ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕನ್ನಡ ಭಾಷೆ ಜೊತೆಗೆ ಸಾಹಿತ್ಯವು ಸಹ ನಶಿಸಿ ಹೋಗುವ ಒತ್ತಡಕ್ಕೆ ಸಿಲುಕಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಕಸಾಪ ಭವನದಲ್ಲಿ ಕಸಾಪ ವತಿಯಿಂದ ನಡೆದ ಸಾಹಿತಿ ಸುಜಾತಕೃಷ್ಣ ಅವರ ‘ನೀ ಬಿಟ್ಟು ಹೋದ ಲೇಖನಿ ಹನಿಗವನ’ ಸಂಕಲನ ಲೋಕಾರ್ಪಣೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅಳಿವಿನ ಹಂಚಿನಲ್ಲಿರುವುದು ಒಂದೆಡೆಯಾದರೆ, ಕನ್ನಡ ಸಾಹಿತ್ಯ ಕ್ಷೇತ್ರವು ಸಹ ಅದೇ ದಾರಿಯಲ್ಲಿ ಸಾಗುತ್ತಿರುವುದು ಮತ್ತಷ್ಟು ಆತಂಕ ಸೃಷ್ಠಿಸುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬರೆಯುವ, ಸಂಶೋಧಿಸುವ ಸಾಹಿತಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಕನ್ನಡ ಭಾಷೆ ಅಲ್ಪಸ್ವಲ್ಪ ಉಳಿದು ಬೆಳೆಯುತ್ತಿದೆ ಎಂದರೆ ಅದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಎಲ್ಲಾ ಕ್ಷೇತ್ರದಲ್ಲೂ ನಡೆದ ಹೊಸಹೊಸ ಪ್ರಯೋಗಗಳು ಸಾಹಿತ್ಯ ಕ್ಷೇತ್ರದಲ್ಲೂ ಸಹ ನಡೆದಿದೆ. ಈಪ್ರಯೋಗಗಳು ಮಾರಕವಾಗಿ ಸಾಹಿತ್ಯ ಕ್ಷೇತ್ರಕ್ಕೆ ಧಕ್ಕೆ ಮಾಡಬಾರದು ಎಂದರು.
ಹಿಂದಿನ ಪೀಳಿಯಲ್ಲಿ ಸಾಹಿತ್ಯ ಒಂದು ಉದ್ಯೋಗವಾಗಿತ್ತು. ಕುವೆಂಪು, ಬೇಂದ್ರೆ ಸೇರಿದಂತೆ ಅನೇಕ ದೊಡ್ಡ ದೊಡ್ಡ ಸಾಹಿತಿಗಳು ಸಾಹಿತ್ಯ ಕ್ಷೇತ್ರವನ್ನು ಉದ್ಯೋಗವಾಗಿಸಿಕೊಂಡಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರವನ್ನು ಎಷ್ಟು ಮಂದಿ ಉದ್ಯೋಗವಾಗಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.ಕನ್ನಡ ಸಾಹಿತ್ಯ, ಕನ್ನಡ ವಿಷಯದಲ್ಲಿ ಅಧ್ಯಾಯನ ಮಾಡಿದ ಎಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ವೃತ್ತಿಪರ ಕೋರ್ಸ್ ಗಳ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಕೇವಲ ನಾಮಕವಸ್ಥೆಗೆ ಒಂದು ವಿಷಯವನ್ನಾಗಿ ಪಠ್ಯಕ್ರಮವಾಗಿಸಿಕೊಂಡಿದ್ದಾರೆ. ಹಾಗಾಗಿ ಕನ್ನಡ ಭಾಷೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಬಗ್ಗೆ ಚಿಂತನೆ ಮಾಡುವುದರ ಜತೆಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳಿಗೆ ಕನ್ನಡ ಭಾಷೆ ವ್ಯಾಕರಣಗಳ ಬಗ್ಗೆಯೂ ಅರಿವು ಮೂಡಿಸಬೇಕು. ವ್ಯಾಕರಣ ಇಲ್ಲದ ಭಾಷೆ, ಸಾಹಿತ್ಯ ಹೆಚ್ಚುಕಾಲ ಉಳಿಯಲು ಸಾಧ್ಯವಿಲ್ಲ. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯಲ್ಲೂ ಬರುವ ವಿದೇಶಿ ಸಾಹಿತ್ಯಗಳನ್ನು ಸಹ ಗುರುತಿಸುವುದು ಸಾಧ್ಯವಾಗುತ್ತಿಲ್ಲ ಎಂದರು.ಸಾಹಿತ್ಯಕ್ಕೆ ಹಿಂಜರಿತ ಉಂಟಾಗಿದೆ. ಸಂಘಟನೆಗಳ ಮೂಲಕ ಪ್ರಬಲಗೊಳಿಸುವ ಜತೆಗೆ ಮಕ್ಕಳಿಗೆ ಭಾಷಾ ಸಾಹಿತ್ಯ ಪ್ರೇಮವನ್ನು ಮಕ್ಕಳಿಗೆ ಓದಿ, ಬರೆಯುವ ಅಧ್ಯಾಯನ ಶೀಲತೆ ಹೆಚ್ಚಿಸುವ ಕೆಲಸ ಮಾಡುವ ಮೂಲಕ ಭಾಷೆ ಉಳಿಸುವ ಕೆಲಸಮಾಡಬೇಕು ಎಂದರು.
