ಸಾರಾಂಶ
ರಾಣಿಬೆನ್ನೂರು: ಸಮಾಜದಲ್ಲಿ ಭಕ್ತಿಯ ಜತೆಗೆ ಮಹಿಳೆಯರ ಶಕ್ತಿಯು ಸಹ ತಿಳಿಯಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಆಚಾರ್ಯ ವಿಚಾರಗಳ ಬಗ್ಗೆ ಜಾಗೃತಿ ಹೊಂದಬೇಕು ಎಂದು ರಾಮಕೃಷ್ಣ ಆಶ್ರಮದ ಪ್ರಕಾಶನಂದ ಮಹಾರಾಜ ಸ್ವಾಮೀಜಿ ನುಡಿದರು. ನಗರದ ನಗರಸಭಾ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸೇವಾ ಸಂಸ್ಥೆ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ರಾಣಿಬೆನ್ನೂರು ಕಾ ರಾಜಾ ಗಣಪತಿಯ ನವದುರ್ಗಿಯರ ವೈಭವ ಗಣೇಶ ಮಂಟಪ ಹಾಗೂ ಸಾಧಕಿಯ ಮಹಿಳೆಯರ ಕುರಿತು ರಚಿಸಿರುವ ಪ್ರಾತಃಸ್ಮರಾಮಿ ಎಂಬ ಗ್ರಂಥ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸದ್ಯ ರಾಜ್ಯ ಹಾಗೂ ದೇಶದಲ್ಲಿ ಗಣೇಶ ಉತ್ಸವ ಹಾಡುಗಳು ಕುಣಿತದ ಮೂಲಕ ಅಂತ್ಯವಾಗುತ್ತಿದೆ. ಆದರೆ ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಹಿತ್ಯಕವಾಗಿ ಮಾರ್ಪಡಿಸಿ ಅದನ್ನು ಹಬ್ಬವನ್ನಾಗಿ ಜನರಿಗೆ ತೋರಿಸಿದ ವಂದೇ ಮಾತರಂ ಸ್ವಯಂ ಸೇವಾ ಸಂಘ ಕಾರ್ಯ ಶಾಘ್ಲನೀಯ. ಇಂತಹ ಸಂಘ ಪ್ರತಿ ವರ್ಷವೂ ವಿಶೇಷವಾಗಿ, ವಿಭಿನ್ನವಾಗಿ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇಂದಿನ ಮಕ್ಕಳಲ್ಲಿ ದೇಶದ ಸಂಸ್ಕೃತಿ, ಪರಂಪರೆ, ಆಚಾಯ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿ ಅರಿವು, ಪ್ರಜ್ಞೆ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು. ಎಂ.ಎಸ್. ರಾಘವೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಗಣೇಶ ಉತ್ಸವ ಪ್ರಾರಂಭವಾಗಿದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲಾದ ರಾಣಿಬೇನ್ನೂರು ನಗರದಿಂದ ಎಂಬುದು ವಿಶೇಷ. ರಾಣಿಬೆನ್ನೂರು ನಗರದಲ್ಲಿ 1925ರಂದು ಮಾರ್ಕೆಟ್ ಗಲ್ಲಿಯಲ್ಲಿ ಮುದವೀಡು ಕೃಷ್ಣರಾಯರು ಗಣೇಶನ ಪ್ರತಿಷ್ಠಾಪನೆ ಮಾಡಿದರು. ಅದರಂತೆ ರಾಣಿಬೆನ್ನೂರು ನಗರದಲ್ಲಿ ವಂದೇ ಮಾತರಂ ಸಂಘದ ಸದಸ್ಯರು ಪ್ರತಿ ವರ್ಷವೂ ವಿನೂತನ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿ ಹೆಸರು ಮಾಡಿದೆ ಎಂದರು.ಈ ಬಾರಿ ರಾಣೆಬೇನ್ನೂರು ನಗರದಲ್ಲಿ ವಿಶೇಷವಾಗಿ ಪ್ರಾತಃ ಸ್ಮರಾಮಿ ಎಂಬ ಗ್ರಂಥ ರಚನೆ ಮಾಡುವ ಮೂಲಕ ರಾಜ್ಯದ 37 ಮಹಿಳೆಯರ ಸಾಧನೆ ಬಗ್ಗೆ ಚಿತ್ರಿಸಿ ಅವರ ಜೀವನ ವಿವರಿಸಲಾಗಿದೆ ಎಂದರು. ವಂದೇ ಮಾತರಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ಗಣೇಶ ದರ್ಶನಕ್ಕೆ ಬಂದವರಿಗೆ ಪುಸ್ತಕವನ್ನು ಉಚಿತವಾಗಿ ನೀಡಲಾಗುವುದು. ಮಹಿಳೆಯರು ಸಾಧಕರು ಅನ್ನುವ ರೀತಿಯಲ್ಲಿ ಪುಸ್ತಕ ರಚನೆ ಮಾಡಿದ್ದೇವೆ. ನಮ್ಮ ಮಹಿಳೆಯರು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಮಾರುಹೋಗಿ ಅದನ್ನೇ ಅನುಕರಣೆ ಮಾಡುತ್ತಾ ನಮ್ಮ ದೇಶದ ಸಂಸ್ಕೃತಿಯ ಕಡೆಗಣನೆ ಮಾಡುತ್ತಿರುವುದು ಕಂಡುಬಂದಿದೆ. ಇದರಿಂದಾಗಿ ಈ ಪುಸ್ತಕದಲ್ಲಿ ನಮ್ಮ ದೇಶದಲ್ಲಿ ಬ್ರಿಟಿಷರು ವಿರುದ್ಧ ಹೋರಾಡಿದ ಮಹಿಳೆಯರು, ಸಂಸ್ಕೃತ ಪರಂಪರೆಗೆ ಹೋರಾಟ ಮಾಡಿದ ಅನೇಕ ಮಹಿಳೆಯರ ಕುರಿತು ಪ್ರಕಟಿಸಲಾಗಿದೆ ಎಂದರು. ನಗರಸಭೆ ಸದಸ್ಯರಾದ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಲೇಖಕ ಪ್ರಮೋದ ನಲವಾಗಲ, ಪ್ರೇಮಕುಮಾರ ಬಿದರಕಟ್ಟಿ, ಅಜಯ್ ಮಠದ, ವೀರೇಶ ಹೆದ್ದೇರಿ ಮತ್ತಿತರು ಇದ್ದರು.