ಸಾರಾಂಶ
ಅಡಿಕೆ ತೋಟದಲ್ಲಿ ಮಿಶ್ರ ಬೆಳೆ ಬೆಳೆದು ಉತ್ತಮ ಇಳುವರಿ ಪಡೆದ ರೈತ ಕನ್ನಡಪ್ರಭವಾರ್ತೆ ತರೀಕೆರೆ
ಪಟ್ಟಣದ ರೈತರಾದ ಅಜ್ಜಂಪುರ ರೇವಣ್ಣ ಅವರು ಸಮೀಪದ ದ್ಯಾಂಪುರ ಬಳಿ ಎರಡು ಎಕರೆ ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಕಾಳು ಮೆಣಸನ್ನು ಬೆಳೆದು ಯಶಸ್ವಿಯಾಗಿದ್ದಾರೆ.ಅದರಲ್ಲೂ ಕೆಂಪು ಮಣ್ಣಿನಲ್ಲಿ ಸಾವಯವ ಗೊಬ್ಬರವನ್ನು ಬಳಸಿ ಬೆಳೆ ಬೆಳೆದು ಉತ್ತಮ ಇಳುವರಿ ಪಡೆದಿರುವುದು ವಿಶೇಷವಾಗಿದ್ದು, ಕಾಳು ಮೆಣಸಿನ ಜೊತೆಗೆ ಅಡಕೆ ಬೆಳೆಯೂ ಕೂಡ ಉತ್ತಮ ಇಳುವರಿ ನೀಡುತ್ತಿದೆ. ಅಡಕೆ ಮರಗಳಿಗೆ ಕಾಳು ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಮೂರು ವರ್ಷಗಳ ಧೀರ್ಘಾವಧಿ ನಂತರ ಕಾಳು ಮೆಣಸು ಫಲಕ್ಕೆ ಬಂದಿದೆ. ಅಡಕೆ ಮರಕ್ಕೆ ಹಬ್ಬಿದ ಮೆಣಸಿನ ಬಳ್ಳಿಯಿಂದಾಗಿ ಕಾಳು ಮೆಣಿಸಿನ ಬಳ್ಳಿಗೆ ಮತ್ತು ಅಡಕೆ ಮರಕ್ಕೆ ನೀರು ಮತ್ತು ಗೊಬ್ಬರ ಏಕಕಾಲಕ್ಕೆ ಕೊಡುತ್ತಿರುವುದರಿಂದ ಎರಡೂ ಆರೋಗ್ಯಕರವಾಗಿ ಬೆಳೆಯುತ್ತಿವೆ ಎಂದು ರೇವಣ್ಣ ತಿಳಿಸಿದ್ದಾರೆ.
ಸಾಂಬಾರು ಮತ್ತು ವಾಣಿಜ್ಯ ಬೆಳೆಯಾಗಿರುವ ಕಾಳು ಮೆಣಸಿಗೆ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ. ಪ್ರಮುಖ ವಾಣಿಜ್ಯ ಬೆಳೆಯಾಗಿ ಮಲೆನಾಡು ಪ್ರದೇಶದಲ್ಲಿ ಕಾಳು ಮೆಣಸು ತನ್ನದೇ ಆದ ಇತಿಹಾಸ ಹೊಂದಿದೆ. ಮಲೆನಾಡು ಹೆಬ್ಬಾಗಿಲಾಗಿರುವ ತರೀಕೆರೆ ಹೆಚ್ಚಾಗಿ ಕೆಂಪು ಮಣ್ಣಿನ ಭೂಪ್ರದೇಶ ಹೊಂದಿದ್ದು ಅಡಕೆ ಬೆಳೆಗೆ ಪ್ರಶಸ್ತವಾದ ಭೂಮಿ. ಆದರೆ ರೇವಣ್ಣ ಅವರು ಅಡಕೆಯೊಂದಿಗೆ ಕಾಳು ಮೆಣಸು ಬೆಳೆದು ಯಶಸ್ವಿಯಾಗಿರುವುದು ಹೊಸ ಪ್ರಯೋಗವಾಗಿದೆ. ನಾಲ್ಕರಿಂದ ಐದು ಬೀಡಿನವರಿಗೂ ಆರೋಗ್ಯಕರವಾದ ಅಡಕೆ ಕೊಯ್ಯಲಾಗಿದೆ. ಕಾಳು ಮೆಣಸು ಮತ್ತು ಅಡಕೆ ಮರ ಎರಡೂ ಕೂಡ ಪರಿಣಾಮಕಾರಿಯಾಗಿಯೇ ಫಲ ನೀಡುತ್ತಿವೆ. ಅಡಕೆಯನ್ನು ಸಂಸ್ಕರಿಸಿದಂತೆ ಮನೆಯಂಗಳದಲ್ಲೇ ಕಾಳು ಮೆಣಸನ್ನು ಸಂಸ್ಕರಿಸಬಹು ದಾಗಿದೆ ಎಂದು ರೇವಣ್ಣ ಕನ್ನಡಪ್ರಭದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.