ಸಾರಾಂಶ
ಕೆ.ಎಂ. ಮಂಜುನಾಥ್
ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರ ಶಾಸಕರ ಮುಸುಕಿನ ಗುದ್ದಾಟಕ್ಕೆ ಬಲಿಯಾಗಿದ್ದ ಮೇಯರ್ ಚುನಾವಣೆಗೆ ಮತ್ತೊಂದು ಬಾರಿ ಮುಹೂರ್ತ ನಿಗದಿಯಾಗಿದೆ.ಜ. 10ರಂದು ಬೆಳಗ್ಗೆ 11 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರು ಘೋಷಿಸಿದ್ದಾರೆ. ಈ ಬೆಳವಣಿಗೆ ಮೇಯರ್ ಪಟ್ಟ ಒಲಿಸಿಕೊಳ್ಳುವವರು ಯಾರು ಎಂಬ ಕುತೂಹಲಕ್ಕೆಡೆ ಮಾಡಿದೆ.
ಬಳ್ಳಾರಿ ಮೇಯರ್ ಆಯ್ಕೆ ಸಂಬಂಧದ ನಾಯಕರ ನಡುವಿನ ಶೀತಲ ಸಮರ ಕೊನೆಗೂ ಪಕ್ಷದ ರಾಜ್ಯಾಧ್ಯಕ್ಷರ ಸಮಕ್ಷಮದಲ್ಲಿಯೇ ಬಗೆಹರಿದಿದೆ. ಕೆಪಿಸಿಸಿ ಅಧ್ಯಕ್ಷರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಯಾವುದೇ ಅಪಸ್ವರ ಇಲ್ಲದೆ ಸಲೀಸಲಾಗಿ ನಡೆಯಲಿದೆ ಎಂಬ ವಿಶ್ವಾಸ ಮೂಡಿದೆ. ಆದರೆ, ಯಾರಿಗೆ ಮೇಯರ್ ಪಟ್ಟ ದಕ್ಕಲಿದೆ ಎಂಬುದೇ ನಿಗೂಢವಾಗಿದೆ.ಸಚಿವ- ಶಾಸಕರ ನಡುವಿನ ಪ್ರತಿಷ್ಠೆ: ತಮ್ಮದೇ ಬೆಂಬಲಿಗರ ಮೇಯರ್ ಮಾಡಲು ಪಣತೊಟ್ಟಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ಈ ಇಬ್ಬರು ನಾಯಕರ ಪ್ರತಿಷ್ಠೆಯ ರಾಜಕೀಯ ಮೇಲಾಟಕ್ಕೆ ಕಳೆದ ನ. 28 ಹಾಗೂ ಡಿ. 19ರಂದು ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿತ್ತು. ಏತನ್ಮಧ್ಯೆ ತಮ್ಮದೇ ಬೆಂಬಲಿಗನನ್ನು ಮೇಯರ್ ಮಾಡಲು ಒಂದು ಗುಂಪಿನ ಸದಸ್ಯರು ರೆಸಾರ್ಟ್ ರಾಜಕೀಯ ಮಾಡಿದ್ದು ಪಕ್ಷದ ನಾಯಕರಿಗೆ ಇರಸು-ಮುರಸು ಉಂಟು ಮಾಡಿತ್ತು.
ಸ್ಥಳೀಯ ನಾಯಕರ ಭಿನ್ನಮತ ಶಮನ ಮಾಡಲು ಪಕ್ಷದ ರಾಜ್ಯ ನಾಯಕರು ಬಳ್ಳಾರಿಗೆ ಬಂದು ಸಭೆ ನಡೆಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಅಂತಿಮವಾಗಿ ಬಳ್ಳಾರಿ ಮೇಯರ್ ಆಯ್ಕೆ ವಿಚಾರ ಕೆಪಿಸಿಸಿ ಅಂಗಳ ತಲುಪಿತು. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮಕ್ಷಮದಲ್ಲಿ ಡಿ. 30ರಂದು ಜರುಗಿದ ಸಭೆಯಲ್ಲಿ ಪಾಲಿಕೆ ಎಲ್ಲ ಸದಸ್ಯರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರಲ್ಲದೆ, ಪಕ್ಷ ಸೂಚಿಸುವ ವ್ಯಕ್ತಿಯನ್ನು ಮೇಯರ್ ಆಯ್ಕೆಗೆ ಸಮ್ಮತಿಸುವ ನಿಲುವು ವ್ಯಕ್ತಪಡಿಸಿದ್ದಾರೆ. ಚುನಾವಣೆ ವೇಳೆ ಮತ್ತೆ ಗೊಂದಲ ಸೃಷ್ಟಿಯಾಗದಂತೆ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಇಬ್ಬರು ಕಾಂಗ್ರೆಸ್ ಸದಸ್ಯರು ಹಾಗೂ ಓರ್ವ ಪಕ್ಷೇತರ ಸದಸ್ಯನಿಂದಲೂ ನಾಮಪತ್ರ ವಾಪಸ್ ಪಡೆಯುವ ಅರ್ಜಿಗೆ ಕೆಪಿಸಿಸಿ ಅಧ್ಯಕ್ಷರು ಸಹಿ ಪಡೆದುಕೊಂಡಿದ್ದಾರೆ. ಹೀಗಾಗಿ ಜ. 10ರಂದು ಜರುಗುವ ಚುನಾವಣೆ ವೇಳೆ ಯಾವುದೇ ಗೊಂದಲವಿಲ್ಲದೆ ನೆರವೇರಲಿದೆ ಎಂಬುದು ಪಕ್ಷದ ಕಾರ್ಯಕರ್ತರ ವಿಶ್ವಾಸ.ಬರೀ 7 ತಿಂಗಳ ಅಧಿಕಾರಕ್ಕೆ ಈ ಸರ್ಕಸ್!: ಪಾಲಿಕೆಯ 39 ವಾರ್ಡ್‌ಗಳ ಪೈಕಿ 21ರಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್, 5 ಪಕ್ಷೇತರ ಸದಸ್ಯರ ಬಲದೊಂದಿಗೆ ಅಧಿಕಾರ ಹಿಡಿದಿದೆ. ಪಾಲಿಕೆಯ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡು ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಿ. ತ್ರಿವೇಣಿ ಅವರು ರಾಜೀನಾಮೆ ಸಲ್ಲಿಸಿ, ತೆರವಾದ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಆದರೆ, ಈಗ ಅಧಿಕಾರದ ಗದ್ದುಗೆ ಹಿಡಿದ ಬಳಿಕ ಸಿಗುವ ಅವಧಿಯೇ ಬರೀ 7 ತಿಂಗಳು. ಇದು ಗೊತ್ತಿದ್ದೂ ತಮ್ಮ ಬೆಂಬಲಿಗರನ್ನು ಅಧಿಕಾರದ ಗದ್ದುಗೆಗೆ ಕೂಡಿಸಲು ಕೈ ಪಕ್ಷಗಳ ನಾಯಕರ ಪ್ರತಿಷ್ಠೆಗೆ ಕಟ್ಟುಬಿದ್ದು ಎರಡು ಬಾರಿ ಚುನಾವಣೆ ಮುಂದೂಡುವಂತೆ ಮಾಡಿದ್ದು ಎಷ್ಟು ಸರಿ? ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆಗಳು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೂ ಮುಜುಗರ ಉಂಟು ಮಾಡಿತ್ತು.