ಸಾರಾಂಶ
ಮಂಡ್ಯ ಮಂಜುನಾಥ
ಮಂಡ್ಯ : ಜಿಲ್ಲೆಯಲ್ಲಿ ತೊಂಬತ್ತೈದು ವರ್ಷಗಳ ಹಿಂದೆ ಸ್ಥಾಪನೆಯಾದ ವಿ.ಸಿ.ಫಾರಂ ಕೃಷಿ ಸಂಶೋಧನಾ ಕೇಂದ್ರ ಇದೀಗ ವಿಶ್ವ ವಿದ್ಯಾನಿಲಯವಾಗಿ ರೂಪಾಂತರಗೊಳ್ಳುತ್ತಿದೆ. ಅನಿರೀಕ್ಷಿತವಾಗಿ ಘೋಷಣೆಯಾದ ಕೃಷಿ ವಿಶ್ವ ವಿದ್ಯಾನಿಲಯ ಜೆಡಿಎಸ್ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹಾಸನ ಜಿಲ್ಲೆಯ ಎಚ್.ಡಿ.ರೇವಣ್ಣ ಅವರು ಹಾಸನ ಕೃಷಿ ಕಾಲೇಜುಗಳನ್ನು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯಕ್ಕೆ ಸೇರಿಸಬಾರದು ಎಂಬ ನಿಲುವಿನೊಂದಿಗೆ ನೇರ ನಡೆಯನ್ನು ಪ್ರದರ್ಶಿಸಿದ್ದರೆ, ಮಂಡ್ಯ ಜಿಲ್ಲೆಯ ರಾಜಕೀಯ ಫಲಾನುಭವಿಗಳಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ನಿಲುವನ್ನು ಪ್ರಕಟಿಸಲಾಗದೆ, ಅದನ್ನು ವಿರೋಧಿಸುವ ಧೈರ್ಯವನ್ನು ಮಾಡಲಾಗದೆ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್‌ನ ಒಂದು ಕಾಲದ ಮಿತ್ರ, ಈಗಿನ ರಾಜಕೀಯ ಬದ್ಧ ವೈರಿ ಎನ್.ಚಲುವರಾಯಸ್ವಾಮಿ ಅವರು ಕೃಷಿ ವಿಶ್ವ ವಿದ್ಯಾನಿಲಯವನ್ನು ಕಾಂಗ್ರೆಸ್ ಸರ್ಕಾರದಿಂದ ಘೋಷಣೆ ಮಾಡಿಸಿ ಎರಡೂ ಸದನಗಳಲ್ಲಿ ಅನುಮೋದನೆ ದೊರಕಿಸಿದ್ದಾರೆ. ಸರ್ಕಾರ 25 ಕೋಟಿ ರು. ಹಣವನ್ನೂ ಕೃಷಿ ವಿವಿಗೆ ಬಜೆಟ್‌ನಲ್ಲಿ ಮೀಸಲಿರಿಸಿದೆ. ಬಹುಶಃ ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾನಿಲಯ ಘೋಷಣೆಯಾಗುವುದನ್ನು ಜೆಡಿಎಸ್ ನಿರೀಕ್ಷಿಸಿರಲಿಲ್ಲ. ಚಲುವರಾಯಸ್ವಾಮಿ ಅವರ ಪರಿಶ್ರಮದಿಂದ ಬಂದಿರುವ ಕೃಷಿ ವಿಶ್ವ ವಿದ್ಯಾನಿಲಯವನ್ನು ಸುಲಭವಾಗಿ ಅರಗಿಸಿಕೊಳ್ಳುವುದಕ್ಕೆ ಜೆಡಿಎಸ್‌ನಿಂದ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಸನ-ಮಂಡ್ಯ ಜಿಲ್ಲೆಗಳು ನನ್ನೆರಡು ಕಣ್ಣುಗಳು ಎಂದು ಹೇಳುವ ದಳಪತಿಗಳು ಕೃಷಿ ವಿಶ್ವ ವಿದ್ಯಾನಿಲಯವನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡವರಂತೆ ಕಂಡುಬರುತ್ತಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೃಷಿ ವಿಶ್ವ ವಿದ್ಯಾನಿಲಯವನ್ನು ಸ್ವಾಗತಿಸುತ್ತೇನೆ ಎಂದಷ್ಟೇ ಹೇಳಿದ್ದಾರೆಯೇ ವಿನಃ ತಮ್ಮ ಸಹೋದರ ಎಚ್.ಡಿ.ರೇವಣ್ಣ ಅವರ ಮನವೊಲಿಸಿ ಹಾಸನ ಜಿಲ್ಲೆಯ ಕೃಷಿ ಕಾಲೇಜುಗಳನ್ನೂ ಮಂಡ್ಯಕ್ಕೆ ಸೇರಿಸುವಂತೆ ಮಾಡುತ್ತೇನೆ.
