ಸಾರಾಂಶ
ಮಠಮಾನ್ಯ, ಅನ್ನದಾತರ ಆಸ್ತಿಗೆ ಕಣ್ಣು ಹಾಕಿದ್ರೆ ಸುಮ್ಮನಿರಲ್ಲ. ವಕ್ಫ್ ಮಂಡಳಿ ರದ್ದು ಮಾಡುವಂತೆ ಗುಡುಗಿದ ಸ್ವಾಮೀಜಿಗಳು. ಸಂತರು ವಕ್ಫ್ ವಿಷಗಾಳಿ ಬೀಸಲು ಕಾಂಗ್ರೆಸ್ ಕಾರಣವೆಂದು ದೂರಿದ್ದಾರೆ. ಮಠಾಧೀಶರ ಇಂದಿನ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಬೆಂಬಲಿಸಿತ್ತು.
ಕಲಬುರಗಿ : ವಕ್ಫ್ ವಿರುದ್ಧ ಕಲಬುರಗಿಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಬೀದಿಗಿಳಿದು ಭಾರಿ ಹೋರಾಟ ನಡೆಸಿ ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಈ ಹೋರಾಟದ ಮೂಲಕ ವಕ್ಫ್ ಮಂಡಳಿಯನ್ನೇ ರದ್ದುಪಡಿಸುವಂತೆ ಮಠಾಧೀಶರು ಆಗ್ರಹಿಸಿದ್ದಾರೆ.
ಗುರುವಾರ ನಗರೇಶ್ವರ ಶಾಲೆಯಿಂದ ಶುರುವಾದ ಹೋರಾಟದ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂತು. ಮೆರವಣಿಗೆಯುದ್ದಕ್ಕೂ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಮ್ಮ ಆಸ್ತಿ, ನಮ್ಮ ಹಕ್ಕು, ಯಾರೇ ಕಣ್ಣು ಹಾಕಿದರೂ ಸುಮ್ಮನಿರಲ್ಲ ಎಂದು ಗುಡುಗಿರುವ ಜಿಲ್ಲೆಯ ವಿವಿಧ ಮಠಾಧೀಶರು, ಸಂತರು ವಕ್ಫ್ ವಿಷಗಾಳಿ ಬೀಸಲು ಕಾಂಗ್ರೆಸ್ ಕಾರಣವೆಂದು ದೂರಿದ್ದಾರೆ. ಮಠಾಧೀಶರ ಇಂದಿನ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಬೆಂಬಲಿಸಿತ್ತು. ಬಿಜೆಪಿಯ ಮುಖಂಡರು, ಜಿಲ್ಲಾ ಪ್ರಮುಖರು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಆಂದೋಲಾ ಕರುಣೇಶ್ವರ ಮಠದ ಸಿದ್ಧಲಿಂಗ ಶ್ರೀಗಳು, ರೋಜಾ ಕೆಂಚಬಸವ ಶಿವಾಚಾರ್ಯರು, ಶ್ರೀನಿವಾಸ ಸರಡಗಿ ಅಪ್ಪಾರಾವ ದೇವಿ ಮುತ್ಯಾ, ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಗದ್ದುಗೆ ಮಠ ಚರಲಿಂಗ ಮಹಾಸ್ವಾಮಿಗಳು, ಬೆಳಗುಂಪಾ ಪರ್ವತೇಶ್ವರ ಸ್ವಾಮಿಗಳು, ಬಬಲಾದ ದೇವಾಪುರದ ಶಿವಮೂರ್ತಿ ಶಿವಾಚಾರ್ಯರು ಮಾತನಾಡುತ್ತಾ, ರೈತರು, ಮಠಗಳ ಆಸ್ತಿಗಳ ಮೇಲೆ ವಕ್ಫ್ ಹದ್ದಿನ ಕಣ್ಣು ಬಿದ್ದಿದೆ. ನೋಟಿಸ್ ವಾಪಸ್ ಪಡಿತೀವಿ ಎಂದಿದ್ದಾರೆ, ಅದು ಕಣ್ಣೊರೆಸುವ ತಂತ್ರ, ಗೆಜೆಟ್ ವಾಪಸ್ ಪಡೆಯುವಂತಾಗಬೇಕೆಂದು ಆಗ್ರಹಿಸಿದರು.
