ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಲ್ಲಿ ನೀರುನಾಯಿ ಪ್ರತ್ಯಕ್ಷ

| Published : Sep 27 2024, 01:17 AM IST

ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಲ್ಲಿ ನೀರುನಾಯಿ ಪ್ರತ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 30-35 ವರ್ಷಗಳ ಹಿಂದೆ ಬಹಳಷ್ಟು ಸಂಖ್ಯೆಯಲ್ಲಿ ನೀರುನಾಯಿಗಳು ಹಿಂಡು ಹಿಂಡಾಗಿ ಕಂಡು ಬರುತ್ತಿದ್ದವು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಮಾನವನ ಹಸ್ತಕ್ಷೇಪದಿಂದ ಪ್ರಕೃತಿಯಲ್ಲಿನ ಹಲವಾರು ಪ್ರಾಣಿ, ಪಕ್ಷಿಗಳು ಕಣ್ಮರೆಯಾಗುತ್ತಿವೆ. ಇದರ ಸಾಲಿನಲ್ಲಿ ನೀರುನಾಯಿಗಳ ಸಂಸತಿ ಕೂಡ ಸೇರಿವೆ.

ತಾಲೂಕಿನ ತುಂಗಭದ್ರಾ ನದಿಯ ದಂಡೆಯಲ್ಲಿ ಕಳೆದ 30-35 ವರ್ಷಗಳ ಹಿಂದೆ ಬಹಳಷ್ಟು ಸಂಖ್ಯೆಯಲ್ಲಿ ನೀರುನಾಯಿಗಳು ಹಿಂಡು ಹಿಂಡಾಗಿ ಕಂಡು ಬರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಇವು ಕಣ್ಮರೆಯಾಗಿದ್ದವು. ಆದರೆ 3-4 ವರ್ಷದಿಂದ ಇವು ಗುಂಪು ಗುಂಪಾಗಿ ಗುಮ್ಮಗೋಳ, ಅಲ್ಲೀಪುರ, ಹಮ್ಮಿಗಿ, ರಾಜವಾಳ, ಮಾಗಳ, ಹೊನ್ನೂರು ಗ್ರಾಮಗಳ ತುಂಗಭದ್ರೆಯ ದಡದಲ್ಲಿ ಇರುವುದನ್ನು ಪಕ್ಷಿತಜ್ಞ, ಪರಿಸರವಾದಿ ಸಿ.ಎನ್. ಸೋಮೇಶಪ್ಪ ಗುರುತಿಸಿದ್ದಾರೆ.

ಸಿಂಗಟಾಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ಲೀಲಾಜಾಲವಾಗಿ ಆಟವಾಡುತ್ತಾ, ಆಗಾಗ ತಲೆ ಎತ್ತಿ ಈಜುತ್ತಾ, ಮನುಷ್ಯರನ್ನು ಕಂಡೊಡನೆ ನೀರಿನಲ್ಲಿ ಮುಳುಗಿ, ಅದೃಶ್ಯವಾಗಿ ಎಲ್ಲೋ ದೂರದಲ್ಲಿ ಏಳುವ, ದಡದ ಮೇಲೆ ಬಂದು ಬಿಸಿಲಿಗೆ ಮೈಯೊಡ್ಡುವ ನಾಚಿಕೆ ಸ್ವಭಾವದ ನೀರುನಾಯಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ನೀರುನಾಯಿಗಳನ್ನು ಇಂಗ್ಲೀಷಿನಲ್ಲಿ Otters ಎಂದು ಕರೆಯುತ್ತಾರೆ. ವಿಶ್ವದಲ್ಲಿ 13 ಜಾತಿಯ ನೀರುನಾಯಿಗಳಿವೆ. ಆದರೆ ಭಾರತದಲ್ಲಿ 3 ಜಾತಿಯ ನೀರುನಾಯಿಗಳು ಕಂಡು ಬರುತ್ತವೆ. ತುಂಗಭದ್ರಾ ನದಿಯಲ್ಲಿ ಕಂಡು ಬರುವ ನೀರುನಾಯಿಗಳನ್ನು Smooth-Coated Otter ಎಂದು ಕರೆಯುತ್ತಾರೆ. ಅಂದರೆ ನವಿರಾದ ತುಪ್ಪಳದ ನೀರುನಾಯಿ ಎಂದರ್ಥ. ನೀರುನಾಯಿಗಳ ಮೇಲೆ ಚಿಕ್ಕದಾದ ನವಿರಾದ ನೀರಿನಲ್ಲಿ ತೋಯದ ತುಪ್ಪಳ ಇರುತ್ತದೆ. ಬೂದು, ಕಂದು ಬಣ್ಣ ಹೊಂದಿವೆ.

