ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ನಂದೀಧ್ವಜ, ವೀರಭದ್ರ ಕುಣಿತ, ಕೊಂಬು ಕಹಳೆ, ನಂದಿ ಕೋಲು, ಜಗ್ಗಲಗಿ ಮೇಳ ಸೇರಿದಂತೆ ರಾಜ್ಯ ವಿವಿಧ ಸಾಂಸ್ಕೃತಿಕ ಕಲೆಗಳನ್ನು ಜಿಲ್ಲೆಯ ಕಲಾ ತಂಡಗಳು, ಕಲಾವಿದರು ಉತ್ತಮವಾಗಿ ಪ್ರದರ್ಶಿಸಿದರು.ನಾಡಿನಲ್ಲಿ ಕಲೆಗಳು ಈಗಲೂ ಜೀವಂತವಾಗಿ ಉಳಿದಿವೆ ಎಂಬುವುದರ ಮಟ್ಟಿಗೆ ಹಿರಿಯರಿಂದ ಯುವ ಕಲಾವಿದರ ತಮ್ಮ ಕಲೆಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿ, ನೆರೆದಿದ್ದ ಲಕ್ಷಾಂತರ ಜನರಿಂದ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿದರು.
ಜಂಬೂ ಸವಾರಿ ಸ್ವಲ್ಪ ಸಮಯದ ನಂತರ ಆಗಾಗ್ಗೆ ಬರುತ್ತಿದ್ದ ಮಳೆಯನ್ನು ಲೆಕ್ಕಿಸದೆ ಕಲಾವಿದರು ನಮ್ಮ ಸಂಸ್ಕೃತಿಯ ಕಲೆಗಳು, ಜಾನಪದ ಶೈಲಿಯ ನೃತ್ಯ, ಕುಣಿತಗಳು, ಲಂಬಾಣಿ ನೃತ್ಯ, ಕೊಡವರ ನೃತ್ಯವನ್ನು ಅರಮನೆಯಲ್ಲಿ ಆವರಣದಿಂದ ಬನ್ನಿಮಂಟಪದವರೆಗೂ ರಸ್ತೆಯುದ್ದಕ್ಕೂ ಜನರನ್ನು ರಂಜಿಸುತ್ತ ಸಾಗಿದವು.ಡೊಳ್ಳು, ತಮಟೆ ಮತ್ತು ನಗಾರಿಯ ಶಬ್ದಕ್ಕೆ ಸಾರ್ವಜನಿಕರು ಹೆಜ್ಜೆ ಹಾಕಿ, ಕಲಾವಿದರನ್ನು ಪ್ರೋತ್ಸಾಹಿಸಿದರು.
ಮೈಸೂರು ಜಿಲ್ಲೆ ಸೇರಿದಂತೆ, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ವಿಜಯನಗರ, ಧಾರವಾಡ, ದಾವಣಗೆರೆ ಬೆಳಗಾವಿ, ಉಡುಪಿ, ಚಿಕ್ಕಬಳ್ಳಾಪುರ, ಹುಬ್ಬಳ್ಳಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ, ಬಾಗಲಕೋಟೆ, ಬಳ್ಳಾರಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಲವಾರು ಕಲಾವಿದರು ಭಾಗವಹಿಸಿ ತಮ್ಮ ಕಲೆಗಳನ್ನು ಪ್ರದರ್ಶಿಸಿ ರಾಜ್ಯದಲ್ಲಿ ಕಲೆಗಳನ್ನು ಜೀವಂತವಾಗಿದೆ ಎಂದು ರೂಪಿಸಿದರು.ಮೆರವಣಿಗೆಗೆ ಮುನ್ನುಡಿ ಹಾಡಿದ ನಂದೀಧ್ವಜ ಕಲಾವಿದರು
ಮೈಸೂರಿನ ಗೌರಿಶಂಕರ ನಗರದ ಶ್ರೀ ಗೌರೀಶಂಕರ ನಂದೀಧ್ವಜ ಸಂಘದ ಮಹದೇವಪ್ಪ ಉಡಿಗಾಲ ಅವರಿಂದ ನಂದೀಧ್ವಜ ಕಲಾ ತಂಡ ಕಲಾತಂಡಗಳ ಮೆರವಣಿಗೆಗೆ ಮುನ್ನುಡಿ ಹಾಡಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾ ತಂಡಗಳು ಸ್ತಬ್ಧ ಚಿತ್ರಗಳ ನಡುವೆ ಹೆಜ್ಜೆ ಹಾಕುತ್ತ, ಸಾಹಸ ಪ್ರದರ್ಶನಗಳನ್ನು ಸಹ ನೀಡುತ್ತಾ ಕಲಾವಿದರು ಬಹಳ ಆನಂದದಿಂದ ಸಾಗಿದರು.