ಬಿಜೆಪಿ ಮೇಲ್ಮನೆ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿ ಶಶಿಲ್ ನಮೋಶಿ, ಬಿಜಿ ಪಾಟೀಲ್, ನಗರಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ನಿತಿನ್ ಗುತ್ತೇದಾರ್, ಮಣಿಕಂಠ ರಾಠೋಡ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಸಮೀತಿ ಅಧ್ಯಕ್ಷ ಎಂಎಸ್ ಪಾಟೀಲ್ ನರಿಬೋಳ್, ನೇಗಿಲಯೋಗಿ ಸಂಘಟನೆಯ ಮುಖಂಡರಾದ ಪ್ರಶಾಂತ ಗುಡ್ಡಾ, ಅಶ್ವಿನ ಕುಮಾರ್, ದಯಾನಂದ ಪಾಟೀಲ್, ಅನೀಲ ತಂಬಾಕೆ ಇದ್ದರು.1974ರ ಗೆಜೆಟ್ ರದ್ದುಪಡಿಸಲಿ: ಛಲವಾದಿ ನಾರಾಯಣಸ್ವಾಮಿ
ವಕ್ಫ್ ಮಂಡಳಿ ಆಸ್ತಿ ವಿಚಾರದಲ್ಲಿ ಗೊಂದಲ ಮೂಡಿಸಿರುವ 1974ರ ಗೆಜೆಟ್ ನೋಟಿಫಿಕೇಷನ್ ಸರ್ಕಾರ ರದ್ದು ಮಾಡಲಿ. ಈಗ ಆ ಸಮಯ ಕೂಡಿ ಬಂದಿದೆ ಎಂದು ಮೇಲ್ಮನೆಯಲ್ಲಿ ಬಿಜೆಪಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲವನ್ನೂ ತನ್ನದೇ ಆಸ್ತಿ ಎನ್ನುವ ಮಂಡಳಿಯ ತೀರ್ಮಾನ ವಿರೋಧಿಸಲೇಬೇಕು. ಈ ಸರ್ಕಾರ ನೋಟಿಫಿಕೇಷನ್ ಮರಳಿ ಪಡೆಯೋದಾಗಿ ಹೇಳೋದು ಕಣ್ಣೊರೆಸುವ ತಂತ್ರ. ತಕ್ಷಣ ಗೆಜೆಟ್ ರದ್ದು ಮಾಡಲಿ. ರೈತರಿಗೆ ಪರಿಹಾರ ನೀಡಲಿ ಎಂದರು.
ಲೋಪ ಸರಿ ಮಾಡುತ್ತೇವೆಂದು ಹೇಳುತ್ತ ಸರ್ಕಾರ, ಸಿಎಂ ರೈತರ ದಾರಿ ತಪ್ಪಿಸುತ್ತಿದ್ದಾರೆ. ರೈತರು ಇದನ್ನ ನಂಬಬಾರದು ಎಂದ ಅವರು ಗ್ಯಾರಂಟಿ ಕನಸಲ್ಲಿರುವ ಸರ್ಕಾರ ಹಗರಣಗಳ ಆಗರವಾಗಿದೆ. ಅದಕ್ಕೆ ಜನರ ಕಷ್ಟ- ನಷ್ಟಗಳು ಗೊತ್ತಿಲ್ಲವೆಂದರು.ಮಠಾಧೀಶರ ಗುಡುಗು: ನೇಗಿಲಯೋಗಿ ಸ್ವಾಭಿಮಾನಿ ವೇದಿಕೆ ಆಯೋಜಿಸಿದ್ದ ಇಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 50ಕ್ಕೂ ಹೆಚ್ಚು ಮಠಾಧೀಶರು ಸರ್ಕಾರದ ಯಾವ ಸಚಿವರು ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ವಿರುದ್ಧ ಮಾತಾಡುತ್ತಿಲ್ಲ. ಕಾಟಾಚಾರದ ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ರೈತರ ಪರವಾಗಿ ನಿಲ್ಲುತ್ತಿಲ್ಲ ಎಂದು ಗುಡುಗಿದ್ದಾರೆ. ಷರತ್ತು ಬದ್ಧವಾಗಿ ಯಾವುದೇ ದಾಖಲೆ ರೈತರಿಂದ ಪಡೆಯದೆ ಸರ್ಕಾರ ಅವರ ಪಹಣಿ ಕಾಲಂ 11ರಲ್ಲಿರುವ ವಕ್ಫ್ ಹೆಸರು ತೆಗೆದು ಹಾಕಬೇಕು, ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು, ಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿ ತಕ್ಷಣ ಆಗಿರುವ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.