ಅಂಬೇಡ್ಕರ್‌ ಜಾಗತಿಕ ಮಟ್ಟದ ಚಿಂತಕ: ಪೀರ್ ಬಾಷಾ

| Published : Apr 18 2025, 12:39 AM IST

ಸಾರಾಂಶ

ಕೇವಲ ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಬಾಬಾ ಸಾಹೇಬ್ ಮಾನವ ಹಕ್ಕುಗಳ ಬಗ್ಗೆ ಸಂಘಟನೆ ಮಾಡಿದರು. ಆದ್ದರಿಂದ ಅಮೆರಿಕದಲ್ಲಿಯೂ ಅವರ ಬೃಹತ್ ಪ್ರತಿಮೆಯನ್ನು ಸಮಾನತೆಯ ಪ್ರತಿಮೆಯ ದ್ಯೋತಕವಾಗಿ ಸ್ಥಾಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಡಾ. ಬಿ.ಆರ್. ಅಂಬೇಡ್ಕರ್‌ ಜಾಗತಿಕ ಮಟ್ಟದ ಚಿಂತಕ ಹಾಗೂ ಸಾಮಾಜಿಕ ಎಂಜಿನಿಯರ್‌ ಎಂದು ಚಿಂತಕ ಪೀರ್ ಬಾಷಾ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ 134ನೇ ಜಯಂತಿಯ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯಗಳು ಹಾಗೂ ಸಂಘರ್ಷ ಎಂಬ ವಿಷಯ ಕುರಿತು ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಬಾಬಾ ಸಾಹೇಬ್ ಮಾನವ ಹಕ್ಕುಗಳ ಬಗ್ಗೆ ಸಂಘಟನೆ ಮಾಡಿದರು. ಆದ್ದರಿಂದ ಅಮೆರಿಕದಲ್ಲಿಯೂ ಅವರ ಬೃಹತ್ ಪ್ರತಿಮೆಯನ್ನು ಸಮಾನತೆಯ ಪ್ರತಿಮೆಯ ದ್ಯೋತಕವಾಗಿ ಸ್ಥಾಪಿಸಲಾಗಿದೆ ಎಂದರು.

ಭಾರತದ ಸಮಾಜದ ರಚನೆ ಸನಾತನ ವೈದಿಕ ಸಂಸ್ಕೃತಿಯ ಶ್ರೇಣೀಕರಣದ ವ್ಯವಸ್ಥೆಯ ಪರಿಧಿಯಲ್ಲಿ ರೂಪುಗೊಂಡಿದೆ. ಜಾತಿ ವ್ಯವಸ್ಥೆಯು ಭಾರತದ ಅಭಿವೃದ್ಧಿಗೆ ಮಾರಕವಾಗಿದೆ. ಸ್ವಾತಂತ್ರ್ಯ ಬಂದರೆ ಸಾಕಾಗುವುದಿಲ್ಲ, ಸಮಾನತೆ ಬೇಕು, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಎಲ್ಲ ಜನಸಾಮಾನ್ಯರಿಗೂ ಸಿಗಬೇಕು ಎಂಬುದು ಡಾ.ಬಿ.ಆರ್ ಅಂಬೇಡ್ಕರ್‌ ಅವರ ಆಶಯವಾಗಿತ್ತು. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಡಾ. ಬಿ.ಆರ್ ಅಂಬೇಡ್ಕರ್‌ ಅವರನ್ನು ರೋಲ್ ಮಾಡೆಲ್ ಆಗಿ ಅನುಸರಿಸಬೇಕು ಎಂದರು.

ಡಾ. ಬಿ.ಆರ್. ಅಂಬೇಡ್ಕರ್‌ ಅವರು ಕೇವಲ ಹಿಂದುಳಿದ ವರ್ಗದ ಉನ್ನತಿಗೆ ಮಾತ್ರವಲ್ಲದೇ ಸಾಮಾಜಿಕವಾಗಿ ಎಲ್ಲ ವರ್ಗದ ಬಡ ಜನರ ಪರ, ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳ ಹಾಗೂ ರೈತರ ಪರ ಹೋರಾಟ ಮಾಡಿದರು. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಹಕ್ಕಿದೆಯೆಂಬ ಕಲ್ಪನೆ ತಂದವರೇ ಅಂಬೇಡ್ಕರ್, ಸ್ವಾತಂತ್ರ್ಯ ಪೂರ್ವದಲ್ಲಿ ವೈಸ್‌ರಾಯ್ ಆಡಳಿತದಲ್ಲಿದ್ದಾಗ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು ಗರ್ಭಿಣಿಯರಿಗೆ ವೇತನ ಸಹಿತ ಹೆರಿಗೆ ರಜೆ ಸಿಗುವ ವ್ಯವಸ್ಥೆ ಮಾಡುತ್ತಾರೆ. ಎಲ್ಲ ಧರ್ಮಗಳಲ್ಲಿಯೂ ಹೆಣ್ಣುಮಕ್ಕಳನ್ನು ಎರಡನೇ ಸ್ಥಾನದಲ್ಲಿ ಕಾಣುವ ಸಮಾಜ ಬೌದ್ಧಧರ್ಮದಲ್ಲಿ ವಿಶೇಷ ಸ್ಥಾನಮಾನವನ್ನೂ ಹೆಣ್ಣುಮಕ್ಕಳಿಗೆ ನೀಡಿದೆ. ಆದ್ದರಿಂದ ಅಂಬೇಡ್ಕರ್ ಬೌದ್ಧಧರ್ಮದ ಅನುಯಾಯಿಗಳಾಗುತ್ತಾರೆ ಎಂದರು.

ಕೃಷಿ ವ್ಯವಸ್ಥೆಯಲ್ಲಿ ಜಮೀನ್ದಾರಿ ಪದ್ದತಿಯನ್ನು ಹೋಗಲಾಡಿಸಿ ಗ್ರಾಪಂ ಕೇಂದ್ರಗಳಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಕೃಷಿಯನ್ನು ತರುವ ಆಶಯವನ್ನು ಅವರು ಹೊಂದಿದ್ದರು. ಆರ್ಥಿಕ ತಜ್ಞರಾದ ಬಾಬಾ ಸಾಹೇಬ್ ಭಾರತದ ಅರ್ಥವ್ಯವಸ್ಥೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕಲ್ಪನೆಯನ್ನು ತಂದರು. ಕೈಗಾರಿಕಾ ಉದ್ಯಮಗಳು ಸರ್ಕಾರದ ಅಧೀನದಲ್ಲಿ ಇರಬೇಕು ಎಂದು ಭಾವಿಸಿದ್ದರು, ಈ ರೀತಿ ಅವರ ಕನಸಿನ ಸಂವಿಧಾನ ಇನ್ನೂ ಸುಂದರವಾಗಿ ಕಟ್ಟುವ ಆಶಯ ಅವರದಾಗಿತ್ತು ಎಂದರು.

ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಸಂವಿಧಾನ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು. ಪ್ರೊ. ರವಿಕುಮಾರ್ ನಿರ್ವಹಿಸಿದರು.