ವೀರಭದ್ರ ಕುಣಿತ, ಕೊಂಬು ಕಹಳೆನಗರದ ಕೆ.ಆರ್. ಮೊಹಲ್ಲಾದ ಶ್ರೀ ಅಭಿನವಶ್ರೀ ವೀರಭದ್ರ ನೃತ್ಯ ತಂಡ ಜಾನಪದ ಹಾಗೂ ಆಕಾಶವಾಣಿ ಕಲಾವಿದರು ವೀರಭದ್ರ ಕುಣಿತ, ಬೆಂಗಳೂರಿನ ಶ್ರೀ ಮಾರಮ್ಮದೇವಿ ಕಲಾತಂಡ, ಮಂಡ್ಯ ಜಿಲ್ಲೆಯ ಕಸಲಗೆರೆಯ ಸಂತೆಯ ಕೊಂಬು ಕಹಳೆ ಕಲಾ ತಂಡ, ಹೆಗ್ಗಡಹಳ್ಳಿಯ ಶ್ರೀ ಪಟ್ಟಲದಮ್ಮ ಜಾನಪದ ಕಲಾ ಬಳಗ, ಚಿತ್ರದುರ್ಗದ ಚಿಕ್ಕಬೆನ್ನೂರು, ಚೀಳಂಗಿಯ ಕೊಂಬು ಕಹಳೆ ಕಲಾ ತಂಡವು ಕೊಂಬು ಕಹಳೆ ಪ್ರದರ್ಶನ ಆಕರ್ಷಿತವಾಗಿತ್ತು.
ನಂದಿ ಕೋಲು, ಜಗ್ಗಲಗಿ ಮೇಳ, ಕುಡುಬಿ ಗುಮಟೆ ನೃತ್ಯದಾವಣಗೆರೆ ಜಿಲ್ಲೆಯ ಬಸಾಪುರದ ಶ್ರೀ ಬಸವಕಲಾ ಲೋಕ, ವಿಜಯನಗರದ ಶ್ರೀ ಬಸವೇಶ್ವರ ಸಮಾಳ ಮತ್ತು ನಂದಿಧ್ವಜ ಸಾಂಸ್ಕೃತಿಕ ಕಲಾ ಸೇವಾ ಟ್ರಸ್ಟ್ ವತಿಯಿಂದ ನಂದಿ ಕೋಲು, ಧಾರವಾಡ ಜಿಲ್ಲೆಯ ಕಲಗೇರಿಯ ಶ್ರೀ ದುರ್ಗಾದೇವಿ ಜಾನಪದ ಜಗ್ಗಳ ಮೇಳ ಹಾಗೂ ಬೆಳಗಾವಿ ಜಿಲ್ಲೆಯ ಗುಂಡೇನಹಟ್ಟಿಯ ಶ್ರೀ ಬಸವೇಶ್ವರ ಜಾನಪದ ಜಗ್ಗಲಗಿ ಮೇಳದ ವತಿಯಿಂದ ಜಗ್ಗಲಗಿ ಮೇಳವನ್ನು ಹಾಗೂ ಉಡು ಜಿಲ್ಲೆಯ ಮಂದಾರ್ತಿ ನಕ್ಷಕೋಡಿ ಹೆಗ್ಗುಂಜೆಯ ಶ್ರೀ ಮಲ್ಲಿಕಾರ್ಜುನ ಕುಡು ಹೋಳಿ ಜಾನಪದ ಕಲಾಸಮಿತಿಯಿಂದ ಕುಡುಬಿ ಗುಮಟೆ ನೃತ್ಯವು ಹೆಚ್ಚಾಗಿ ಆಕರ್ಷಿಸಿತು.
