ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಕಳೆದ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭ ಐದು ಗ್ಯಾರಂಟಿಗಳ ಜತೆಗೆ ಯಕ್ಷಗಾನದ ಅಭಿವೃದ್ಧಿಗಾಗಿ ‘ಯಕ್ಷಗಾನ ಪ್ರಾಧಿಕಾರ’ ರಚನೆ ಮಾಡಿ ಅದಕ್ಕೆ ವಾರ್ಷಿಕ 25 ಕೋಟಿ ರು. ಅನುದಾನ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಸರ್ಕಾರ ರಚನೆಯಾಗಿ 8 ತಿಂಗಳಾದರೂ ಪ್ರಾಧಿಕಾರ ರಚನೆಯಿರಲಿ ಇರುವ ಅಕಾಡೆಮಿಗೆ ಇನ್ನೂ ಅಧ್ಯಕ್ಷ ಸದಸ್ಯರ ನೇಮಕವಾಗಿಲ್ಲ.ದೇಶದ ಅತಿ ದೊಡ್ಡ ‘ಲಿವಿಂಗ್ ಥಿಯೇಟರ್’ಗಳಲ್ಲಿ ಒಂದಾಗಿರುವ ಯಕ್ಷಗಾನಕ್ಕೆ ಭರವಸೆ ನೀಡಿದಂತೆ ಪ್ರಾಧಿಕಾರ ರಚನೆ ಮಾಡಬೇಕು ಎಂಬ ಒತ್ತಾಯ ಈಗ ಹೆಚ್ಚಿದೆ.
ಪ್ರಣಾಳಿಕೆ ತಯಾರಿಸುವ ಮೊದಲು ಪ್ರಣಾಳಿಕಾ ಸಮಿತಿ ಸದಸ್ಯರು ಕರಾವಳಿಗೆ ಬಂದು ಯಕ್ಷಗಾನ ವಿದ್ವಾಂಸರು, ಕಲಾವಿದರನ್ನು ಕರೆಸಿ ಸಲಹೆ ಕೇಳಿದ್ದರು. ಯಕ್ಷಗಾನ ಅಭಿವೃದ್ಧಿಗೆ ಅಕಾಡೆಮಿ ಸಾಲದು, ಪ್ರಾಧಿಕಾರವನ್ನೇ ಮಾಡಬೇಕು ಎಂದು ಯಕ್ಷಗಾನ ದಿಗ್ಗಜರು ನೀಡಿದ ಸಲಹೆಯಂತೆ ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗಿತ್ತು.ಪ್ರಾಧಿಕಾರವೇ ಯಾಕೆ?:ಅನೇಕ ವರ್ಷಗಳಿಂದ ಯಕ್ಷಗಾನ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಪ್ರಾಧಿಕಾರ ರಚನೆಯಾದರೆ ಅಕಾಡೆಮಿಗಿಂತ ಹೆಚ್ಚು ಅಧಿಕಾರ, ಅನುದಾನ, ಸಿಬ್ಬಂದಿ ದೊರೆಯುತ್ತದೆ. ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ದೊರೆಯುತ್ತದೆ. ಈ ಎಲ್ಲ ಕಾರಣಗಳಿಂದ ಯಕ್ಷಗಾನ ಕಲೆಯ ಪ್ರಸಾರ, ಕಲೆಯನ್ನು ಇನ್ನಷ್ಟು ಬಲಪಡಿಸಲು ಹೆಚ್ಚಿನ ಯೋಜನೆಗಳನ್ನು ರೂಪಿಸಬಹುದು. ಬೇರೆ ರಾಜ್ಯಗಳು, ವಿಶ್ವ ಮಟ್ಟದ ಕಲಾ ಸಂಸ್ಥೆಗಳೊಂದಿಗೆ ಪ್ರಾಧಿಕಾರದ ನೆಲೆಯಲ್ಲಿ ವ್ಯವಹರಿಸುವಾಗ ಅದರ ತೂಕ ಹೆಚ್ಚಿರುತ್ತದೆ. ಯಕ್ಷಗಾನದ ಪ್ರಚಾರ, ಪ್ರಸಾರ, ದಾಖಲೀಕರಣ ಇತ್ಯಾದಿ ಮಾಡಬಹುದಾದ ಕೆಲಸ ತುಂಬ ಇದೆ. ಅಂತಾರಾಷ್ಟ್ರೀಯ ಫೆಸ್ಟಿವಲ್‌ಗಳಿಗೆ ಯಕ್ಷಗಾನ ತಂಡಗಳನ್ನು ಕಳುಹಿಸುವುದು ಇತ್ಯಾದಿ ಅನೇಕ ಕಾರ್ಯಗಳನ್ನು ನಿರ್ವಹಿಸಬಹುದು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನವನ್ನು ಪ್ರೊಜೆಕ್ಟ್ ಮಾಡಲು, ಪುಸ್ತಕಗಳು, ವಿಡಿಯೊ ದಾಖಲೀಕರಣ ಮಾಡಲು ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ಯಾದಿಗಳನ್ನೆಲ್ಲ ಮಾಡಬೇಕಾದರೆ ಪ್ರಾಧಿಕಾರದಲ್ಲಿ ಸಾಕಷ್ಟು ಅನುದಾನವೂ ಬೇಕು. ಯಕ್ಷಗಾನ ತುಂಬ ಪ್ರೌಢವಾಗಿ ಬೆಳೆದ ಕಲೆಯಾಗಿರುವುದರಿಂದ ಪ್ರಾಧಿಕಾರ ರಚನೆ ಮಾಡಿದರೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲು ಪೂರಕವಾಗಲಿದೆ.ಕೋಟ್ಯಂತರ ರು. ವ್ಯವಹಾರ:ಕರಾವಳಿ, ಮಲೆನಾಡು ಭಾಗಗಳಲ್ಲಿ 40ಕ್ಕೂ ಅಧಿಕ ಯಕ್ಷಗಾನ ಮೇಳಗಳಿವೆ. 10ರಷ್ಟು ಅರೆ ವ್ಯವಸಾಯಿ ಮೇಳಗಳಿವೆ. ಇದರೊಂದಿಗೆ ಅಧಿಕ ಹವ್ಯಾಸಿ ತಂಡಗಳು, ಮಹಿಳಾ ತಂಡಗಳು, ಮಕ್ಕಳ ತಂಡಗಳು, ಶಾಲೆ ಕಾಲೇಜು ತಂಡಗಳು ಇತ್ಯಾದಿ 100ಕ್ಕೂ ಹೆಚ್ಚಿವೆ. ವ್ಯವಸಾಯಿ ಕಲಾವಿದರೇ ಏನಿಲ್ಲವೆಂದರೂ 2-3 ಸಾವಿರದಷ್ಟು ಇದ್ದಾರೆ. 5 ಸಾವಿರದಷ್ಟು ಹವ್ಯಾಸಿಯಾಗಿ ಭಾಗವಹಿಸುವ ಕಲಾವಿದರು, ಅರ್ಥಧಾರಿಗಳು ಇದ್ದಾರೆ. ಇವರೊಂದಿಗೆ ಟೆಕ್ನಿಶಿಯನ್‌ಗಳು, ಎಲೆಕ್ಟ್ರಿಶಿಯನ್‌ಗಳು, ಆಟದಲ್ಲಿ ಸಂತೆ ಇಡುವವರು, ಕಾರ್ಮಿಕರು, ರಂಗಸ್ಥಳ ಸಹಾಯಕರು, ಚೌಕಿಯಲ್ಲಿ ಕೆಲಸ ಮಾಡುವವರು, ಸಾಮಗ್ರಿ ತಯಾರಿಸುವ ಶಿಲ್ಪಿಗಳು ಇತ್ಯಾದಿ ಪೂರಕ ಉದ್ಯೋಗಗಳೂ ಇವೆ. ಇವೆಲ್ಲ ಸೇರಿ ಸಾವಿರಾರು ಕುಟುಂಬಗಳು ಯಕ್ಷಗಾನವನ್ನೇ ಜೀವನಾಧಾರಕ್ಕೆ ಅವಲಂಬಿಸಿವೆ. ವರ್ಷಕ್ಕೆ ಏನಿಲ್ಲವೆಂದರೂ 12 ಸಾವಿರಕ್ಕೂ ಅಧಿಕ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ವಾರ್ಷಿಕ ಹಲವು ಕೋಟಿ ರು.ಗಳ ವ್ಯವಹಾರ ನಡೆಯುವ ಯಕ್ಷಗಾನಕ್ಕೆ ಈ ಕಾರಣದಿಂದಲೂ ಪ್ರಾಧಿಕಾರದ ಅಗತ್ಯ ಹೆಚ್ಚಾಗಿದೆ ಎನ್ನುತ್ತಾರೆ ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ.
