ಕೈನಲ್ಲಿ ಒಳಬೇಗುದಿ, ಕಮಲದಲ್ಲಿ ಅಸಮಾಧಾನ, ದಳ ತಟಸ್ಥ!

| Published : Mar 13 2024, 02:09 AM IST

ಸಾರಾಂಶ

ರಾಮನಗರ ಜಿಲ್ಲೆಯಲ್ಲಿ 6 ಪ್ರಾಧಿಕಾರಗಳು ಬರಲಿದ್ದು, ಅಷ್ಟೂ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನೇ ನೇಮಕ ಮಾಡಲಾಗಿದೆ. ಇದು ಕಾಂಗ್ರೆಸ್ ನಲ್ಲಿರುವ ಉಳಿದ ಸಮುದಾಯಗಳ ಮುಖಂಡರು - ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ನಿಗಮ ಮಂಡಳಿಗಳ ನೇಮಕಾತಿ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಒಳಬೇಗುದಿ, ವಿವಿಧ ಮೋರ್ಚಾಗಳ ನೇಮಕದಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದರೆ, ಜೆಡಿಎಸ್ ನಲ್ಲಿ ತಟಸ್ಥ ಭಾವನೆ ಮೂಡಿದೆ.

ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ.ಸಿ.ಎನ್ .ಮಂಜುನಾಥ್ ಅಖಾಡಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದೆ. ಆದರೀಗ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸ್ಥಳೀಯ ಮುಖಂಡರು - ಕಾರ್ಯಕರ್ತರಲ್ಲಿನ ಬೇಸರ ನಾಯಕರನ್ನು ಚಿಂತೆಗೀಡು ಮಾಡಿದೆ.

ಕೈಗೆ ನುಂಗಲಾರದು ತುತ್ತು:

ರಾಮನಗರ ಜಿಲ್ಲೆಯಲ್ಲಿ 6 ಪ್ರಾಧಿಕಾರಗಳು ಬರಲಿದ್ದು, ಅಷ್ಟೂ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನೇ ನೇಮಕ ಮಾಡಲಾಗಿದೆ. ಇದು ಕಾಂಗ್ರೆಸ್ ನಲ್ಲಿರುವ ಉಳಿದ ಸಮುದಾಯಗಳ ಮುಖಂಡರು - ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು –ಮೈಸೂರು ಇನ್ಪ್ರಾಸ್ಟ್ರಾಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ರಘುನಂದನ್‌ ರಾಮಣ್ಣ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗಾಣಕಲ್ ನಟರಾಜು, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆರ್. ಕೃಷ್ಣಮೂರ್ತಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಆರ್. ಪ್ರಮೋದ್, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಂಚೇಗೌಡ ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎ.ಬಿ.ಚೇತನ್ ಕುಮಾರ್ ರನ್ನು ನೇಮಕ ಮಾಡಲಾಗಿದೆ. ಇವರೆಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಿಗೆ ಇತರೆ ಸಮುದಾಯದ ಮುಖಂಡರು ಆಕಾಂಕ್ಷಿಗಳಾಗಿದ್ದರು. ಅದರಲ್ಲಿ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮುಖಂಡರಿಗೆ ಸದಸ್ಯ ಸ್ಥಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಇದರಿಂದ ಬೇಸರಗೊಂಡಿರುವ ಆ ಸಮುದಾಯಗಳ ಮುಖಂಡರು ತಮ್ಮ ನಾಯಕರ ವಿರುದ್ಧವೇ ಆಕ್ರೋಶ ಹೊರ ಹಾಕುತ್ತಿರುವುದು ಕೈ ಪಾಳಯಕ್ಕೆ ನುಂಗಲಾರದ ತುತ್ತಿನಂತಾಗಿದೆ. ಈ ಒಳ ಬೇಗುದಿಯನ್ನು ನಿಯಂತ್ರಿಸುವುದು ಕೈ ನಾಯಕರಿಗೆ ಸವಾಲಾಗಿದೆ.

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಎಲ್ಲ ಸಮುದಾಯಗಳ ಪಾತ್ರವೂ ಇದೆ. ಹೀಗಾಗಿ ಎಲ್ಲ ಸಮುದಾಯಗಳಿಗೂ ಪ್ರಾಧಾನ್ಯತೆ ನೀಡಿ ಅಧಿಕಾರ ಹಂಚಿಕೆ ಮಾಡಬೇಕಿತ್ತು. ಪ್ರಾಧಿಕಾರದ ನೇಮಕಾತಿಯಲ್ಲಿ ಒಂದು ಸಮುದಾಯದವರನ್ನೇ ಓಲೈಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರು.

