ಸಾರಾಂಶ
ಅರುಣ್ ಕುಮಾರ್.ಎಸ್.ವಿ
ಗೌರಿಬಿದನೂರು : ರಾಜ್ಯಾದ್ಯಂತ ಕೃತಕ ಬಣ್ಣಗಳ ಬಳಕೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೂ ನಗರದ ಹೃದಯ ಭಾಗದಲ್ಲಿರುವ ಬೇಕರಿಗಳಲ್ಲಿ ಕೇಕ್, ಬ್ರೆಡ್ ಮತ್ತಿತರ ತಿನಿಸುಗಳಿಗೆ ಮಿತಿ ಇಲ್ಲದೆ ಬಣ್ಣಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ.
ತಯಾರಿಕೆಗೆ ಸ್ವಚ್ಛವಲ್ಲದ ನೀರು ಬಳಸುತ್ತಿರುವುದು, ಸ್ವಚ್ಛತೆ ಇಲ್ಲದೆ ಇರುವ ಕಲ್ಲುಗಳ ಮೇಲೆ ಮಕ್ಕಳು ತಿನ್ನುವ ಕ್ರೀಮ್ ಗಳನ್ನು ಇಟ್ಟುಕೊಂಡು ಕೇಕ್ ತಯಾರಿಸುತ್ತಿರುವುದು ಆಹಾರ ಪ್ರಿಯರ ನಿದ್ದೆಗೆಡಿಸಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿರುವುದು ವಿಷಾದನೀಯ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಗುಣಮಟ್ಟವಿಲ್ಲದ ಹಾಗೂ ಸ್ವಚ್ಛವಲ್ಲದ ಆಹಾರ ಪದಾರ್ಥಗಳನ್ನು ಬೇಕರಿಗಳು ತಯಾರಿಸಿ ಗ್ರಾಹಕರಗೆ ಮಾರಾಟ ಮಾಡುತ್ತಿವೆ. ಜನರ ಆರೋಗ್ಯವನ್ನು ನಿರ್ಲಕ್ಷಿಸಿ ಕೇವಲ ಹಣ ಮಾಡುವ ಉದ್ದೇಶದಿಂದ ಯಾವುದೇ ಉತ್ಪನ್ನದ ಗುಣಮಟ್ಟವನ್ನು ಸಹ ಪರೀಕ್ಷಿಸದೆ ಹಲವು ಬೇಕರಿಗಳು ಮಾರಾಟ ಮಾಡುತ್ತಿವೆ. ಸಾರ್ವಜನಿಕರ ಪ್ರಾಣಕ್ಕಾಗುವ ಅಪಾಯವನ್ನೂ ಲೆಕ್ಕಿಸದೆ ಬೇಕರಿ ಪದಾರ್ಥಗಳನ್ನು ತಯಾರಿಸಲು ಬಳಸುವ ಕೆಮಿಕಲ್ ಮಿಶ್ರಣವನ್ನು ಇತಿ-ಮಿತಿಇಲ್ಲದೆ ಬಳಸುತ್ತಿದ್ದಾರೆ. ಕೇಕ್ ತಯಾರಿಸಲು ಬಳಸುವ ಅಲ್ಯೂಮಿನಿಯಂ ಟ್ರೇಗಳಿಗೆ ಬಣ್ಣದ ಸ್ಪ್ರೇಗಳನ್ನು ಬಳಸಿ ಕೇಕ್ ಮತ್ತಿತರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ.
ಪದಾರ್ಥಗಳನ್ನು ತಯಾರಿಸುವ ಸಿಬ್ಬಂದಿ ಅನೈರ್ಮಲ್ಯವಾಗಿರುತ್ತಾರೆ. ಕೈಗೆ ಹ್ಯಾಂಡ್‌ಗ್ಲೌಸ್ ಮತ್ತು ತಲೆಗೆ ಹೆಡ್ಮಾಸ್ಕ್ ಧರಿಸಿರುವುದಿಲ್ಲ, ತಿನಿಸುಗಳನ್ನು ತಯಾರಿಸುವ ಸ್ಥಳದಲ್ಲಿ ಸ್ವಲ್ಪವೂ ಸ್ವಚ್ಛವಾಗಿಟ್ಟುಕೊಂಡಿರುವುಲ್ಲ, ಪದಾರ್ಥಗಳನ್ನು ತಯಾರಿಸುವ ಅಡುಗೆ ಕೋಣೆಯ ಪಕ್ಕದಲ್ಲೇ ಸಾರ್ವಜನಿಕರು ಮೂತ್ರ-ವಿಸರ್ಜನೆ ಮಾಡುತ್ತಿರುವುದು, ಕನಿಷ್ಠ ಕಿಟಕಿಗೆ ಗಾಜಿನ ಮೆಷ್ ಅಥವಾ ಫೈಬರ್ ಶೀಟ್ ಸಹ ಅನೇಕ ಕಡೆಗಳಲ್ಲಿ ಅಳವಡಿಸಿಲ್ಲ.