ಮುಖಂಡ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ರಾಜಕಾರಣಿಗಳು ಹೆಚ್ಚಾಗಿ ಕನ್ನಡ, ಕಾವೇರಿಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ, ಅವುಗಳನ್ನು ಉಳಿಸಿ ಸಂರಕ್ಷಿಸುವ ಕೆಲಸವನ್ನು ಯಾರು ಮಾಡುತ್ತಿಲ್ಲ. ಬರೀ ಮಾತು, ವೇದಿಕೆಗಳಿಗೆ ಸೀಮಿತವಾಗುತ್ತಿವೆ ಎಂದು ವಿಷಾದಿಸಿದರು.ಪೋಷಕರು ಇಂಗ್ಲಿಷ್ ವ್ಯಾಮೋಹದಿಂದ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ. ಕನ್ನಡದ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಸಾಹಿತಿಗಳಲ್ಲಿ ಕಿಚ್ಚು ಇರಬೇಕು, ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಬೇಕು, ರಾಜಕಾರಣಿಗಳ ಲೋಪ ಎತ್ತಿತೋರಿಸಬೇಕು ಎಂದರು.
ಕಾರ್ಯಕ್ರಮದ ಬಳಿಕ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಸಾಹಿತಿ ತಿರುಮಲಾಪುರ ನಾರಾಯಣ ಉದ್ಘಾಟಿಸಿದರು. ಕವಿ ಗೋಷ್ಠಿಯಲ್ಲಿ ರಾಜ್ಯದ ಹಲವೆಡೆಯಿಂದ 35ಕ್ಕೂ ಅಧಿಕ ಕವಿಗಳು ಭಾಗವಹಿಸಿ ಕವಿತೆ ವಾಚನ ಮಾಡಿದರು. ಸುಂಕಾತೊಣ್ಣೂರು ಶಿವಕುಮಾರ್ ಶುಭಕೋರಿದರು.ಸಮಾರಂಭದಲ್ಲಿ ಉಪನ್ಯಾಸಕ ಸತ್ಯನಾರಾಯಣ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಸಾಹಿತಿ ಮಜ್ಜಿಗೆಪುರ ಶಿವರಾಂ, ಕೆ.ಆರ್.ಪೇಟೆ ಬಿಇಒ ಸೀತಾರಾಮ್, ಲೇಖಕಿ ಸುಜಾತಕೃಷ್ಣ, ಎಚ್.ಆರ್.ಧನ್ಯಕುಮಾರ್, ಚಂದ್ರಶೇಖರಯ್ಯ, ಬಿಆರ್‌ಸಿ ಪ್ರಕಾಶ್, ಡಾ.ಎಸ್.ಸಿ.ಮಂಗಳ, ಚಲುವೇಗೌಡ, ಹೊನ್ನೇಗೌಡ, ಕಸಾಪ ಮಂಡ್ಯ ನಗರಾಧ್ಯಕ್ಷೆ ಸುಜಾತಕೃಷ್ಣ, ಲಯನ್ ಗೌರವಾಧ್ಯಕ್ಷ ಶಿವಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.