ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕುಡಿಯುವ ನೀರು ಪೂರೈಕೆಗಾಗಿ 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಹಣವನ್ನು ಮೊದಲ ಆದ್ಯತೆಯಾಗಿ ಮೀಸಲಿಡುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಟಾಸ್ಕ್ ಪೋರ್ಸ್ ಅಧಿಕಾರಿಗಳ ಸಭೆಯಲ್ಲಿ ಶಾಸಕರು, ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿಗಳ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಅದಕ್ಕೆ ಕೈಗೊಂಡಿರುವ ಪರಿಹಾರೋಪಾಯಗಳ ಸಮಗ್ರ ಪರಿಶೀಲನೆ ನಡೆಸಿದರು.
ಈಗಾಗಲೇ ಬಿರು ಬೇಸಿಗೆ ಆರಂಭವಾಗಿ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ದಿನದ 24ಘಂಟೆಗಳ ಕಾಲವೂ ಎಚ್ಚರಿಕೆ ವಹಿಸಬೇಕು. ಅಗತ್ಯವಿರುವ ಕಡೆ ಹೊಸ ಬೋರ್ ವೆಲ್ ಕೊರೆಸಲು ಕ್ರಮ ವಹಿಸಬೇಕು ಎಂದು ಹೇಳಿದರು.ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳು ಸ್ಥಗಿತಗೊಂಡಿದ್ದರೆ ಖಾಸಗಿ ಕೊಳವೆ ಬಾವಿಗಳ ಮಾಲೀಕರನ್ನು ಸಂಪರ್ಕಿಸಿ ಅವರೊಂದಿಗೆ ಮಾತುಕತೆ ನಡೆಸಿ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಗತ್ಯ ಬಿದ್ದರೆ ಖಾಸಗಿ ಕೊಳವೆ ಬಾವಿಗಳನ್ನು ವಶಕ್ಕೆ ಪಡೆದಾದರೂ ಗ್ರಾಮೀಣ ಪ್ರದೇಶದ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಿದೆ. ಕೆಲವೆಡೆ ಕೊರೆಸಲಾಗಿರುವ ಹೊಸ ಕೊಳವೆ ಬಾವಿಗಳಿಗೆ ವಿದ್ಯುತ್ ಇಲಾಖೆ ಸಂಪರ್ಕ ನೀಡುತ್ತಿಲ್ಲ. ಟಿಸಿ ಸುಟ್ಟು ಹೋದರೆ ಅಥವಾ ಜಂಪ್ ಹೋದರೆ ಅದನ್ನೂ ವಿದ್ಯುತ್ ಇಲಾಖೆ ಸಕಾಲಕ್ಕೆ ಸರಿಪಡಿಸುತ್ತಿಲ್ಲ ಎಂದು ಸಭೆಯಲ್ಲಿ ಬಹುತೇಕ ಪಿಡಿಒಗಳು ಶಾಸಕರ ಗಮನಕ್ಕೆ ತಂದರು.ತಾಲೂಕಿನಲ್ಲಿ 220 ಮಿನಿ ವಾಟರ್ ಸಪ್ಲೈ ಘಟಕಗಳಿವೆ. ಇದರಲ್ಲಿ 192 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 29 ಘಟಕಗಳು ರಿಪೇರಿಯಾಗಬೇಕಾಗಿದೆ. 436 ಮೇಜರ್ ವಾಟರ್ ಪೂರೈಕೆ ಘಟಕಗಳಿವೆ. 374 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 62 ಘಟಕಗಳು ರಿಪೇರಿಯಲ್ಲಿವೆ. 