ಅಕಾಡೆಮಿ ಅಧ್ಯಕ್ಷರೂ ಇಲ್ಲ, ಸಮ್ಮೇಳನವೂ ಇಲ್ಲ: ಯಕ್ಷಗಾನ ಪ್ರಾಧಿಕಾರ ರಚನೆಯ ಕೂಗು ಒಂದೆಡೆಯಾದರೆ, ಸರ್ಕಾರ ರಚನೆಯಾಗಿ ಎಂಟು ತಿಂಗಳು ಕಳೆದರೂ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷರ ನೇಮಕವೇ ಆಗಿಲ್ಲ. ಇದರಿಂದ ಅಕಾಡೆಮಿ ಕಾರ್ಯ ಸ್ಥಗಿತಗೊಂಡಿದೆ. ಕಳೆದ ವರ್ಷ ಮೊದಲ ಬಾರಿಗೆ ಸರ್ಕಾರದ ಅನುದಾನದೊಂದಿಗೆ ಪ್ರಥಮ ಯಕ್ಷಗಾನ ಸಮ್ಮೇಳನ ಫೆ.11ರಿಂದ 13ರವರೆಗೆ ಉಡುಪಿಯಲ್ಲಿ ವೈಭವದಿಂದ ನಡೆದಿತ್ತು. ಅದನ್ನು ಮುಂದುವರಿಸಿಕೊಂಡು ಹೋಗುವ ನಿರೀಕ್ಷೆ ಯಕ್ಷರಂಗದಲ್ಲಿತ್ತು. ಇದೀಗ ಎರಡನೇಯ ಸಮ್ಮೇಳನ ನಡೆಯಬೇಕಿತ್ತು, ಆದರೆ ಇನ್ನೂ ಈ ಬಗ್ಗೆ ಯಾವ ಪ್ರಸ್ತಾಪವೂ ಕೇಳಿಬರುತ್ತಿಲ್ಲ.ಹಿರಿಯ ಯಕ್ಷಗಾನ ವಿದ್ವಾಂಸರು, ಪ್ರಥಮ ಯಕ್ಷಗಾನ ಸಮ್ಮೇಳನದ ಅಧ್ಯಕ್ಷರಾದ ಡಾ.ಎಂ. ಪ್ರಭಾಕರ ಜೋಶಿ ಪ್ರತಿಕ್ರಿಯಿಸಿ, ಯಕ್ಷಗಾನ ಪ್ರಾಧಿಕಾರ ಆಗಲೇಬೇಕಾದ ಕೆಲಸ. ಯಕ್ಷಗಾನ ಕಲಾ ದೃಷ್ಟಿಯಿಂದ ಒಳಗಿನ ಬೆಳವಣಿಗೆ ಮತ್ತು ಹೊರಗಿನ ಬೆಳವಣಿಗೆಗೆ- ರಾಷ್ಟ್ರ ಮಟ್ಟದಲ್ಲೂ, ವಿಶ್ವದ ಕಲಾ ವೇದಿಕೆಗಳಲ್ಲೂ ಉಳಿದೆಲ್ಲ ಕಲೆಗಳಿಗೆ ಯಕ್ಷಗಾನವನ್ನು ಸಮಾನವಾಗಿ ತೋರಿಸಬೇಕಾದರೆ ಪ್ರಾಧಿಕಾರ ಪೂರಕ ಕೆಲಸ ಮಾಡಲು ಸಾಧ್ಯ. ಪ್ರಾಧಿಕಾರ ರಚನೆಯಾದರೆ ಯಕ್ಷಗಾನಕ್ಕೆ ಸಂಬಂಧಿಸಿದ ದೊಡ್ಡ ಮಟ್ಟದ ಯೋಜನೆ ರೂಪಿಸಬಹುದು. ಸಂಪ್ರದಾಯವನ್ನು ಉಳಿಸಿಕೊಂಡು, ಹೊಸತನವನ್ನು ಬೆಳೆಸಿಕೊಂಡು ತುಂಬ ಬದಲಾವಣೆ ಯಕ್ಷಗಾನದಲ್ಲೂ ಆಗಬೇಕಾಗಿದೆ. ಇದೆಲ್ಲ ಸಾಧ್ಯವಾಗಬೇಕಾದರೆ ಪ್ರಾಧಿಕಾರ ಬಲಯುತವಾಗಿ, ತಜ್ಞರಿಂದ ಕೂಡಿರಬೇಕು ಎನ್ನುತ್ತಾರೆ.