ಕೃಷಿ ವಿಶ್ವ ವಿದ್ಯಾನಿಲಯಕ್ಕೆ ಬೆಂಬಲವಾಗಿ ನಿಲ್ಲುವಂತೆ ಸ್ಥಳೀಯ ಜೆಡಿಎಸ್ ನಾಯಕರಿಗೆ ಸೂಚಿಸುತ್ತೇನೆ ಎಂದು ನಿರ್ದಿಷ್ಟವಾಗಿ, ನೇರವಾಗಿ ಹೇಳುವ ಧೈರ್ಯ ಪ್ರದರ್ಶಿಸುತ್ತಿಲ್ಲ. ಈ ಮನಸ್ಥಿತಿ ಮಂಡ್ಯ ವಿಚಾರದಲ್ಲಿ ಜೆಡಿಎಸ್ ನಾಯಕರು ಅಭಿವೃದ್ಧಿಗಿಂತ ಹೆಚ್ಚಾಗಿ ರಾಜಕೀಯ ಕಾರಣಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಾರೆಂಬುದನ್ನು ಸ್ಪಷ್ಟಪಡಿಸುತ್ತದೆ ಎನ್ನುವುದು ಹಲವರು ಹೇಳುವ ಮಾತಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ ಮಂಡ್ಯದ ವಿ.ಸಿ.ಫಾರಂನಲ್ಲಿ ಸ್ಥಾಪನೆಗೊಂಡ ಕೃಷಿ ಸಂಶೋಧನಾ ಕೇಂದ್ರದ ಮಹತ್ವವನ್ನು ಅರಿಯದ ಎಚ್.ಡಿ.ರೇವಣ್ಣ ಅವರು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದೊಂದಿಗೆ ಹಾಸನ ಜಿಲ್ಲೆಯ ಕೃಷಿ ಕಾಲೇಜುಗಳು ಸೇರುವುದು ಬೇಡ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದು ಸಚಿವ ಚಲುವರಾಯಸ್ವಾಮಿ ಕೊಡುಗೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೋ ಅಥವಾ ಮಂಡ್ಯ ಅಭಿವೃದ್ಧಿಯಾಗುತ್ತದೆಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೋ ಎನ್ನುವುದು ಸ್ಪಷ್ಟವಾಗಬೇಕಿದೆ.
ಸ್ಥಳೀಯ ಜೆಡಿಎಸ್ ನಾಯಕರು ಕೂಡ ಕೃಷಿ ವಿಶ್ವವಿದ್ಯಾನಿಲಯದ ವಿಚಾರದಲ್ಲಿ ತುಟಿಬಿಚ್ಚುತ್ತಿಲ್ಲ. ಮಂಡ್ಯ ವಿಶ್ವ ವಿದ್ಯಾನಿಲಯವನ್ನು ಮೈಸೂರು ವಿಶ್ವ ವಿದ್ಯಾನಿಲಯದೊಂದಿಗೆ ವಿಲೀನವಾಗುವುದನ್ನು ಜೆಡಿಎಸ್ ಬಿಜೆಪಿ ಜೊತೆ ಸೇರಿ ತೀವ್ರವಾಗಿ ವಿರೋಧಿಸಿತು. ಅದೇ ಮಾದರಿಯ ತೀವ್ರತೆ ಮಂಡ್ಯ ಕೃಷಿ ವಿಶ್ವವಿದ್ಯಾನಿಲಯಕ್ಕೆ ಹಾಸನ ಕಾಲೇಜುಗಳು ಸೇರ್ಪಡೆಯಾಗುವುದು ಬೇಡ ಎಂಬ ರೇವಣ್ಣ ನಡೆ ವಿರುದ್ಧ ವ್ಯಕ್ತವಾಗದಿರುವುದು ಜೆಡಿಎಸ್ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಜೊತೆಗೆ ರಾಜಕೀಯವಾಗಿ ಕೃಷಿ ವಿವಿ ವಿಚಾರವನ್ನು ಎದುರಿಸುವುದು ಜೆಡಿಎಸ್‌ಗೆ ದೊಡ್ಡ ಸವಾಲಾಗಿದೆ.
