ಸಿದ್ದೇಶ್ವರ ಪತ್ನಿಗೆ ಟಿಕೆಟ್; ಭುಗಿಲೆದ್ದ ಅಸಮಾಧಾನ

| Published : Mar 15 2024, 01:15 AM IST

ಸಾರಾಂಶ

ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಟಿಕೆಟ್ ವಂಚಿತರು ಹಾಗೂ ಸಿದ್ದೇಶ್ವರ ವಿರೋಧಿ ಬಣವಾಗಿ ಗುರುತಿಸಿಕೊಂಡ ಅಸಮಾಧಾನಿತ ಮುಖಂಡರು ಸುಮಾರು 2 ಗಂಟೆ ಕಾಲ ಸುದೀರ್ಘ ಚರ್ಚೆ ನಡೆಸಿದರೂ, ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗದೇ, ಮತ್ತೊಮ್ಮೆ ಕಾರ್ಯಕರ್ತರ ಸಭೆ ಮಾಡಿ, ಅಲ್ಲಿ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಹೊಸಬರಿಗೆ ಟಿಕೆಟ್ ನೀಡುವಂತೆ ಕಳೆದ 3 ತಿಂಗಳಿನಿಂದ ಮಾಡಿದ್ದ ಪ್ರಯತ್ನ, ಒತ್ತಡ ಫಲ ನೀಡದೇ, ಸಂಸದ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಹೆಸರಿನಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿದೆ.

ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ನಿವಾಸದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಟಿಕೆಟ್ ವಂಚಿತರು ಹಾಗೂ ಸಿದ್ದೇಶ್ವರ ವಿರೋಧಿ ಬಣವಾಗಿ ಗುರುತಿಸಿಕೊಂಡ ಅಸಮಾಧಾನಿತ ಮುಖಂಡರು ಸುಮಾರು 2 ಗಂಟೆ ಕಾಲ ಸುದೀರ್ಘ ಚರ್ಚೆ ನಡೆಸಿದರೂ, ಮುಂದಿನ ನಡೆ ಬಗ್ಗೆ ನಿರ್ಧರಿಸಲಾಗದೇ, ಮತ್ತೊಮ್ಮೆ ಕಾರ್ಯಕರ್ತರ ಸಭೆ ಮಾಡಿ, ಅಲ್ಲಿ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.

ಅತೃಪ್ತರ ಗುಂಪಿನ ಸಭೆಯ ನಾಯಕತ್ವ ವಹಿಸಿದ್ದ ರೇಣುಕಾಚಾರ್ಯ ಸಭೆಯ ನೇತೃತ್ವ ವಹಿಸಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಎಂ.ಬಸವರಾಜ ನಾಯ್ಕ, ಉತ್ತರ-ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಚನ್ನಗಿರಿ ಕ್ಷೇತ್ರದಲ್ಲಿ ಬಂಡಾಯ ಸಾರಿದ್ದ ಮಾಡಾಳು ಮಲ್ಲಿಕಾರ್ಜುನ, ಮಾಜಿ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಕಲ್ಲೇಶ್, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ ಇತರರು ಸಭೆಯಲ್ಲಿದ್ದರು.

..............

ಡೀಸೆಲ್ ಸುರಿದಕೊಂಡ ವ್ಯಕ್ತಿ; ಗೋ ಬ್ಯಾಕ್ ಸಿದ್ದೇಶ್ವರ ಘೋಷಣೆ

ಸಭೆಯ ವೇಳೆಯೇ ಜಗಳೂರು ತಾಲೂಕಿನ ಮೂಲದವನು ಎನ್ನಲಾದ ವ್ಯಕ್ತಿಯೊಬ್ಬ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿ ಹೈಡ್ರಾಮಾಯೂ ನಡೆಯಿತು. ತಕ್ಷಣವೇ ಸಮೀಪದಲ್ಲಿದ್ದ ಶಾಮ ಪೈಲ್ವಾನ್ ಇತರರು ಆತನಿಗೆ ಬುದ್ಧಿ ಹೇಳಿ, ಮೈಮೇಲೆ ಬಕೆಟ್ ಗಟ್ಟಲೇ ನೀರು ಸುರಿದು, ಪರಿಸ್ಥಿತಿ ತಿಳಿಗೊಳಿಸಿದರು. ಆ ವ್ಯಕ್ತಿಯನ್ನು ಮುಖಂಡರು ಬೇರೆಡೆಗೆ ಕರೆದೊಯ್ದರು. ರವೀಂದ್ರನಾಥ ನಿವಾಸದ ಮುಂದೆ ವಿವಿಧ ತಾಲೂಕುಗಳ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಸಭೆಯಲ್ಲಿ ಸ್ಪಷ್ಟ ತೀರ್ಮಾನವಾಗದೇ, ಕಾರ್ಯಕರ್ತರ ಸಭೆ ಮಾಡಿ, ಅಲ್ಲಿ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ. ಸಿದ್ದೇಶ್ವರ ಫ್ಯಾಮಿಲಿ ಹಠಾವೋ, ದಾವಣಗೆರೆ ಬಚಾವೋ, ಗೋ ಬ್ಯಾಕ್‌ ಗೋ ಬ್ಯಾಕ್ ಸಿದ್ದೇಶ್ವರ ಘೋಷಣೆ ಸಹ ಕಾರ್ಯಕರ್ತರಿಂದ ಮೊಳಗಿದವು.