ಸ್ಥಳೀಯ ದಳಪತಿಗಳೆಲ್ಲರೂ ತಟಸ್ಥ:

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರ ಅಳಿಯ ಜಯದೇವ ಹೃದ್ರೋಹ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್ .ಮಂಜುನಾಥ್ ರವರು ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಆಗುವುದು ಖಚಿತವಾಗಿದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಜಿದ್ದಾಜಿದ್ದಿನ ಅಖಾಡವಾಗುವುದರಲ್ಲಿ ಅನುಮಾನವೇ ಇಲ್ಲ.

ಆದರೆ, ಜಿಲ್ಲೆಯ ದಳಪತಿಗಳಲ್ಲಿ ಹಿಂದಿನ ಚುನಾವಣೆಗಳಲ್ಲಿದ್ದಷ್ಟು ರಣೋತ್ಸಾಹ ಈಗ ಕಂಡು ಬರುತ್ತಿಲ್ಲ. ಇದಕ್ಕೆ ಸ್ಥಳೀಯ ಸಂಸ್ಥೆಗಳು ಮಾತ್ರವಲ್ಲದೆ ವಿಧಾನಸಭಾ ಚುನಾವಣೆಯಲ್ಲಿನ ಸೋಲು, ಪಕ್ಷ ಸಂಘಟನೆಯಲ್ಲಿ ವರಿಷ್ಠರ ನಿರ್ಲಕ್ಷ್ಯಭಾವನೆಯೇ ಕಾರಣ. ಇದು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಆತ್ಮಬಲವನ್ನು ಕುಗ್ಗಿಸಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವು ನಮ್ಮದೇ ಎಂದು ಹೊರಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ - ಜೆಡಿಎಸ್ ಮಿತ್ರ ಪಕ್ಷಗಳ ನಾಯಕರಿಗೆ ಒಳ ಬೇಗುದಿ ಮತ್ತು ಅಸಮಾಧಾನ ಶಮನಗೊಳಿಸುವ ಸವಾಲೂ ಎದುರಾಗಿದೆ.

ಕಮಲಕ್ಕೂ ಅಸಮಾಧಾನದ ಬಿಸಿ

ಜಿಲ್ಲಾ ಬಿಜೆಪಿಯದು ಮನೆಯೊಂದು ಮೂರು ಬಾಗಿಲು ಎನ್ನುವ ಪರಿಸ್ಥಿತಿ ಅನೇಕ ವರ್ಷಗಳಿಂದಲೂ ಇದೆ. ಜಿಲ್ಲಾಧ್ಯಕ್ಷರ ನೇಮಕ ಮಾತ್ರವಲ್ಲದೆ ವಿವಿಧ ಮೋರ್ಚಾ ಹಾಗೂ ವಿಭಾಗಗಳಿಗೆ ಪದಾಧಿಕಾರಿಗಳ ನೇಮಕ ಸಂಬಂಧ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆನಂದ ಸ್ವಾಮಿ ನೇಮಕಗೊಂಡರು. ಆನಂತರ ಜಿಲ್ಲಾ ಮಟ್ಟದ ವಿವಿಧ ಮೋರ್ಚಾ ಹಾಗೂ ವಿಭಾಗಗಳಿಗೆ ನೂತನ ಪದಾಧಿಕಾರಿಗಳ ನೇಮಕ ಸಂಬಂಧ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದ್ದು, ನಾಯಕರ ಹಿಂಬಾಲಿಕರಷ್ಟೇ ಮಣೆ ಹಾಕಲಾಗಿದೆ ಎಂಬ ಅಸಮಾಧಾನ ಕಾರ್ಯಕರ್ತರಿಂದ ವ್ಯಕ್ತವಾಗುತ್ತಿದೆ.

ವರಿಷ್ಠರು ಸೂಚಿಸಿದ ಹಾಗೂ ಸ್ಥಳೀಯ ನಾಯಕರು ಹೇಳಿದವರಿಗೆ ಮಾತ್ರ ಪದಾಧಿಕಾರಿಗಳ ಹುದ್ದೆ ನೀಡಲಾಗುತ್ತಿದ್ದು, ನಿಷ್ಠಾವಂತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಪಕ್ಷಕ್ಕಾಗಿ ದುಡಿಯದ ವ್ಯಕ್ತಿಗಳನ್ನು ಪ್ರಮುಖ ಹುದ್ದೆಗಳಲ್ಲಿ ಕೂರಿಸುತ್ತಿರುವುದು ಅಪಸ್ವರ ಕೇಳಿ ಬರಲು ಕಾರಣವಾಗಿದೆ.