ಕೃಷಿ ವಿವಿ ವಿಶ್ವವಿದ್ಯಾನಿಲಯವಾಗಿ ರೂಪುಗೊಳ್ಳಬೇಕಿತ್ತು. ಇದೀಗ ಆ ಭಾಗ್ಯ ಒದಗಿಬಂದಿದೆ. ರಾಗಿ, ಭತ್ತ, ಜೋಳ, ಮುಸುಕಿನ ಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳ ಸಂಶೋಧನೆಯಲ್ಲಿ ವಿ.ಸಿ.ಫಾರಂ ಕೊಡುಗೆ ಮಹತ್ವದ್ದಿದೆ. ಸಂಶೋಧನೆಯ ಕಾರ್ಯವೆಲ್ಲಾ ನಮದೇ ಆಗಿದ್ದರೂ ಅದರ ಎಲ್ಲಾ ಗೌರವ-ಮನ್ನಣೆ ಬೆಂಗಳೂರಿನ ಜಿಕೆವಿಕೆಗೆ ಸಿಕ್ಕಿದೆ. ಹಾಗಾಗಿ ರಾಜಕೀಯ ಕೆಸರೆರಚಾಟ ಬಿಟ್ಟು ಮಂಡ್ಯ ಕೃಷಿ ವಿವಿಗೆ ಎಲ್ಲರೂ ಮುಕ್ತವಾಗಿ ಕೈಜೋಡಿಸಬೇಕಿದೆ.
ಪಶು ಆಹಾರ, ಹಾಲಿನ ಪುಡಿ ಘಟಕ ಹಾಸನಕ್ಕೆ ಕೊಂಡೊಯ್ದಿದ್ದ ಎಚ್.ಡಿ.ರೇವಣ್ಣ..!
ಎಚ್.ಡಿ.ರೇವಣ್ಣ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮಂಡ್ಯಕ್ಕೆ ಮಂಜೂರಾಗಿದ್ದ ಪಶು ಆಹಾರ ಘಟಕ ಮತ್ತು ಹಾಲಿನ ಪುಡಿ ಘಟಕವನ್ನು ಹಾಸನಕ್ಕೆ ತೆಗೆದುಕೊಂಡು ಹೋದರು. ಆಗ ಮಂಡ್ಯದ ಜನರು ಯಾರೂ ವಿರೋಧಿಸಲಿಲ್ಲ. ಈಗ ಕೃಷಿ ವಿಶ್ವವಿದ್ಯಾನಿಲಯಕ್ಕೆ ಹಾಸನ ಕಾಲೇಜುಗಳು ಸೇರ್ಪಡೆಯಾಗಬಾರದು ಎಂಬ ಧೋರಣೆ ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ.
ಕೆ.ಎನ್.ನಾಗೇಗೌಡ ಅವರು ಪಶುಸಂಗೋಪನಾ ಸಚಿವರಾಗಿದ್ದ ಸಮಯದಲ್ಲಿ ಪಶು ಆಹಾರ ಸಂಸ್ಕರಣಾ ಘಟಕ ಮಂಡ್ಯಕ್ಕೆ ಸರ್ಕಾರದಿಂದ ಮಂಜೂರಾಗಿತ್ತು. ಅದರ ಸ್ಥಾಪನೆಗೆ ಮಳವಳ್ಳಿಲ್ಲಿ ೧೦ ಎಕರೆ ಭೂಮಿಯೂ ಮಂಜೂರಾಗಿತ್ತು. ಘಟಕ ಸ್ಥಾಪನೆಗೆ ತಯಾರಿ ಆರಂಭಿಸುವಷ್ಟರಲ್ಲಿ ಕೆ.ಎಂ.ಎಫ್ ಅಧ್ಯಕ್ಷರಾಗಿದ್ದ ರೇವಣ್ಣ ಪಶು ಆಹಾರ ಘಟಕವನ್ನು ಹಾಸನಕ್ಕೆ ತೆಗೆದುಕೊಂಡು ಹೋದರು.
ಮತ್ತೊಮ್ಮೆ ಹಾಲಿನ ಉತ್ಪಾದನಾ ಘಟಕವನ್ನು ಮಂಡ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪನೆ ಮಾಡಲು ನಿರ್ಧರಿಸಿ ಸರ್ಕಾರದಿಂದ ಘೋಷಿಸಿಕೊಂಡು ಬರಲಾಗಿತ್ತು. ಅದನ್ನೂ ಗೆಜ್ಜಲಗೆರೆಯಲ್ಲಿ ಸ್ಥಾಪನೆ ಮಾಡುವುದಕ್ಕೆ ಅವಕಾಶ ನೀಡದೆ ಎಚ್.ಡಿ.ರೇವಣ್ಣ ಅವರೇ ಹಾಲಿನ ಉತ್ಪಾದನಾ ಘಟಕವನ್ನೂ ಹಾಸನಕ್ಕೆ ತೆಗೆದುಕೊಂಡು ಹೋಗಿದ್ದು ಮಂಡ್ಯಕ್ಕೆ ಮಾಡಿದ ದ್ರೋಹವಲ್ಲದೆ ಮತ್ತೇನು ಎಂದು ಹಲವರು ಪ್ರಶ್ನಿಸಿದ್ದಾರೆ.
