ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರುಮಳೆ ಬಿಡುವು ನೀಡಿರುವ ಕಾರಣ ತಾಲೂಕಿನಾದ್ಯಂತ ಮುಂಗಾರು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.ರಾಗಿ ತಾಲೂಕಿನ ಪ್ರಮುಖ ಬೆಳೆಯಾಗಿದೆ. ಕಳೆದ ಬಾರಿ ಮಳೆ ಪ್ರಮಾಣ ಕಡಿಮೆಯಾದ ಕಾರಣ ಬಿತ್ತನೆ ಕಾರ್ಯವೂ ಕುಂಠಿತಗೊಂಡಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಮತ್ತು ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದೆ. ಇದರಿಂದ ತಾಲೂಕಿನಲ್ಲಿ ೧೯೭೦೦ ಹೆಕ್ಟೇರ್ ಪ್ರದೇಶದಲ್ಲಿ ಶೇ.೧೧೪ ರಷ್ಟು ರಾಗಿ ಬೆಳೆಯನ್ನು ರೈತರು ಈಗಾಗಲೇ ಬಿತ್ತನೆ ಮಾಡಿರುವುದು ದಾಖಲೆಯಾಗಿದೆ.
ಜೂನ್ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾದ ಕಾರಣ ಬಹುಪಾಲು ರೈತರು ರಾಗಿ ಬಿತ್ತನೆ ಮಾಡಿದ್ದಾರೆ. ರಾಗಿ ಹುಲುಸಾಗಿ ಬಂದು ಹೊಲ ಹಚ್ಚ ಹಸಿರಾಗಿ ಬೆಳೆದಿತ್ತು. ಆದರೆ ಎಡಬಿಡದೆ ಮಘೀ ಮಳೆ ಸುರಿದ ಪರಿಣಾಮ ರಾಗಿ ಪೈರು ದಟ್ಟವಾಗಿ ಬೆಳೆಯುವುದರ ಜೊತೆಗೆ ಕಳೆ ಕೂಡ ಹೆಚ್ಚಿತು.ದಟ್ಟ ಪೈರು ಮತ್ತು ಕಳೆ ಕೀಳಲು ಸಾಧ್ಯವಾಗುತ್ತಿಲ್ಲ. ಅಳಿದುಳಿದ ಕಳೆ ಕೀಳಲು ರೈತರು ಪರದಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಹದ ಮಾಡಿಕೊಂಡಿರುವ ಭೂಮಿ ಒಣಗಿರುವ ಕಾರಣ ಅಕ್ಕಪಕ್ಕದ ತೋಟದ ರೈತರ ಕೊಳವೆ ಬಾವಿಗಳಿಂದ ನೀರು ಬಿಡಿಸಿಕೊಂಡು ಹೊಲ ಕೆಸರು ಮಾಡಿಕೊಂಡು ರಾಗಿ ಪೈರು ನಾಟಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಚಪಾನ್ ರಾಗಿ ಮಾಡುತ್ತಿದ್ದು, ಇದರಿಂದ ಕಳೆ ಕಡಿಮೆಯಾಗಿ ಫಸಲು ಹೆಚ್ಚು ಬರುತ್ತದೆ ಎಂಬುದು ರೈತರ ಲೆಕ್ಕಾಚಾರ. ಕೆಲವೆಡೆ ರಾಗಿ ಪೈರು ಗರಿ ಮೇಯಿಸುವ ಹಂತಕ್ಕೆ ಬಂದಿದ್ದು ಒಂದು ವಾರದೊಳಗೆ ಮಳೆ ಬಾರದಿದ್ದರೆ ಬಿಸಿಲಿಗೆ ಬಾಡಿ ಕೈಗೆ ಬಂದ ತುತ್ತು ಬಾಯಿಗೆ ಬರದು ಎನ್ನುವ ಸ್ಥಿತಿಗೆ ಬರಲಿದೆ.
ತಾಲೂಕಿನ ಕಸಬಾ, ಮಾಯಸಂದ್ರ, ದಬ್ಬೇಘಟ್ಟ ಮತ್ತು ದಂಡಿನಶಿವರ ಹೋಬಳಿಯ ಅಲ್ಲಲ್ಲಿ ರಾಗಿ ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಜೊತೆಗೆ ರಾಗಿ ಪೈರಿನ ತುದಿಯೂ ಸುರುಟಿದ ರೀತಿ ಒಣಗುತ್ತಿದೆ ಎಂದು ತಿಳಿದು ಬಂದಿದೆ. ಇದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಇದರ ಜೊತೆಗೆ ಅವರೆ, ತೊಗರಿ ಮತ್ತು ಹರಳಿನ ಗಿಡದ ಎಲೆಗಳಲ್ಲೂ ಸಹ ಸಣ್ಣ ಸಣ್ಣ ರಂಧ್ರ ಕಾಣಿಸಿಕೊಂಡು ರೋಗಪೀಡಿತವಾಗಿವೆ. ಹಾಗಾಗಿ ಗಿಡದ ಬೆಳವಣಿಗೆ ಕುಂಠಿತವಾಗಲಿದೆ.ತಾಲೂಕಿನಲ್ಲಿ ೬೬೫.೯ ಮಿ.ಮೀಟರ್ ವಾಡಿಕೆ ಮಳೆ ಇದೆ. ಆಗಸ್ಟ್ ನಲ್ಲಿ ೨೦೩ ಮಿ.ಮೀಟರ್ ಮಳೆಯಾಗಿದೆ. ಅವರೆ ೭೫೦, ಅಲಸಂಧೆ ೧೨೦೦, ತೊಗರಿ ೨೬೧, ಹರಳು ೬೭, ಹುರಳಿ ೬೧೫ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೀಜ ಬಿತ್ತನೆಯಾಗಿದೆ. ಸಾಸಿವೆ ಶೂನ್ಯ ಬಿತ್ತನೆಯಾದರೆ, ಎಳ್ಳು ಮತ್ತು ಹುಚ್ಚೆಳ್ಳು ಅತಿ ಕಡಿಮೆ ಬಿತ್ತನೆಯಾಗಿರುವ ಬೆಳೆಯಾಗಿದೆ.