ಈಜಲು ಜಾಲಪಾದ, ದೊಡ್ಡ ಮೀಸೆ ಇವೆ. ಗಿಡ್ಡ ಕಾಲು, ಚಪ್ಪಟೆಯಾದ ಮತ್ತು ದೊಡ್ಡ ಬಾಲವಿದೆ. ಇವುಗಳು ಮ್ಯಾಂಗೋವ್ ಕಾಡು, ಬಯಲು ಪ್ರದೇಶದ ನದಿಗಳಲ್ಲಿ ಕಂಡುಬರುತ್ತವೆ. ಸ್ವಚ್ಛ ನೀರಿನಲ್ಲಿ ವಾಸಿಸುತ್ತವೆ. ನೀರು ಸ್ವಚ್ಛವಾಗಿರುವಂತೆ ಇವು ನೋಡಿಕೊಳ್ಳುತ್ತವೆ. ನದಿಗಳ ಬಳಿಯ ಕಲ್ಲಿನ ಬಂಡೆಗಳ ಮೇಲೆ, ಇಲ್ಲವೇ ಮಣ್ಣಿನ ದಿಬ್ಬಗಳ ಮೇಲೆ ಇವು ವಿಶ್ರಾಂತಿ ಪಡೆಯುತ್ತವೆ.

ನದಿಯಲ್ಲಿ ಸಿಗುವ ಮೀನು, ಏಡಿ, ಕಪ್ಪೆ, ಬಾತುಕೋಳಿಗಳನ್ನು, ಕೆಲವೊಮ್ಮೆ ಎಲೆಗಳನ್ನು ತಿನ್ನುತ್ತವೆ. ಮೀನುಗಳನ್ನು ಎರಡೂ ಕೈಗಳಲ್ಲಿ ಹಿಡಿದು ಮನುಷ್ಯರ ಹಾಗೆ ತಿನ್ನುತ್ತವೆ. ಐದರಿಂದ ಹತ್ತು ನೀರುನಾಯಿಗಳು ಒಂದು ಗುಂಪಿನಲ್ಲಿ ಇರುತ್ತವೆ. ನಾಯಿಗಳಿಗೂ ಇವುಗಳಿಗೂ ಹೋಲಿಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇವುಗಳ ತೂಕ 8 ರಿಂದ 11 ಕೆಜಿ ಇರುತ್ತವೆ. ಇವು ಅತ್ಯಂತ ಸೂಕ್ಷ್ಮ, ಬುದ್ಧಿವಂತ ನಾಜೂಕಾದ, ಬಲಿಷ್ಠ ಪ್ರಾಣಿಗಳಾಗಿವೆ. ಮನುಷ್ಯನ ಉಪಟಳ ಹೆಚ್ಚಾದರೆ ಅಲ್ಲಿಂದ ಮರೆಯಾಗಿ ಬೇರೆ ಕಡೆಗೆ ಹೋಗುತ್ತವೆ.

ಅಳಿವಿನಂಚಿನ ನೀರುನಾಯಿಗಳನ್ನು ಸಂರಕ್ಷಿಸಲು ಈಗಾಗಲೇ ರಾಜ್ಯ ಸರ್ಕಾರ ಹಂಪಿಯ ಹತ್ತಿರದ ತುಂಗಭದ್ರಾ ನದಿಯ ಸುಮಾರು 35 ಕಿ.ಮೀ. ಪ್ರದೇಶವನ್ನು ನೀರುನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿರುವುದನ್ನು ಸ್ಮರಿಸಬಹುದು.

ಅಪರೂಪದ ಅಳಿವಿನ ಅಂಚಿನಲ್ಲಿರುವ ನೀರುನಾಯಿಗಳ ಉಳಿಸಲು, ಅವುಗಳ ಸಂತತಿ ಬೆಳೆಸಲು ಅವುಗಳ ಬಗ್ಗೆ ತುಂಗಭದ್ರಾ ದಡದ ಗ್ರಾಮಗಳ ಜನರಿಗೆ ಜಾಗೃತಿಯ ಅವಶ್ಯವಿದೆ. ಇಲ್ಲಿರುವ ನೀರುನಾಯಿಗಳ ವೈಜ್ಞಾನಿಕ ಗಣತಿ ಆಗಬೇಕಿದೆ. ಸಂರಕ್ಷಣಾ ಕ್ರಮಗಳ ಅವಶ್ಯಕತೆ ಇದೆ. ಮುಂದಿನ ಪೀಳಿಗೆಗೆ ಇವುಗಳನ್ನು ಉಳಿಸಿ ಬೆಳೆಸಬೇಕಿದೆ ಎನ್ನುತ್ತಾರೆ ಶಿಕ್ಷಕ, ಪಕ್ಷಿ ತಜ್ಞ, ಹವ್ಯಾಸಿ ಛಾಯಾಗ್ರಾಹಕ ಅಲ್ಲಿಪುರ ಸೋಮೇಶಪ್ಪ ಸಿ.ಎನ್.