ಮಂಡ್ಯಕ್ಕೆ ಕೃಷಿ ವಿವಿ ಬಂದಿರುವುದು ಸ್ವಾಗತಾರ್ಹ. ಆದರೆ, ಹಾಸನದಿಂದ ಮಂಡ್ಯಕ್ಕೆ ಸಮರ್ಪಕ ಬಸ್-ರೈಲ್ವೆ ಸೌಕರ್ಯವಿಲ್ಲ. ಅಲ್ಲಿನವರು ಇಲ್ಲಿಗೆ ಬರುವುದು ಹೇಗೆ. ಮೊದಲು ಸಮರ್ಪಕ ಬಸ್ ಸೌಲಭ್ಯ, ಕೇಂದ್ರದ ಗಮನ ಸೆಳೆದು ರೈಲ್ವೆ ಸಂಪರ್ಕ ಕಲ್ಪಿಸುವ ಮನಸ್ಸು ಮಾಡಿದರೆ ಆಗ ಅಲ್ಲಿನವರ ನಿಲುವು ಬದಲಾಗಬಹುದು.
- ಕೆ.ಟಿ.ಶ್ರೀಕಂಠೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರು
ಕೃಷಿ ವಿಶ್ವವಿದ್ಯಾನಿಲಯದಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಕೃಷಿ ಸಂಶೋಧನೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ಕೃಷಿ ಬೆಳೆಗಳಿಂದ ಆಗುವ ಸಂಶೋಧನೆಗಳಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ವಿಶ್ವ ವಿದ್ಯಾನಿಲಯ ಎನ್ನುವುದು ಆಡಳಿತ ಕಚೇರಿಯಷ್ಟೇ. ಅದಕ್ಕೆ ಕಟ್ಟಡಗಳನ್ನು ನಿರ್ಮಿಸಿ ಹಣ ವ್ಯರ್ಥ ಮಾಡುವ ಬದಲು ಕೃಷಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿ ಗುಣಾತ್ಮಕ ಶಿಕ್ಷಣ ದೊರಕಿಸುವುದು ಉತ್ತಮ.
-ಡಿ.ಸಿ.ತಮ್ಮಣ್ಣ, ಮಾಜಿ ಸಚಿವರು
ಮಂಡ್ಯ ಕೃಷಿ ವಿಶ್ವವಿದ್ಯಾನಿಲಯ ತುಂಬಾ ಅವಶ್ಯಕತೆ ಇದೆ. ಕೃಷಿ ಸಂಶೋಧನಾ ಕೇಂದ್ರದಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಹಾಸನದವರ ನಿಲುವು ಸರಿಯಲ್ಲ. ಮಂಡ್ಯಕ್ಕೆ ಸಿಕ್ಕಿರುವುದನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣವನ್ನು ದೂರವಿಡಬೇಕು. ರೇವಣ್ಣನವರು ವಿಶ್ವವಿದ್ಯಾನಿಲಯವನ್ನು ಒಪ್ಪಿಕೊಂಡು ಸಹಕರಿಸಬೇಕು.
- ಸುನಂದಾ ಜಯರಾಂ, ರೈತ ಮುಖಂಡರು
ಕೃಷಿ ವಿವಿ ಸ್ಥಾಪನೆಯಾಗುವುದನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಕೃಷಿ ಕ್ಷೇತ್ರದ ಬೆಳವಣಿಗೆ ಉತ್ತೇಜನ ದೊರೆಯಲಿದೆ. ರೇವಣ್ಣ ಯಾವ ಕಾರಣಕ್ಕೆ ವಿರೋಧಿಸುತ್ತಿರುವರೋ ಗೊತ್ತಿಲ್ಲ. ಒಮ್ಮೆ ಹಾಸನದಲ್ಲೇ ವಿವಿ ಸ್ಥಾಪನೆಯಾಗಿದ್ದರೆ ಮಂಡ್ಯ ಕಾಲೇಜುಗಳ ಸೇರ್ಪಡೆಯನ್ನು ಒಪ್ಪಿಕೊಳ್ಳುತ್ತಿದ್ದೆವು. ಹಾಸನ-ಮಂಡ್ಯ ಬೇರೆ ಬೇರೆ ಏನಲ್ಲ. ಆದರೆ, ಸಾರಿಗೆ-ಸಂಪರ್ಕ ಸಮಸ್ಯೆಯನ್ನು ದೂರ ಮಾಡಬೇಕಿರುವುದು ಸರ್ಕಾರದ ಕರ್ತವ್ಯ.
- ಡಾ.ಕೆ.ಅನ್ನದಾನಿ, ಮಾಜಿ ಶಾಸಕರು