50 ಕೋಟಿ ದಾಟುವುದು ಎಂದರು.
ಕೃತಕ ಬುದ್ಧಿಮತ್ತೆ ಸಾಧನವನ್ನು ಪರಿಣಿತಿ ಪಡೆದಲ್ಲಿ ಮುಂಬರುವ ದಿನಗಳಲ್ಲಿ ಅದು ಉದ್ಯೋಗ ಕಸಿಯುವ ರಾಕ್ಷಸನಾಗದೆ, ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಮತ್ತು ಹೆಚ್ಚಿನ ವೇತನ ನೀಡುವ ಮಿತ್ರನಾಗುವುದು ಖಂಡಿತ. ಆದ್ದರಿಂದ ಶಿಕ್ಷಕರು ಕೃತಕ ಬುದ್ಧಿಮತ್ತೆಯನ್ನು ಕಲಿಯುವ ಅವಶ್ಯಕತೆಯಿದೆ. ಒಬ್ಬ ಶಿಕ್ಷಕ ಕೃತಕ ಬುದ್ಧಿಮತ್ತೆ ಕಲಿತರೆ, ಆ ಶಿಕ್ಷಕ ನೂರಾರು ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕಲಿಯಲು ಪ್ರೇರೆಪಿಸುವ ಮತ್ತು ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಬಹುದು ಎಂದು ಹೇಳಿದರು.ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಮಾತನಾಡಿ, ಕಲಿಕೆಯು ನಿರಂತರ. ಹಾಗಾಗೀ ಔದ್ಯೋಗಿಕ ಕ್ಷೇತ್ರದ ಉದ್ಯೋಗ ಬೇಡಿಕೆಗಳನ್ನು ಅರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ಹೊಸ ಸಂಗತಿಗಳನ್ನು ಪರಿಚಯಿಸಬೇಕು. ಜ್ಞಾನದ ಫಲದಿಂದ ಸಮಾಜ ಮತ್ತು ಕೈಗಾರಿಕೆಗಳು ಸಮನಾಂತರವಾಗಿ ಪ್ರಗತಿ ಹೊಂದುತ್ತವೆ. ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ ಫಲವಾಗಿ ಅನೇಕ ಅದ್ಭುತಗಳನ್ನು ಕಂಡಿರುವ ನಾವು ಮುಂಬರುವ ದಶಕದಲ್ಲಿ ಕೃತಕ ಬುದ್ಧಿಮತ್ತೆಯಿಂದ ಹೊಸ ಹೊಸ ಚಮತ್ಕಾರಗಳನ್ನು ಕಾಣಲು ಸಿದ್ಧರಾಗಬೇಕಾಗಿದೆ ಎಂದು ಹೇಳಿದರು.