ಚುನಾವಣೆಗೆ ಬಿಜೆಪಿಯಿಂದ ಸಂಕಲ್ಪ ಪತ್ರ ಜಾರಿ: ಮಾಳವಿಕಾ ಅವಿನಾಶ

| Published : Mar 15 2024, 01:15 AM IST

ಚುನಾವಣೆಗೆ ಬಿಜೆಪಿಯಿಂದ ಸಂಕಲ್ಪ ಪತ್ರ ಜಾರಿ: ಮಾಳವಿಕಾ ಅವಿನಾಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲೂ ಸಂವಾದ ಕಾರ್ಯಕ್ರಮದ ಮೂಲಕ ಸಂಕಲ್ಪ ಪತ್ರಕ್ಕೆ ಸಲಹೆ, ಸೂಚನೆ, ಅಭಿಪ್ರಾಯ ಸಂಗ್ರಹಿಸಿ, ಕೇಂದ್ರಕ್ಕೆ ಕಳಿಸಲಾಗುವುದು. ಜನ ಸಾಮಾನ್ಯರನ್ನೂ ಒಳಗೊಂಡಂತೆ ಎಲ್ಲರೂ 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣಕ್ಕೆ ಅಗತ್ಯ ಸಲಹೆ, ಅಭಿಪ್ರಾಯ ನೀಡಬೇಕು. ಚುನಾವಣೆಗೆ ಬಿಜೆಪಿ ಸಂಕಲ್ಪ ಪತ್ರ ಬರಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ನಿರ್ಮಾಣ ಪರಿಕಲ್ಪನೆ 2047ರ ಹೊತ್ತಿಗೆ ಸಾಕಾರಗೊಳಿಸಲು ಈ ಸಲದ ಲೋಕಸಭೆ ಚುನಾವಣೆಯಲ್ಲಿ ಪ್ರಣಾಳಿಕೆಯ ಬದಲಿಗೆ ಜನ ಸಾಮಾನ್ಯರಿಂದ ಅಭಿಪ್ರಾಯ, ಸಲಹೆ, ಸಂಗ್ರಹ ಸಂಕಲ್ಪ ಪತ್ರ ಹೊರ ತರಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ತಿಳಿಸಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ವಿಕಸಿತ ಭಾರತ ಮೋದಿ ಗ್ಯಾರಂಟಿ ಮಾಧ್ಯಮ ಸಂವಾದ ಉದ್ಘಾಟಿಸಿ ಮಾತನಾಡಿ ಮೋದಿಯವರಂತಹ ನಾಯಕರಿಗೆ ಮಾತ್ರ ಪ್ರಣಾಳಿಕೆಯ ಬದಲಿಗೆ, ಸಂಕಲ್ಪ ಪತ್ರ ಹೊರತರುವ ವಿನೂತನ ಆಲೋಚನೆ ಬರಲು ಸಾಧ್ಯ ಎಂದರು.

ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲೂ ಸಂವಾದ ಕಾರ್ಯಕ್ರಮದ ಮೂಲಕ ಸಂಕಲ್ಪ ಪತ್ರಕ್ಕೆ ಸಲಹೆ, ಸೂಚನೆ, ಅಭಿಪ್ರಾಯ ಸಂಗ್ರಹಿಸಿ, ಕೇಂದ್ರಕ್ಕೆ ಕಳಿಸಲಾಗುವುದು. ಜನ ಸಾಮಾನ್ಯರನ್ನೂ ಒಳಗೊಂಡಂತೆ ಎಲ್ಲರೂ 2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಾಣಕ್ಕೆ ಅಗತ್ಯ ಸಲಹೆ, ಅಭಿಪ್ರಾಯ ನೀಡಬೇಕು. ಚುನಾವಣೆಗೆ ಬಿಜೆಪಿ ಸಂಕಲ್ಪ ಪತ್ರ ಬರಲಿದೆ. ಭಾರತವನ್ನು ಮತ್ತೆ ವಿಶ್ವ ಗುರುವಾಗಿಸಲು ನರೇಂದ್ರ ಮೋದಿ ಅನೇಕ ಕಾರ್ಯಕ್ರಮ ಕೈಗೊಂಡಿದ್ದಾರೆ. ಭಾರತವೆಂಬ ಕಲ್ಪನೆ ಅಭಿವೃದ್ಧಿಶೀಲ ಭಾರತ ಅಭಿವೃದ್ಧಿ ದೇಶವಾಗಿ ಮಾಡುವುದಾಗಿದೆ ಎಂದು ಹೇಳಿದರು.

