ಶಿರಸಿಯ ನಗರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರ ವಾಗ್ವಾದ

| Published : Jun 15 2024, 01:09 AM IST

ಶಿರಸಿಯ ನಗರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯರ ವಾಗ್ವಾದ
Share this Article
  • FB
  • TW
  • Linkdin
  • Email

ಸಾರಾಂಶ

ನಗರೋತ್ಥಾನದ ಗುತ್ತಿಗೆ ಪಡೆದ ಕಂಪನಿಯವರಲ್ಲಿ ಕೆಲಸಗಾರರಿಲ್ಲ. ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಡೆ ಅರ್ಧಂಬರ್ಧ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಿಂದ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಸದಸ್ಯರು ಆರೋಪಿಸಿದರು.

ಶಿರಸಿ: ನಗರೋತ್ಥಾನ ಯೋಜನೆಯಲ್ಲಿ ಕೆಲವು ವಾರ್ಡ್‌ಗಳಲ್ಲಿ ಕಾಮಗಾರಿ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ಕಾರಣವೇನು ಎಂದು ಉತ್ತರ ನೀಡಬೇಕು ಎಂದು ಎರಡು ಪಕ್ಷಗಳ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು.

ಇಲ್ಲಿನ ನಗರಸಭೆಯ ಅಟಲ್‌ಜೀ ಸಭಾಭನವನದಲ್ಲಿ ಶಾಸಕ ಭೀಮಣ್ಣ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದಸ್ಯ ಗಣಪತಿ ನಾಯ್ಕ ಪ್ರಸ್ತಾಪಿಸಿ, ಕಾಮಗಾರಿಯನ್ನು ಹಾಕಿರುವುದನ್ನು ಬದಲಾವಣೆ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕು ಎಂದು ಆಗ್ರಹಿಸಿದಾಗ, ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು. ಆಗ ಮಧ್ಯ ಪ್ರವೇಶಿಸಿದ ಸದಸ್ಯ ಖಾದರ್ ಆನವಟ್ಟಿ, ಗಣಪತಿ ನಾಯ್ಕ ಅಧ್ಯಕ್ಷರಿರುವಾಗ ಕೆಲವೊಂದು ವಾರ್ಡ್‌ಗೆ ₹೨೦ ಲಕ್ಷ ಹಾಕಿದ್ದಾರೆ. ಕೆಲವೊಂದು ವಾರ್ಡ್‌ಗೆ ₹೮೦ ಲಕ್ಷ ಹಾಕಿದ್ದಾರೆ. ಈ ಕಾರಣದಿಂದ ಬದಲಾವಣೆ ಮಾಡಿರಬಹುದು ಎಂದಾಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಹಿಂದಿನ ಅವಧಿಯಲ್ಲಿ ₹೭ ಕೋಟಿ ವಿಶೇಷ ಅನುದಾನದಲ್ಲಿ ನಮ್ಮ ವಾರ್ಡ್‌ಗಳಿಗೆ ಒಂದೇ ಒಂದು ರು. ನೀಡಿಲ್ಲ. ನಗರೋತ್ಥಾನದಲ್ಲಿ ₹೨೦ ಲಕ್ಷ ಹಾಕಿದ್ದಾರೆ ಎಂದು ಖಾದರ್ ಆನವಟ್ಟಿ ಆರೋಪಿಸಿದರು.ನಗರೋತ್ಥಾನದ ಗುತ್ತಿಗೆ ಪಡೆದ ಕಂಪನಿಯವರಲ್ಲಿ ಕೆಲಸಗಾರರಿಲ್ಲ. ಕಾಟಾಚಾರಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೊಂದು ಕಡೆ ಅರ್ಧಂಬರ್ಧ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಿಂದ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ವಾರ್ಡ್‌ನ ಜನರು ನಮಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೀಮಣ್ಣ ನಾಯ್ಕ, ಸದ್ಯ ನಗರಸಭೆಗೆ ₹೩.೫ ಕೋಟಿ ವಿಶೇಷ ಅನುದಾನ ಸರ್ಕಾರದಿಂದ ಮಂಜೂರಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸುವಾಗ ಕಡಿಮೆ ಅನುದಾನ ನೀಡಿದ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸರ್ಕಾರದ ಹಣ ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ವಾರ್ಡಿನಲ್ಲಿ ಅವಶ್ಯವಿರುವ ಕಾಮಗಾರಿಯನ್ನು ಮಾಡಿಸಿಕೊಳ್ಳುವುದು ಸದಸ್ಯರ ಕರ್ತವ್ಯ. ಮಂಜೂರಾದ ವಿಶೇಷ ಅನುದಾನದಲ್ಲಿ ೩೧ ವಾರ್ಡ್‌ಗಳಿಗೆ ಎಲ್ಲ ಹಣ ವಿನಿಯೋಗ ಮಾಡಲು ಸಾಧ್ಯವಿಲ್ಲ. ಮೂಲ ಸೌಕರ್ಯಗಳು ವಂಚಿತವಾಗಿರುವ ಪ್ರದೇಶಕ್ಕೆ ಒತ್ತು ನೀಡಬೇಕಿದ್ದು, ಇದಕ್ಕೆ ಸದಸ್ಯರು ಸಹಕಾರ ನೀಡಬೇಕು ಎಂದು ವಿನಂತಿಸಿದರು.ನಗರೋತ್ಥಾನ ೩ ಹಂತದ ಮೂರು ಕಾಮಗಾರಿ ಬಾಕಿ ಇದೆ. ₹೧೦ ಕೋಟಿ ವೆಚ್ಚದಲ್ಲಿ ಮಂಜೂರಾದ ೪ ಕಾಮಗಾರಿಗಳು ಮುಗಿದ್ದು, ೯ ಕಾಮಗಾರಿ ಕೆಲಸ ಆರಂಭವಾಗಬೇಕು. ಎಸ್ಎಫ್‌ಸಿ ಯೋಜನೆಯಲ್ಲಿ ₹೬೯ ಲಕ್ಷ ಮಂಜೂರಾಗಿ ೯ ಕಾಮಗಾರಿ ಮುಕ್ತಾಯಗೊಂಡಿದೆ. ೨೦೨೪- ೨೫ರಲ್ಲಿ ಕ್ರಿಯಾಯೋಜನೆಯಲ್ಲಿ ₹೬೫ ಲಕ್ಷ ಮಂಜೂರಾಗಿ ಸಿದ್ಧಪಡಿಸಬೇಕಿದೆ. ಎಲ್ಲರೂ ಕಾಮಗಾರಿಯ ವಿವರ ನೀಡಿದ್ದಾರೆ. ಸರ್ಕಾರದಿಂದ ₹೩.೫ ಕೋಟಿ ವಿಶೇಷ ಅನುದಾನ ಬಂದಿದೆ. ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ. ೧೫ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸಬೇಕಿದೆ ಎಂದರು.ಸದಸ್ಯ ನಾಗರಾಜ ನಾಯ್ಕ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ವಾರ್ಡಿನಲ್ಲಿ ಓಡಾಡದ ಸ್ಥಿತಿ ಇದೆ. ಬೀದಿನಾಯಿಗಳ ಹಾವಳಿಯನ್ನು ನಗರಸಭೆಯಿಂದ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿದಾಗ, ಇದಕ್ಕೆ ಉತ್ತರಿಸಿದ ಪೌರಾಯುಕ್ತ ಕಾಂತರಾಜು, ಬೀದಿನಾಯಿ ಹಿಡಿದು, ಶಸ್ತ್ರಚಿಕಿತ್ಸೆ ನಡೆಸಲು ೨ ಬಾರಿ ನಗರಸಭೆಯಿಂದ ಟೆಂಡರ್ ಕರೆಯಲಾಗಿತ್ತು. ಆದರೆ ಯಾರೂ ಟೆಂಡರ್ ಹಾಕಿಲ್ಲ. ಇದನ್ನು ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳು ಪಶು ಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ನಗರಸಭೆಯಿಂದ ಬೀದಿನಾಯಿ ಹಿಡಿದು ಕೊಡಲಾಗುತ್ತದೆ. ಪಶು ಸಂಗೋಪನಾ ಇಲಾಖೆಯ ವೈದ್ಯರಿಂದ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ನಗರ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಫಾರ್ಂ ನಂಬರ್- ೩ ಸಮಸ್ಯೆ

ಎಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ಶ್ಯಾಮಸುಂದರ ಭಟ್ಟ ಮಾತನಾಡಿ, ನಗರಸಭೆಯಿಂದ ಫಾರ್ಂ ನಂಬರ್- ೩ ಸಮಸ್ಯೆಯಿಂದ ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದ್ದು, ಗುಂಟೆಗೆ ₹೧ ಲಕ್ಷ ನೀಡಿದರೆ ಮಾತ್ರ ಫಾರ್ಂ ನಂಬರ್ ೩ ಸಿಗುತ್ತದೆ. ಕಟ್ಟಡ ನಿರ್ಮಾಣ ಪರವಾಗಿಗೆ ವಿಳಂಬವಾಗುತ್ತಿದ್ದು, ಚ.ಮೀ. ದರ ಹೆಚ್ಚಳವಾಗಿದೆ. ₹೩ ಸಾವಿರಕ್ಕೆ ಏರಿಕೆ ಮಾಡಲಾಗಿದ್ದು, ಅದನ್ನು ₹೨ ಸಾವಿರಕ್ಕೆ ಇಳಿಸಬೇಕು. ಇಲ್ಲವಾದಲ್ಲಿ ಮಧ್ಯಮ ವರ್ಗದವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಒಂದು ಕಟ್ಟಡಕ್ಕೆ ₹೩ರಿಂದ ೪ ಲಕ್ಷ ಪರವಾನಗಿ ಪಡೆಯಲು ಬೇಕಾಗುತ್ತದೆ. ಇದಕ್ಕೆ ಶಾಸಕರು ಪರಿಹಾರ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.