ಸಾರಾಂಶ
ಜ.೧೯ ರಂದು ಸಂಜೆ ೩ರಿಂದ ಆರಂಭವಾಗುವ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಅಹೋರಾತ್ರಿ ಜ.೨೧ರಂದು ಸಂಜೆ ೪ರ ವರೆಗೆ ರಾಮಾಯಣ ಪಾರಾಯಣ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಸಂಸ್ಕೃತ ಭಾರತಿಯ ಮಂಗಳೂರು ವಿಭಾಗದಿಂದ ‘ಅಖಂಡ ರಾಮಾಯಣ ಪಾರಾಯಣ’ ಮಂಗಳೂರಿನ ಸಂಘನಿಕೇತನದಲ್ಲಿ ಜ. ೧೯ರಿಂದ ೨೧ರ ವರೆಗೆ ಹಮ್ಮಿಕೊಳ್ಳಲಾಗಿದೆ.ಜ.೧೯ ರಂದು ಸಂಜೆ ೩ರಿಂದ ಆರಂಭವಾಗುವ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಅಹೋರಾತ್ರಿ ಜ.೨೧ರಂದು ಸಂಜೆ ೪ರ ವರೆಗೆ ರಾಮಾಯಣ ಪಾರಾಯಣ ನಡೆಯಲಿದೆ. ಜ.೧೯ರಂದು ಸಂಜೆ ೩ಕ್ಕೆ ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಉದ್ಘಾಟಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಂಸ್ಕೃತ ಭಾರತೀ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖ್ ಡಾ. ವಿಶ್ವಾಸ್ ಭಾಗವಹಿಸುವರು. ಜ.೨೧ರಂದು ಸಂಜೆ ೪ಕ್ಕೆ ಕುಟುಂಬ ಪ್ರಬೋಧನ್ ಜ್ಯೇಷ್ಠ ಕಾರ್ಯಕರ್ತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಮಾರೋಪ ಭಾಷಣ ಮಾಡುವರು. ಎಸ್‌ಸಿಎಸ್ ಆಸ್ಪತ್ರೆ ಎಂಡಿ ಡಾ.ಜೀವರಾಜ ಸೊರಕೆ ಅಧ್ಯಕ್ಷತೆ ವಹಿಸುವರು ಎಂದು ಸಂಸ್ಕೃತ ಭಾರತೀ ಪ್ರಾಂತ ಸಂಪರ್ಕ ಪ್ರಮುಖ್ ಸತ್ಯನಾರಾಯಣ ಕೆ.ವಿ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾಕಾಂಡ, ಸುಂದರ ಕಾಂಡ ಹಾಗೂ ಉತ್ತರ ಕಾಂಡಗಳೆಂಬ ಸಪ್ತಕಾಂಡಗಳ ರೂಪದಲ್ಲಿರುವ ಶ್ರೀಮದ್ ವಾಲ್ಮೀಕಿ ರಾಮಾಯಣದ ೨೪,೦೦೦ ಸಂಸ್ಕೃತ ಶ್ಲೋಕಗಳನ್ನು ಗಾಯತ್ರಿ ಮಂತ್ರದ ಬೀಜಾಕ್ಷರಾನುಸಾರವಾಗಿ ೨೪ ತಂಡಗಳನ್ನಾಗಿ ವಿಂಗಡಿಸಲಾಗಿದೆ. ಸುಮಾರು ೫೧ ಗಂಟೆಗಳಿಗೂ ಅಧಿಕ ಕಾಲ ನಡೆಯುವ ಈ ಪಾರಾಯಣದಲ್ಲಿ ಪ್ರತೀ ತಂಡಲ್ಲಿ ಕನಿಷ್ಠ ೨೦ ಜನರು ಸುಮಾರು ೧,೦೦೦ ಶ್ಲೋಕಗಳನ್ನು ಪಠಿಸುವ ಮೂಲಕ ಅಖಂಡ ರಾಮಾಯಣ ಪಾರಾಯಣವನ್ನು ನಡೆಸಲಾಗುವುದು. ಪಾರಾಯಣದ ಅಭ್ಯಾಸ ಕಳೆದ ೧ ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಸ್ಕೃತಜ್ಞರು, ಸಂಸ್ಕೃತ ಶಿಕ್ಷಕರು ಹಾಗೂ ಸಮಾಜದ ಎಲ್ಲ ಜನರು ಪಾಲ್ಗೊಳ್ಳಲಿದ್ದಾರೆ. ಸುಮಾರು ೧,೦೦೦ ಶ್ಲೋಕಗಳ ಪಾರಾಯಣಕ್ಕೆ ತಗಲುವ ಸಮಯ ಸುಮಾರು ೨ ಗಂಟೆಗಳ ಅವಧಿ. ರಾಮಾಯಣ ಪಾರಾಯಣದಲ್ಲಿ ಶ್ರದ್ಧೆಯಿಂದ ೨ ಗಂಟೆ ಕುಳಿತುಕೊಳ್ಳುವ ಕ್ಷಮತೆಯಿರುವ ಹಿರಿಯ-ಕಿರಿಯರು, ಮಹಿಳೆಯರು, ಪುರುಷರು, ಸಮಾಜದ ಎಲ್ಲ್ಲಾ ವರ್ಗದ ಜನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೊನೆಯಲ್ಲಿ ಶ್ರೀರಾಮ ಪಟ್ಟಾಭಿಷೇಕದ ೧೦೦ ಶ್ಲೋಕಗಳ ಪಠಣದೊಂದಿಗೆ ಪಾರಾಯಣವು ಸಮಾಪನೆಗೊಳ್ಳಲಿದೆ. ಸಂಘನಿಕೇತನದ ಸಭಾಂಗಣದಲ್ಲಿ ಶ್ರೀರಾಮ ದೇವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗುವುದು ಹಾಗೂ ನಿತ್ಯಪೂಜಾ ಕೈಂಕರ್ಯಗಳು ಪಾರಾಯಣ ಸಮಯದಲ್ಲಿ ನಡೆಯಲಿದೆ. ಮಂಗಳೂರು, ಉಡುಪಿ, ಪುತ್ತೂರು, ಕೊಡಗು, ಕಾಸರಗೋಡು ಮುಂತಾದ ಜಿಲ್ಲೆಗಳ ಸಂಸ್ಕೃತ ಭಾರತಿಯ ಕಾರ‍್ಯಕರ್ತರು, ಭಕ್ತರು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬ ಹಿಂದುವು ಜೀವನದಲ್ಲಿ ಒಮ್ಮೆಯಾದರೂ ಶ್ರೀಮದ್ ರಾಮಾಯಣವನ್ನು ಓದಬೇಕು. ಪ್ರತೀ ಹಿಂದುವಿನ ಮನೆಯಲ್ಲೂ ಶ್ರೀಮದ್ ರಾಮಾಯಣದ ಗ್ರಂಥವಿರಬೇಕು ಎಂಬುದು ಈ ಪಾರಾಯಣದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.ವಿಭಾಗ ಸಂಯೋಜಕ ನಟೇಶ್, ಮಹಾನಗರ ಸಹ ಸಂಯೋಜಕಿ ಸಂಧ್ಯಾ ಕಾಮತ್, ಕಾರ್ಯಕರ್ತ ಗಣಪತಿ ಕಾಮತ್ ಇದ್ದರು.