ಫೆಬ್ರವರಿ19 ರಿಂದ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ಮುಷ್ಕರ

| Published : Feb 14 2024, 02:16 AM IST

ಫೆಬ್ರವರಿ19 ರಿಂದ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ.೧೯ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತಿರುವುದಾಗಿ ಕರ್ನಾಟಕ ರಾಜ್ಯ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ವತಿಯಿಂದ ಮಂಗಳವಾರ ಹಾಸನ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ । ಜಿಲ್ಲಾಡಳಿ, ವಿವಿಧ ಇಲಾಖೆಗಳಿಗೆ ಪತ್ರ । ಹುದ್ದೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರ ಒತ್ತಾಯಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫೆ.೧೯ ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತಿರುವುದಾಗಿ ಕರ್ನಾಟಕ ರಾಜ್ಯ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಸಂಘದ ಸದಸ್ಯರು, ‘ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿಯಡಿಯಲ್ಲಿ ವಿವಿಧ ವೃಂದ ವಿಭಾಗಗಳಲ್ಲಿ ರಾಜ್ಯದಾದ್ಯಂತ ಕಳೆದ ಇಪ್ಪತ್ತು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ೧೮೦೦ ನೌಕರರು ಎಚ್‌ಐವಿ ನಿಯಂತ್ರಣ ಕಾರ್ಯದಲ್ಲಿ ಎಚ್‌ಐವಿ ಪರೀಕ್ಷೆ ಮತ್ತು ರಕ್ತ ಪರೀಕ್ಷೆಯನ್ನು ನಡೆಸಿ, ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವುದು, ಸಮಾಜದ ಮುಖ್ಯವಾಹಿನಿಗೆ ತರುವುದು, ಹದಿಹರೆಯದ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡುವುದು, ಆರ್‌ಆರ್‌ಸಿ ಕ್ಲಬ್‌ಗಳನ್ನು ಸ್ಥಾಪಿಸಿ ಅವುಗಳ ಮೂಲಕ ಯುವ ಜನತೆಯಲ್ಲಿ ಎಚ್‌ಐವಿ ಕುರಿತು ಅರಿವು, ಜಾಗೃತಿ ಮೂಡಿಸುವ ಮತ್ತು ರಕ್ತದಾನದ ಮಹತ್ವವನ್ನು ತಿಳಿಸಿ ರಕ್ತದಾನಿಗಳನ್ನಾಗಿ ಮಾಡಲು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ’ ಎಂದು ಹೇಳಿದರು.

‘ಸಂಘದ ನೌಕರರು ಎರಡೂವರೆ ದಶಕಗಳಿಗಿಂತ ಹೆಚ್ಚುಕಾಲ ಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಕಾಯಂ ನೌಕರರಿಗೆ ನೀಡುವ ಯಾವುದೇ ಸೌಲಭ್ಯಗಳು ಇರದಿದ್ದರೂ, ಕೇವಲ ಕ್ರೋಢೀಕೃತ ವೇತನಕ್ಕೆ ದುಡಿಯುತ್ತಿದ್ದೇವೆ. ಕಾಲ ಬದಲಾದಂತೆ ಮನುಷ್ಯನ ಅಗತ್ಯತೆಗಳು, ಬೇಡಿಕೆಗಳು ಬದಲಾಗುತ್ತವೆ. ಅದಕ್ಕೆ ತಕ್ಕಂತೆ ವೇತನದಲ್ಲಿ ಹೆಚ್ಚಳವಾಗದೇ ಇದ್ದರೆ ನೌಕರರ ಜೀವನ ನಿರ್ವಹಣೆ ದುಸ್ತರವಾಗುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಹಲವು ಬಾರಿ ಮನವಿ ನೀಡಿದಾಗಲೂ ಸಹ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆ, ಸಚಿವರು ಮೌನಕ್ಕೆ ಶರಣಾಗಿದ್ದಾರೆ. ಆದ್ದರಿಂದ ಅನಿವಾರ್ಯವಾಗಿ ಐಸಿಟಿಸಿ/ಎಆರ್‌ಟಿ/ಡಿಎಸ್‌ಆರ್‌ಸಿ/ಎಸ್‌ಆರ್‌ಎಲ್ ಕೇಂದ್ರಗಳನ್ನು ಸ್ಥಗಿತಗೊಳಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ಎಲ್ಲಾ ನೌಕರರು ತೀರ್ಮಾನಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆಸಾಪ್ಸ್‌ನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದದ ಹುದ್ದೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ವಿಲೀನಗೊಳಿಸುವುದು, ಅಲ್ಲಿಯವರೆಗೆ ಸುಪ್ರೀಂ ಕೋರ್ಟ್‌ ಆದೇದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೆಸಾಪ್ಸ್ ಗುತ್ತಿಗೆ ನೌಕರರನ್ನು ಕಾಯಂ ಮಾಡಲು ನಿಯಮಗಳನ್ನು ರೂಪಿಸುವುದು, ಇದಕ್ಕೆ ಸಮಿತಿ ರಚನೆ ಮಾಡುವುದು ಮತ್ತು ಸೇವಾಭದ್ರತೆ ನೀಡುವುದು, ನೌಕರರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಎಂದು ಘೋಷಿಸಬೇಕು. ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನವನ್ನು ನೀಡಬೇಕು ಎಂದರು.

ಎನ್‌ಎಚ್‌ಎಂ/ಎಸ್‌ಆರ್‌ಸಿ ನೌಕರರಿಗೆ ಜಾರಿ ಮಾಡಿದ ಮಾದರಿಯಲ್ಲಿ ಕೆಸಾಪ್ಸ್ ಗುತ್ತಿಗೆ ನೌಕರರಿಗೆ ಈ ಕೂಡಲೇ ವಯೋಮಿತಿ ಸಡಿಲಿಕೆ/ಕೃಪಾಂಕ ನೀಡಬೇಕು. ಸಂಘಟನೆಯ ಪದಾದಿಕಾರಿಗಳ ಆಯೋಗವನ್ನು ಈ ಕೂಡಲೇ ರಚನೆ ಮಾಡಿ ಕೆಸಾಪ್ಸ್ ನೌಕರರ ಕ್ಷೇಮಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ನೌಕರರ ಸಂಘದ ಸಂಘದ ಜಿಲ್ಲಾ ಅಧ್ಯಕ್ಷ ರಾಮಚಂದ್ರು, ರಾಜ್ಯ ಉಪಾಧ್ಯಕ್ಷ ರವಿಕುಮಾರ್, ಅಶೋಕ್, ಅನಿಲ್, ಜಯಣ್ಣ, ಸುನಿತಾ, ನೇತ್ರಾ, ಮಂಜುಳಾ ವೀಣಾ, ಅರವಿಂದ್ ಇದ್ದರು.ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಗುತ್ತಿಗೆ ನೌಕರರು.