ಇಡೀ ಜಗತ್ತನ್ನೇ ಮುನ್ನಡೆಸುವ ಮಟ್ಟಕ್ಕೆ ಭಾರತ ಬೆಳೆದಿದೆ. ಭಾರತವನ್ನು ವಿಶ್ವಗುರು ಮಾಡುವ ಪರಿಕಲ್ಪನೆಯ ಸಮರ್ಥ ನಾಯಕತ್ವ ಮೋದಿಯವರಲ್ಲಿದೆ. ಬಡವರು, ಯುವಜನತೆ, ಅನ್ನದಾತರು, ನಾರಿಶಕ್ತಿ ಎಂಬ ನಾಲ್ಕು ವರ್ಗಗಳ ಜೊತೆಗೆ ಉಳಿದ ಎಲ್ಲಾ ವರ್ಗಗಳಿಗೂ ಸಹಕಾರಿಯಾಗುವಂತಹ ಜನ್ ಧನ್, ಡಿಜಿಟಲ್ ಇಂಡಿಯಾ, ಮುದ್ರಾ, ವಿಶ್ವಕರ್ಮ, ಸ್ವನಿಧಿ, ಮಾತೃವಂದನೆ ಹೀಗೆ ಅನೇಕಾನೇಕ ಕಾರ್ಯಕ್ರಮ ಜಾರಿಗೆ ತಂದಿದ್ದು ಮೋದಿ ಎಂದು ಮಾಳವಿಕಾ ಅವಿನಾಶ ಮನವಿ ಮಾಡಿದರು.

ರಾಜ್ಯ ಪ್ರಕೋಷ್ಠ ಸಂಚಾಲಕ ಆರ್.ದತ್ತಾತ್ರಿ ಮಾತನಾಡಿ, 2014ರ ಮುಂಚಿನ ಭಾರತಕ್ಕೂ, 2024ರ ಭಾರತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ವಿಶ್ವದಲ್ಲೇ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತ ಹೊರ ಹೊಮ್ಮಿದೆ. ಡಿಜಿಟಲ್ ಇಂಡಿಯಾ ವಿಶ್ವದಲ್ಲೇ ನಂಬರ್ ಒನ್ ಆಗಿದೆ. 2014ರ ಆಶ್ವಾಸನೆಯಲ್ಲಿ 220 ಆಶ್ವಾಸನೆ ಈಡೇರಿಸಲಾಗಿದೆ. 2019ರಲ್ಲಿ 228 ಆಶ್ವಾಸನೆ ಈಡೇರಿಸಿದೆ. ಭಾರತವನ್ನು ವಿಶ್ವದ ನಂಬರ್ ಒನ್ ರಾಷ್ಟ್ರವಾಗಿಸಲು ಮೋದಿ ಹೊರಟಿದ್ದಾರೆ. ಮೋದಿ ಪ್ರಯತ್ನಕ್ಕೆ ಚುನಾವಣೆಯಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಜನತೆಗೆ ಕೋರಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ರಾಜ್ಯ ಕಾರ್ಯದರ್ಶಿ ಅನಿತಾ ಹುಲಿರಾಯ್ಕರ್, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳು, ಡಿ.ಎಸ್.ಶಿವಶಂಕರ, ಜಿ.ಎಸ್.ಅನಿತಕುಮಾರ, ಅನಿಲಕುಮಾರ ನಾಯ್ಕ, ಕೆ.ಮಹಾಂತೇಶ, ವಕೀಲ ಕೆ.ಸಿ.ರಾಘವೇಂದ್ರ ಮೊಹರೆ ಇತರರಿದ್ದರು.