ಕೃಷಿಯಿಂದಲೇ ಎಲ್ಲಾ ಸಂಸ್ಕೃತಿಗಳು ಹುಟ್ಟಿವೆ: ಪ್ರೊ. ಪಾಟೀಲ್‌

| Published : Feb 13 2024, 12:47 AM IST

ಸಾರಾಂಶ

ಕೌಶಲ್ಯ ಭಾರತ ಮಿಷನ್ ಮತ್ತು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿಯ ಪ್ರಭಾವದ ಮೌಲ್ಯಮಾಪನ ಕುರಿತು ಒಂದು ದಿನದ ಕಾರ್ಯಾಗಾರ.

ಕನ್ನಡಪ್ರಭ ವಾರ್ತೆ ಕಲಬುರಗಿ

“ನಾವೆಲ್ಲರೂ ಕೃಷಿಕರೆ, ಕೃಷಿಯಿಂದಲೇ ಎಲ್ಲಾ ಸಂಸ್ಕೃತಿಗಳು ಹುಟ್ಟಿವೆ” ಎಂದು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಎಸ್.ಎ. ಪಾಟೀಲ ಹೇಳಿದರು.

ಐಸಿಎಸ್‍ಎಸ್‍ಆರ್ ನವದೆಹಲಿ ಪ್ರಾಯೋಜಿತ ಮತ್ತು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಆಯೋಜಿಸಿದ್ದ ಕೌಶಲ್ಯ ಭಾರತ ಮಿಷನ್ ಮತ್ತು ಪ್ರಧಾನಮಂತ್ರಿ ಕೃಷಿ ಸಮ್ಮಾನ್ ನಿಧಿಯ ಪ್ರಭಾವದ ಮೌಲ್ಯಮಾಪನ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೃಷಿಯು ಮನುಕುಲದ ಮೊದಲ ವ್ಯವಹಾರವಾಗಿದೆ. ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನದಿಂದ ರೈತರು ಒಂದು ಹೆಕ್ಟೇರ್‌ ಭೂಮಿಯಲ್ಲಿ ಐದು ವರ್ಷಗಳಲ್ಲಿ ಲಕ್ಷಾಧಿಪತಿಯಾಗಬಹುದು. ಒಂದು ಕಾಲದಲ್ಲಿ ಭಾರತವು ಆಹಾರದ ಕೊರತೆಯಿಂದ ಬಳಲುತ್ತಿತ್ತು. ಆದರೆ, ಇಂದು ನಾವು ಸ್ವಾವಲಂಬಿಗಳಾಗಿದ್ದೇವೆ ಮತ್ತು ಹೊಸ ಬೆಳೆ ಇಲ್ಲದೆ ಇದ್ದರೂ ಸಹ ನಾವು ಒಂದು ವರ್ಷ ಬದುಕಬಹುದು. ನಾವು ಕೃಷಿಯನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.

ಪುಣೆಯ ಗೋಖಲೆ ಇನ್‍ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‍ನ ಪ್ರೊ. ಕೈಲಾಸ್ ತಾವ್ರೆ ಮಾತನಾಡಿ, ನಾವೆಲ್ಲರೂ ರೈತರ ಪ್ರಯತ್ನದ ಫಲವನ್ನು ಅನುಭವಿಸುತ್ತಿದ್ದೇವೆ. ಆದರೆ ರೈತರನ್ನು ಗೌರವಿಸದಿರುವುದು ಅತ್ಯಂತ ದುರದೃಷ್ಟಕರ. ನಾವು ರೈತನನ್ನು ಗೌರವಿಸಬೇಕಾದರೆ ಅವರು ಉತ್ಪಾದಿಸಿದ ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.

ಶರಣಬಸವ ವಿವಿ ಕುಲಸಚಿವ (ಮೌಲ್ಯ ಮಾಪನ) ಶಿವದತ್ತ ಹೊನ್ನಾಳಿ ಮಾತನಾಡಿ, ಶೇ.60ರಷ್ಟು ಪದವೀಧರರು ಉದ್ಯೋಗಕ್ಕೆ ಯೊಗ್ಯರಲ್ಲ ಎಂಬುದು ವಿಷಾದನೀಯ. ಆದ್ದರಿಂದ ಕೌಶಲ್ಯ ಭಾರತ ಮಿಷನ್‍ನಂತಹ ಕಾರ್ಯಕ್ರಮಗಳು ಈ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿವೆ ಎಂದರು.

ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ಸರ್ಕಾರಿ ಯೋಜನೆಗಳು ಅಗತ್ಯವಿರುವ ಜನರಿಗೆ ತಲುಪಿದ್ದಾವೋ ಇಲ್ಲವೋ ಎಂಬುದನ್ನು ತಿಳಿಯಲು ಯೋಜನೆಗಳ ಮೌಲ್ಯಮಾಪನ ಮಾಡುವುದು ಬಹಳ ಮುಖ್ಯವಾಗಿದೆ. ಇದರಿಂದ ತಳಮಟ್ಟದಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರಲ್ಲದೆ, ವಿಶ್ವವಿದ್ಯಾನಿಲಯಗಳ ಕೆಲಸ ಕೇವಲ ಪ್ರಮಾಣಪತ್ರ ನೀಡುವುದಲ್ಲ ಬದಲಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಸಮಾಜ ವಿಜ್ಞಾನಗಳ ಪಾತ್ರ ಮಹತ್ವದ್ದಾಗಿದೆ ಆದರೆ ಇದನ್ನು ಅಲಕ್ಷಿಸುತ್ತಿರುವುದು ಅತ್ಯಂತ ದುರದೃಷ್ಟಕರ ಎಂದರು.

ಯೋಜನಾ ನಿರ್ದೇಶಕ ಡಾ.ಪಾಂಡುರಂಗ ಪತ್ತಿ ಕಾರ್ಯಾಗಾರದ ವಿಷಯ ಪರಿಚಯಿಸಿದರು. ವ್ಯವಹಾರ ಅಧ್ಯಯನ ನಿಕಾಯದ ಡೀನ ಪ್ರೊ. ಪುಷ್ಪಾ ಸವದತ್ತಿ ಮಾತನಾಡಿದರು. ಡಾ.ಮಹಮ್ಮದ್ ಜೊಹೈರ್ ಸ್ವಾಗತಿಸಿದರು, ಡಾ.ಸುಮಾ ಸ್ಕಾರಿಯಾ ವಂದಿಸಿದರು. ಕೇಸರ ಸೋಲಂಕಿ ಕಾರ್ಯಕ್ರಮ ನಿರೂಪಿಸಿದರು, ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡ ಗೀತೆಯನ್ನು ಹಾಡಿದರು. ಡಾ.ಗಣಪತಿ ಬಿ ಸಿನ್ನೂರ, ಡಾ.ಡಿ.ಗೌತಮ್, ಡಾ.ಜಗದೀಶ ಬಿರಾದಾರ್, ಡಾ.ಮಲ್ಲಿಕಾರ್ಜುನ ಹೂಗಾರ, ಡಾ.ರವೀಂದ್ರಕುಮಾರ್, ಡಾ.ಶಿವಕುಮಾರ್ ಬೆಳ್ಳಿ, ಡಾ.ಬಸವರಾಜ ಎಂ.ಎಸ್., ಡಾ.ಸಫಿಯಾ ಪರ್ವೀನ್, ಡಾ.ಸುಷ್ಮಾ ಎಚ್ ಇದ್ದರು.