ನಾವ್ಯಾರೂ ಬಂಡಾಯ ಬಿಜೆಪಿಗರಲ್ಲ: ರೇಣುಕಾಚಾರ್ಯ

ಶಾಮನೂರು ಕುಟುಂಬ ಎದುರಿಸುವ ತಾಕತ್ತು ತಮಗಷ್ಟೇ ಎಂದು ಬಿಂಬಿಸಿಕೊಂಡಿದ್ದಾರೆ

ದಾವಣಗೆರೆ: ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ ರವೀಂದ್ರನಾಥ ನಿವಾಸದ ನಿಷ್ಠಾವಂತರ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ದಾವಣಗೆರೆ ಲೋಕಸಭೆ ಚುನಾವಣೆಗೆ ಹೊಸಬರಿ ಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದೆವು. 3 ತಿಂಗಳಿನಿಂದಲೂ ರವೀಂದ್ರನಾಥ್‌ರ ನೇತೃತ್ವದಲ್ಲಿ ರಾಜ್ಯ, ರಾಷ್ಟ್ರೀಯ ನಾಯಕರಿಗೆ ಮನವಿ ಮಾಡುತ್ತಲೇ ಬಂದಿದ್ದೆವು. ದೆಹಲಿಗೂ ಹೋಗಿ, ರಾಷ್ಟ್ರೀಯ ನಾಯಕರಿಗೆ ಭೇಟಿ ಮಾಡಿ, ಹೊಸಬರಿಗೆ ದಾವಣಗೆರೆ ಟಿಕೆಟ್ ನೀಡುವಂತೆ ಕೋರಿದ್ದೆವು. ಆದರೆ, ಮತ್ತೆ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ ಎಂದು ಬೇಸರ ಹೊರ ಹಾಕಿದರು.

ಜಾತ್ಯತೀತವಾಗಿ ಟಿಕೆಟ್ ನೀಡುವುದಾದರೆ ನನಗೆ ಕೊಡಿ. ದೊಡ್ಡ ಸಮುದಾಯದವರಿಗೆ ನೀಡುವುದಾದರೆ ಆರೈಕೆ ಆಸ್ಪತ್ರೆ ಮುಖ್ಯಸ್ಥ , ಜಗಳೂರಿನ ಡಾ.ಟಿ.ಜಿ.ರವಿಕುಮಾರಗೆ ನೀಡಲು ಮನವಿ ಮಾಡಿದ್ದೆವು. ಈ ನಿರ್ಧಾರವನ್ನು ನಾವೆಲ್ಲಾ ಕ್ಷೇತ್ರಗಳ ನಾಯಕರೂ ಸೇರಿ ಮಾಡಿದ್ದೆವು. ಆದರೆ, ನಿನ್ನೆ ಬಿಜೆಪಿ 2ನೇ ಪಟ್ಟಿಯಲ್ಲಿ ಅಭ್ಯರ್ಥಿ ಘೋಷಣೆಯಾಗಿದ್ದರಿಂದ ಇಂದು ರವೀಂದ್ರನಾಥರ ನಿವಾಸದಲ್ಲಿ ತುರ್ತು ಸಭೆ ಮಾಡುತ್ತಿದ್ದೇವೆ. ಲೋಕಸಭಾ ಕ್ಷೇತ್ರದ ಎಲ್ಲಾ ನಾಯಕರೂ ಸಭೆಯಲ್ಲಿ ಪಾಲ್ಗೊಂಡಿದ್ದೇವೆ ಎಂದು ತಿಳಿಸಿದರು.

ನಾವ್ಯಾರೂ ಬಂಡಾಯ ಬಿಜೆಪಿಗರಲ್ಲ. ನಾವು ಮೂಲ ಬಿಜೆಪಿ ಕಾರ್ಯಕರ್ತರು. ಕೆಲವರು ಸ್ವಯಂ ಘೋಷಿತ ಅಭ್ಯರ್ಥಿಯೆಂದು ಬಿಂಬಿಸಿದ್ದಾರೆ. ನಮ್ಮಹೋರಾಟ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಶಾಮನೂರು ಕುಟುಂಬವನ್ನು ಎದುರಿಸುವ ತಾಕತ್ತು ತಮಗೆ ಮಾತ್ರ ಇದೆಯೆಂಬಂತೆ ಬಿಂಬಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಗಂಡಸರು ಯಾರೂ ಇಲ್ಲವೆಂಬಂತೆ ಬಿಜೆಪಿ ಹೈಕಮಾಂಡ್‌ಗೆ ತಪ್ಪಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಸಿದ್ದೇಶ್ವರ ಹೆಸರನ್ನು ಪ್ರಸ್ತಾಪಿಸದೇ ಅವರು ವಾಗ್ದಾಳಿ ನಡೆಸಿದರು.