861 ಕೈ ಪಂಪ್‌ಗಳಿದ್ದು ಇದರಲ್ಲಿ 343 ಕೈ ಪಂಪುಗಳು ಕಾರ್ಯನಿರ್ವಹಿಸುತ್ತಿದ್ದರೆ 518 ಕೈ ಪಂಪುಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕೊಳವೆ ಬಾವಿಗಳು ಸ್ಥಗಿತಗೊಂಡು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಗತ್ಯವಿರುವೆಡೆ ಜಲ ಜೀವನ್ ಮಿಷನ್ ಯೋಜನೆ ಮೂಲಕ ಕೊಳಬೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಜೆಜೆಎಂ ಮೂಲಕ 95 ಕೊಳವೆ ಬಾವಿಗಳನ್ನು ಹೊಸದಾಗಿ ಕೊರೆಸಲಾಗಿದೆ. ಇದರಲ್ಲಿ 50 ಕೊಳವೆ ಬಾವಿಗಳಲ್ಲಿ ಮಾತ್ರ ನೀರು ಬಂದಿದೆ. ಉಳಿದ 45 ಬಾವಿಗಳು ವಿಫಲವಾಗಿವೆ ಎಂದು ತಿಳಿಸಿದರು.ಗ್ರಾಪಂ ವ್ಯಾಪ್ತಿಯಲ್ಲಿ ಸುಟ್ಟು ಹೋದ ಮೋಟಾರುಗಳನ್ನು ಬಿಸಾಡಿ ಹೊಸದಾಗಿ ಮೋಟರ್ ಖರೀದಿಸುವ ಬದಲು ಹಳೆಯ ಮೋಟಾರುಗಳನ್ನು ರೀವೈಂಡಿಂಗ್ ಮಾಡಿಸಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡುವತ್ತ ಪಿಡಿಒ ಕ್ರಮವಹಿಸುವಂತೆ ಸಭೆಯಲ್ಲಿ ಸೂಚಿಸಿದರು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸುವಂತೆ ಕ್ರಮವಹಿಸಲು ನಿರ್ದೇಶಿಸಿದರು.
ಸಭೆಯಲ್ಲಿ ತಹಸೀಲ್ದಾರ್ ನಿಸರ್ಗ ಪ್ರಿಯ, ತಾಪಂ ಇಒ ಬಿ.ಎಸ್.ಸತೀಶ್, ಜಿಪಂ ಕುಡಿಯುವ ನೀರು ಪೂರೈಕೆ ಯೋಜನೆ ಅಧಿಕಾರಿ ರಶ್ಮಿ, ತಾಪಂ ಅಧಿಕಾರಿ ಡಾ.ನರಸಿಂಹರಾಜು, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್ ಗ್ರಾಪಂ ಪಿಡಿಒಗಳು ಇದ್ದರು.ಅಭಿಯಂತರೆ ಗೈರು; ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಶಾಸಕರು:
ಕುಡಿಯುವ ನೀರಿನಂತಹ ಗಂಭೀರ ಸಭೆಗೆ ಸೆಸ್ಕಾಂ ವಿಭಾಗೀಯ ಕಚೇರಿ ಕಾರ್ಯಪಾಲಕ ಅಭಿಯಂತರೆ ವಿನುತಾ ಆಗಮಿಸಿರಲಿಲ್ಲ. ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ ಶಾಸಕರು ಕಾರ್ಯಪಾಲಕ ಅಭಿಯಂತರೆ ವಿನುತ ಅವರನ್ನು ತರಾಟೆಗೆ ತೆಗೆದುಕೊಂಡರು. ತಾಲೂಕುಮಟ್ಟದ ಯಾವುದೇ ಸಭೆಗಳಿಗೂ ನೀವು ಬರುತ್ತಿಲ್ಲ. ಸಭೆಗೆ ಬಾರದಿದ್ದರೆ ನಿಮಗೆ ಜನರ ಸಮಸ್ಯೆಗಳ ಬಗ್ಗೆ ಅರಿವು ಬರುವುದಾದರೂ ಹೇಗೆ? ನಿಮ್ಮ ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದಿದ್ದರೆ ನಿಮ್ಮ ಮೇಲಧಿಕಾರಿಗಳೊಂದಿಗೆ ವ್ಯವಹರಿಸಬೇಕಾಗುತ್ತದೆಂದು ಎಚ್ಚರಿಸಿದರು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.