ಜಾತಿ ಪಟ್ಟಿಯಿಂದ ಹಿಂದು ಕ್ರಿಶ್ಚಿಯನ್ ಕೈಬಿಡುವಂತೆ ಮನವಿ

| Published : Sep 12 2025, 12:06 AM IST

ಜಾತಿ ಪಟ್ಟಿಯಿಂದ ಹಿಂದು ಕ್ರಿಶ್ಚಿಯನ್ ಕೈಬಿಡುವಂತೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ 2025ನೇ ಸಾಲಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಉದ್ದೇಶದಿಂದ ಮತಾಂತರಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಿಂದು 47 ಜಾತಿಗಳ ಜತೆಗೆ ಕ್ರಿಶ್ಚಿಯನ್ ಪದಗಳನ್ನು ಸೇರಿಸಿ ಅವುಗಳಿಗೆ ಕಾನೂನುಬಾಹಿರವಾಗಿ ಕ್ರಮ ಸಂಖ್ಯೆ ನೀಡಿರುವುದು ಸರಿಯಲ್ಲ.

ಹಾವೇರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಹೊಸ ಜಾತಿಗಳನ್ನು ಹಿಂದುಳಿದ ಜಾತಿಗಳ ಜತೆಗೆ ಕ್ರಿಶ್ಚಿಯನ್ ಎಂದು ಸೃಷ್ಟಿಸಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಘಟಕದ ಪದಾಧಿಕಾರಿಗಳು ಗುರುವಾರ ಅಪರ ಜಿಲ್ಲಾಧಿಕಾರಿಯವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಕೆ ವೇಳೆ ಮಾತನಾಡಿದ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ ಮಾತನಾಡಿ, ರಾಜ್ಯದಲ್ಲಿ 2025ನೇ ಸಾಲಿನಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಉದ್ದೇಶದಿಂದ ಮತಾಂತರಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಹಿಂದು 47 ಜಾತಿಗಳ ಜತೆಗೆ ಕ್ರಿಶ್ಚಿಯನ್ ಪದಗಳನ್ನು ಸೇರಿಸಿ ಅವುಗಳಿಗೆ ಕಾನೂನುಬಾಹಿರವಾಗಿ ಕ್ರಮ ಸಂಖ್ಯೆ ನೀಡಿರುವುದು ಸರಿಯಲ್ಲ. ಕೂಡಲೇ ಜಾತಿ ಪಟ್ಟಿಯಿಂದ ಎಲ್ಲ 47 ಹಿಂದು ಕ್ರಿಶ್ಚಿಯನ್ ಜಾತಿಗಳನ್ನು ತೆಗೆಯಬೇಕೆಂದು ಆಗ್ರಹಿಸಿದರು.2014- 15ನೇ ಸಾಲಿನಲ್ಲಿ ಸರ್ಕಾರ ರಾಜ್ಯದಲ್ಲಿ ಕಾಂತರಾಜು ನೇತೃತ್ವದ ಆಯೋಗ ರಚಿಸಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ದೃಷ್ಟಿಯಿಂದ ₹165 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡಿತ್ತು. ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾದರೂ ರಾಜಕೀಯ ದುರುದ್ದೇಶದಿಂದ ಅಂದಿನ ಸರ್ಕಾರ ಅನುಷ್ಠಾನಗೊಳಿಸಲಿಲ್ಲ. ಮತ್ತೆ ಬಂದ ಜಯಪ್ರಕಾಶ ಹೆಗ್ಡೆ ಆಯೋಗ 2025ರಲ್ಲಿ ವರದಿ ಸಲ್ಲಿಸಿದರೂ ದತ್ತಾಂಶ ಹತ್ತು ವರ್ಷ ಮೀರಿದೆ ಎಂದು ತಿರಸ್ಕರಿಸಿತು.

ಸೆ. 22ರಿಂದ ಅ. 7ರ ವರೆಗೆ ಕೇವಲ 15 ದಿನಗಳಲ್ಲಿ ಸಮೀಕ್ಷೆ ಮಾಡಿಸುವುದಾಗಿ ಸರ್ಕಾರ ತಿಳಿಸಿದ್ದು, ಇದು ರಾಜಕೀಯ ದುರುದ್ದೇಶ ಹೊಂದಿದೆ. ಹಾಗಾಗಿ 2026- 27ನೇ ಸಾಲಿಗೆ ಕೇಂದ್ರದ ಜನಗಣತಿ ಜತೆಗೆ ಜಾತಿಗಣತಿ ಮಾಡಿಸಲು ಮುಂದಾಗಿದೆ. ಇದಕ್ಕಾಗಿ ಎಲ್ಲ ಸಿದ್ಧತೆ ನಡೆದಿವೆ ಎಂದರು.

ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಹೊಲೆಯ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ಬೆಸ್ತ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್ ಹೀಗೆ 47 ಜಾತಿಗಳ ಜತೆಗೆ ಕ್ರಿಶ್ಚಿಯನ್ ಎಂಬ ಪದ ಕಾನೂನುಬಾಹಿರವಾಗಿ ಸೃಷ್ಟಿಸಿ ಸಮಾಜವನ್ನು ಒಡೆಯುವ ಹುನ್ನಾರ ಹಾಗೂ ಮತಾಂತರ ಮಾಡಿಸುವ ಹುನ್ನಾರ ನಡೆಸಿದೆ. ಇದು ಖಂಡನೀಯ. ಕ್ರಿಶ್ಚಿಯನ್ ಪದ ಸೇರ್ಪಡೆ ಮಾಡುವುದನ್ನು ಕೈಬಿಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಪ್ರಕೋಷ್ಟದ ರಾಜ್ಯ ಸಂಚಾಲಕ ಭೋಜರಾಜ ಕರೂದಿ, ಮಂಜುನಾಥ ಗಾಣಿಗೇರ, ನಂಜುಂಡೇಶ ಕಳ್ಳೇರ, ಮಂಜುನಾಥ ಹುಲಗೂರ, ವಿನಯ ತಳಗೇರಿ, ಜಗದೀಶ ಮಲಗೋಡ, ಬಸವರಾಜ ಡೊಂಕಣ್ಣನವರ, ಮೃತ್ಯುಂಜಯ ಮುಷ್ಠಿ, ಕೃಷ್ಣಾ ಡೋಲೆ, ಗಜಾನನ ರಾಶಿನಕರ, ವಿಜಯ ಮಡಿವಾಳರ ಇತರರು ಇದ್ದರು.