............................................ಬಿಜೆಪಿಗೆ ಗಾಯತ್ರಿ ಸಿದ್ದೇಶ್ವರ ಕೊಡುಗೆ ಏನು?

ಅಮಿತ್ ಶಾ ಕೈಯಲ್ಲಿದ್ದ ಪಟ್ಟಿಯಲ್ಲಿ ಸಿದ್ದೇಶ್ವರ ಕುಟುಂಬದ ಹೆಸರೇ ಇರಲಿಲ್ಲ

ದಾವಣಗೆರೆ ಲೋಕಸಭಾ ಕ್ಷೇತ್ರದ ಸಮೀಕ್ಷೆ ಸಂಸದ ಸಿದ್ದೇಶ್ವರ ವಿರುದ್ಧವಾಗಿದ್ದರೂ, ನೂರಕ್ಕೆ ನೂರರಷ್ಟು ಸಮೀಕ್ಷೆ ಹಾಲಿ ಸಂಸದರ ವಿರುದ್ಧವಾಗಿ ಬಂದಿದೆ ಡಾ.ಟಿ.ಜಿ.ರವಿಕುಮಾರ್‌ಗೆ ಟಿಕೆಟ್ ನೀಡುವಂತೆ ಒಮ್ಮತದಿಂದ ಹೈಕಮಾಂಡ್‌ಗೆ ಮನವಿ ಮಾಡಿದ್ದೆವು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಸಿದ್ದೇಶ್ವರ ಭಂಡತನದಿಂದ ತಮ್ಮ ಕುಟುಂಬಕ್ಕೆ ಟಿಕೆಟ್ ಪಡೆದಿದ್ದಾರೆ. ವೈದ್ಯರ ಮಗನು ವೈದ್ಯನಾಗಲು ಎಂಬಿಬಿಎಸ್ ಶಿಕ್ಷಣ ಮಾಡಬೇಕು. ಬರೀ ಅಪ್ಪನ ಸ್ಟೆತಾಸ್ಕೋಪ್ ಹಿಡಿದರೆ ಅಂತಹವನು ವೈದ್ಯನಾಗದೇ, ನಕಲಿ ವೈದ್ಯ ಎನಿಸಿಕೊಳ್ಳುತ್ತಾನೆ. ಯಾವತ್ತಾದರೂ ಸಂಸದರ ಪತ್ನಿ, ಪತ್ರ ಬಿಜೆಪಿಗೆ ಜೈ ಅಂತಾ ಘೋಷಣೆ ಕೂಗಿದ್ದಾರಾ? ಸಿದ್ದೇಶ್ವರರ ಪತ್ನಿ, ಪುತ್ರ ಬಿಜೆಪಿಗೆ ನೀಡಿದ ಕೊಡುಗೆಯಾದರೂ ಏನು? ಗೂಂಡಾಗಿರಿ, ದಾದಾಗಿರಿ ನಡೆಯೊಲ್ಲ. ರೌಡಿಗಳ ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಕೆಲವರಿಗೆ ಬೆದರಿಕೆಯನ್ನೂ ಹಾಕಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೈಯಲ್ಲಿರುವ ಪಟ್ಟಿಯಲ್ಲಿ ಸಿದ್ದೇಶ್ವರ ಆಗಲೀ, ಸಿದ್ದೇಶ್ವರರ ಪತ್ನಿ ಹೆಸರಾಗಲೀ ಇಲ್ಲ ಎಂದು ಟೀಕಿಸಿದರು. ಸಿದ್ದೇಶ್ವರ್‌ ಕುಟುಂಬ ರಾಜಕಾರಣಕ್ಕೆ ವಿರೋಧ

ಬಿಜೆಪಿಯಲ್ಲಿ ಸಾಕಷ್ಟು ಸಮರ್ಥರಿದ್ದೇವೆ. ದಾವಣಗೆರೆಯಲ್ಲಿ ಬಿಜೆಪಿ ಕಟ್ಟಿದ ಭೀಷ್ಮ ಎಸ್.ಎ.ರವೀಂದ್ರನಾಥ್‌. ಆದರೆ, ಸಂಸದರು ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದೆಂದು ಹೊರಟಿದ್ದಾರೆ. ಸಿದ್ದೇಶ್ವರ ಮತ್ತು ಕುಟುಂಬ ರಾಜಕಾರಣಕ್ಕೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ವಿರೋಧವಿದೆ. ಜಿ.ಎಂ.ಸಿದ್ದೇಶ್ವರರ ಕುಟುಂಬಕ್ಕೆ ಕೊಟ್ಟಿರುವ ಟಿಕೆಟ್‌ನ್ನು ಹೈಕಮಾಂಡ್ ತಕ್ಷಣ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಮತ್ತೊಂದು ಸಭೆ ಮಾಡಿ, ನಮ್ಮ ಮುಂದಿನ ನಿಲುವು, ತೀರ್ಮಾನ ಕೈಗೊಳ್ಳುತ್ತೇವೆ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