ಯಾವೆಲ್ಲ ಅಪಾಯ ತರಲಿದೆ:
ಕೃತಕ ಸಿಂಥೆಟಿಕ್ ಬಣ್ಣಗಳನ್ನು ಮಕ್ಕಳು ಸೇವಿಸಿದಾಗ ಅವರಲ್ಲಿ ಆಕ್ರಣಮಕಾರಿ ನಡವಳಿಕೆ ಬೆಳವಣಿಗೆ ಉಂಟಾಗುವ ಸಾಧ್ಯತೆ ಇದೆ. ಇದರಲ್ಲಿನ ಕೆಲವು ಕಾರ್ಸಿನೋಜೆನಿಕ್ ಮತ್ತು ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಈಗಾಗಲೇ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆ ಹೊಂದಿರುವ ಮಕ್ಕಳು ಕೃತಕ ಬಣ್ಣಗಳ ಸೇವನೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತವೆ.
ಈ ರೀತಿಯ ಕೃತಕ ಬಣ್ಣದ ಆಹಾರಗಳನ್ನು ಸೇವಿಸುವುದರಿಂದ ಮೆದುಳಿನ ಸೆರೆಬೆಲ್ಯೂಮ್ ಅಂಗಾಂಶಕ್ಕೆ ಹಾನಿ ಆಗುತ್ತದೆ. ಈ ರಾಸಾಯನಿಕವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮೆದುಳಿನ ಕಾರ್ಯಾಚರಣೆಗೂ ಅಡ್ಡಿಯುಂಟಾಗುತ್ತದೆ. ಕೃತಕಬಣ್ಣಗಳು ಆಹಾರವನ್ನು ನೋಡುವಲ್ಲಿ ಕಣ್ಸೆಳೆಯುವಂತೆ ಮಾಡಿ, ಇದು ಗ್ರಾಹಕರಲ್ಲಿ ತಿನ್ನುವ ಬಯಕೆಯನ್ನು ಹೆಚ್ಚಿಸಲಿವೆ. ಕೃತಕ ಬಣ್ಣಗಳು ಅಲರ್ಜಿ, ಮಕ್ಕಳಲ್ಲಿ ಅಧಿಕ ಕ್ರಿಯಾಶೀಲತೆ ಹಾಗೂ ಕಾರ್ಸಿನೋಜೆನಿಕ್, ಆಕ್ಸಿಡೇಟಿವ್ ಒತ್ತಡ ಮತ್ತು ಕೋಶಗಳ ಅಪೊಪ್ಟೋಸಿಸ್ ಮತ್ತು ಬ್ರೈನ್ಸ್ಟೆಮ್ ಮೇೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಆಹಾರ ಸುರಕ್ಷತೆಗೆ ಅಧಿಕಾರಿಗಳೇ ಇಲ್ಲ
ಗೌರಿಬಿದನೂರು ತಾಲೂಕಿಗೆ ಆಹಾರ ಸುರಕ್ಷತಾ ಅಧಿಕಾರಿಗಳೇ ಇಲ್ಲದಂತಾಗಿದೆ. ಮೊದಲಿದ್ದ ಅಧಿಕಾರಿಯೊಬ್ಬರು ರಜೆಯಲ್ಲಿದ್ದಾರೆ. ಅವರು ಬಿಟ್ಟರೆ ಪ್ರಭಾರ ಆಧಿಕಾರಿ ಇಲ್ಲದಂತಾಗಿದೆ. ಇದರಿಂದ ಬೇಕರಿ ಮಾಲೀಕರಿಗೆ ಯಾವ ಅಧಿಕಾರಿಯ ಭಯವು ಇಲ್ಲದೇ ನಿರ್ಭಯವಾಗಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ.
ನಗರಸಭೆಯಿಂದ ಹಲವು ಬಾರಿ ಬೇಕರಿಗಳಿಗೆ, ಹೋಟೆಲ್‌ಗಳಿಗೆ, ಫಾಸ್ಟ್‌ಫುಡ್ ಸೆಂಟರ್‌ಗಳಿಗೆ ಭೇಟಿ ನೀಡಿ ನಿಷೇಧಿತ ಕೃತಕ ಬಣ್ಣಗಳನ್ನು ಗಮನಿಸಿ ದಂಡ ವಿಧಿಸಿದ್ದೇವೆ. ಆಹಾರ ಸುರಕ್ಷತಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಯುವ ಪೀಳಿಗೆಗೆ ಅಪಾಯ ಕಟ್ಟಿಟ್ಟಬುತ್ತಿಯಾಗಿದೆ.
ಡಿ.ಎಂ.ಗೀತಾ, ನಗರಸಭೆ ಆಯುಕ್ತರು, ಗೌರಿಬಿದನೂರು.