ತರೀಕೆರೆ ತಾಲೂಕು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಕೆ. ಯತಿರಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, ರೈತ ಅಜ್ಜಂಪುರ ರೇವಣ್ಣ ಅವರು ತಮ್ಮ ಅಡಕೆ ತೋಟದಲ್ಲಿ ಅಡಕೆ ಮರಗಳ ಜೊತೆ ಜೊತೆಯಾಗಿ ಮಿಶ್ರ ಬೆಳೆಯನ್ನಾಗಿ ಕಾಳು ಮೆಣಸು ಬೆಳೆಯನ್ನು ಬಹಳ ಶ್ರಮವಹಿಸಿ ಬೆಳೆದಿದ್ದಾರೆ. ಕಾಲ ಕಾಲಕ್ಕೆ ಕ್ಲುಪ್ತವಾಗಿ ನೀರು ಮತ್ತು ಗೊಬ್ಬರವನ್ನು ನೀಡಿ ಕಾಳು ಮೆಣಸು ಬಳ್ಳಿಯನ್ನು ಅಡಕೆ ಮರದ ಉದ್ದಕ್ಕೂ ಆರೋಗ್ಯಕರವಾಗಿ ಬೆಳೆಸಿದ್ದಾರೆ. ಅಲ್ಲದೆ ಎರಡರಲ್ಲೂ ಉತ್ತಮ ಇಳುವರಿ ಕಂಡುಕೊಂಡಿದ್ದಾರೆ. ಕರಿ ಹಾಗೂ ಬಿಳಿ ಕಾಳು ಮೆಣಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಹಾಗಾಗಿ ಮಿಶ್ರ ಬೆಳೆ ಬೆಳೆದು ರೇವಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಕಾಳು ಮೆಣಸು ಸಾಂಬಾರು ಬೆಳೆಗಳ ರಾಜ, ಉತ್ತಮ ಲಾಭದಾಯಕ ಬೆಳೆಯಾಗಿದೆ. ದಕ್ಷಿಣ ಭಾರತದಲ್ಲಿ ಇದರ ವಾರ್ಷಿಕ ಉತ್ಪಾದನೆ 50 ರಿಂದ 60 ಸಾವಿರ ಟನ್ ಎಂದು ತಿಳಿಸಿದ್ದಾರೆ. ಮತ್ತು ಇದರ ರಫ್ತಿನಿಂದ ದೇಶಕ್ಕೆ 400 ರಿಂದ 500 ಕೋಟಿ ರು. ವಿದೇಶಿ ವಿನಿಮಯದ ಗಳಿಕೆ ಇದೆ. ಅಧಿಕ ಇಳುವರಿ ಕೊಡುವ ಏಳು ಎಂಟು ವರ್ಷದ ಗಿಡಗಳನ್ನು ಹೊಂದಿರುವ ಒಂದು ಹೆಕ್ಟೇರ್ ಕ್ಷೇತ್ರದಿಂದ 800 ರಿಂದ 1500 ಕಿ.ಗ್ರಾಂ ವರೆಗೆ ಇಳುವರಿ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದಾಗಿದೆ.-----------------ಫೋಟೋ ಇದೆಃ 19ಕೆಟಿಆರ್.ಕೆ.4ಃರೈತ ಅಜ್ಜಂಪುರ ರೇವಣ್ಣ ಅವರು ತಮ್ಮ ಅಡಕೆ ತೋಟದಲ್ಲಿ ಮಿಶ್ರ ಬೆಳೆಯನ್ನಾಗಿ ಬೆಳೆದ ಕಾಳು ಮೆಣಸು ಬೆಳೆಯನ್ನು ಸಂತಸದಿಂದ ತೋರಿಸುತ್ತಿರುವುದು.