ಆಕರ್ಷಿಸಿದ ಜಡೆ ಕೋಲಾಟ, ಕರಬಲ ನೃತ್ಯ, ದೊಣ್ಣೆವರಸೆಮಂಡ್ಯ ಜಿಲ್ಲೆಯ ಸಂತೆಕಸಲಗೆರೆಯ ಭೂಮಿಸಿದ್ದೇಶ್ವರ ಕಲಾಬಳಗ, ಸಿದ್ದಯ್ಯ ಹಾಗೂ ಎಸ್. ರಾಜಣ್ಣ ತಂಡವು ಜಡೆ ಕೋಲಾಟ, ಬೆಳಗಾವಿಯ ಕಿಡದಾಳ ಸಪ್ತಸ್ವರ ಸಂಗೀತ ಕಲಾ ಬಳಗ, ಮಂಡ್ಯ ಜಿಲ್ಲೆಯ ಎಲೆತೋಟದ ಕ್ಯಾತಮ್ಮ ಯುವಕರ ಜನಪದ ಕಲಾತಂಡ ಹಾಗೂ ಕೆನ್ನಾಳು ಗ್ರಾಮದ ವೀರಮದಕರಿ ನಾಯಕರ ಯುವಕ ಸಂಘದ ಕಲಾವಿದರು. ದೊಣ್ಣೆವರಸೆ ಉತ್ತಮವಾಗಿ ಪ್ರದರ್ಶಿಸಿದರು.
ಗಾರುಡಿ ಗೊಂಬೆ, ಜೋಗತಿ ನೃತ್ಯ, ಕಂಗಿಲು ಕುಣಿತಚಿಕ್ಕಬಳ್ಳಾಪುರ ಜಿಲ್ಲೆಯ ಜಂಗಮಕೋಟೆಯ ಶ್ರೀ ನಂಜುಂಡೇಶ್ವರ ಯಕ್ಷಗಾನ ಗೊಂಬೆ ಯುವಕರ ಸಂಘವು ಗಾರುಡಿ ಗೊಂಬೆ, ಹುಬ್ಬಳ್ಳಿಯ ರೇಣುಕಾನಗರದ ಜಾನಪದ ನೆರಳು ಕಲೆ ಮತ್ತು ಸಾಂಸ್ಕೃತಿಕ ನಿರ್ವಹಣೆ ಹಾಗೂ ಸಂಶೋಧನಾ ಕೇಂದ್ರದಿಂದ ಜೋಗತಿ ನೃತ್ಯ, ಉಡುಪಿ ಜಿಲ್ಲೆಯ ತೆಂಗುಬಿರ್ತಿ ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ ಅಂಕದಮನೆ ಜಾನಪದ ಕಲಾ ಸಂಘ, ದಕ್ಷಿಣ ಕನ್ನಡ ಜಿಲ್ಲೆಯ ಬಂಗ್ಲೆಗುಡ್ಡೆಯ ಸುಗಿವು ಜಾನಪದ ಕಲಾತಂಡವು ಕಂಗಿಲು ಕುಣಿತವನ್ನು ವಿಶೇಷವಾಗಿ ಪ್ರದರ್ಶಿಸಿದರು.
ತಮಿಳುನಾಡಿ ಕರಗ ತಪ್ಪಟಂತಮಿಳು ನಾಡಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಕರಗ ತಪ್ಪಟಂ ಆಕರ್ಷಕವಾಗಿತ್ತು.
ದಾಲಪಟ, ಢಕ್ಕೆ ಕುಣಿತ, ಹೂವಿನ ನೃತ್ಯಧಾರವಾಡ ಜಿಲ್ಲೆಯ ಶ್ರೀ ಮಲ್ಲಿಕಾರ್ಜುನ ಅಲೆಮಾರಿ ದಾಲಪಟಾ ಕಲಾವಿದರ ಸಂಘ, ಉತ್ತರ ಕನ್ನಡ ಜಿಲ್ಲೆಯ ಹಲ್ಯಾಣಿ ಹೆರೆಬೀಳು ಗ್ರಾಮದ ಶ್ರೀ ದುರ್ಗ ಗೊಂಡರ ಢಕ್ಕೆ ಕುಣಿತ ಜಾನಪದ ಸಂಘದಿಂದ ಢಕ್ಕೆ ಕುಣಿತ, ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ಶ್ರೀ ಗಾಜನನ ಯುವಕ ಮಂಡಳ ಕಮ್ಮಾರ ಓಣಿ ಅವರು ಹೂವಿನ ನೃತ್ಯ ಪ್ರದರ್ಶಿಸಿದರು.
ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿದ ಯುವಕರುಶಿವಮೊಗ್ಗ ಜಿಲ್ಲೆಯ ಅಂಬಾಲಗೊಬ್ಬ ಗ್ರಾಮದ ಶ್ರೀ ಬೀರಲಿಂಗೇಶ್ವರ ವಾಲ್ಮೀಕಿ ಯುವಕ ಡೊಳ್ಳಿನ ಸಂಘ, ಆನವಟ್ಟಿ ಗ್ರಾಮದ ಶ್ರೀ ದುರ್ಗಾಂಬ ಯುವಕ ಡೊಳ್ಳಿನ ಸಂಘ, ಹಾವೇರಿ ಜಿಲ್ಲೆಯ ಇನಾಂಯಪೂರದ ಶ್ರೀ ಬೀರಲಿಂಗೇಶ್ವರ ಜಾನಪದ ಕಲಿಕಾ ವಿದ್ಯಾ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲೆಯ ಸುರಹೊನ್ನೆ ಗ್ರಾಮದ ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಯುವಕರ ಸಂಘದ ಕಲಾವಿದರ ಡೊಳ್ಳು ಕಣಿತಕ್ಕೆ ಯುವಕರು ಹೆಜ್ಜೆ ಹಾಕಿದರು.
ವಿವಿಧ ವೇಷ ತೊಟ್ಟ ವೇಷಗಾರರುಬಳ್ಳಾರಿ ಜಿಲ್ಲೆಯ ಹಳೆದರೋಜಿ ಗ್ರಾಮದ ಶ್ರೀ ಅಶ್ವ ರಾಮಣ್ಣ ಹಗಲು ವೇಷ ಕಲಾ ಸಂಘದ ಕಲಾವಿದರ ವಿವಿಧ ವೇಷ ತೊಟ್ಟು ನೃತ್ಯ ಮಾಡುತ್ತಾ ಮೆರವಣಿಗೆಯಲ್ಲಿ ಸಾಗಿದರು.
ವಿಜಯಪುರ ಜಿಲ್ಲೆಯ ಸಿದ್ದಾಪುರದ ಶ್ರೀ ರೇವಣಸಿದ್ದೇಶ್ವರ ಯುವಕ ಕಲಾ ಸಂಘದ ಕಲಾವಿದರ ಸತ್ತಿಗೆ ಕುಣಿತ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಲಾವಿದರಿಂದ ಕರಂಗೋಲು ಕುಣಿತ, ಕಲಬುರಗಿ ಜಿಲ್ಲೆಯ ಕುಸನೂರಿನ ಮಾತಂಗಿ ಹಲೆಗ ಕಲಾವಿದರ ಸಂಘದ ಕಲಾವಿದರು ಹಲಗೆ ಮೇಳ, ತುಮಕೂರು ಜಿಲ್ಲೆಯ ಕಿತ್ನಾಮಂಗಲ ಗ್ರಾಮದ ಸೋಮನ ಕುಣಿತ ಕಲಾತಂಡದಿಂದ ಸೋಮನ ಕುಣಿತ ಪ್ರದರ್ಶಿಸಿದರು.ಆಕರ್ಷಕ ಹುಲಿವೇಷದ ನೃತ್ಯ
ಉಡುಪಿ ಜಿಲ್ಲೆಯ ಪಡು ವೈಲೂರು ಗ್ರಾಮದ ಇಷ್ಟ ಮಹಾಲಿಂಗೇಶ್ವರ ಹುಲಿವೇಷ ತಂಡದ ಕಲಾವಿದರು ಹುಲಿಯ ವೇಷಗಳನ್ನು ತೊಟ್ಟು ಕುಣಿದು ಕುಪ್ಪಳಿಸಿದರು.ಕೊಡವರ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ
ಕೊಡಗು ಜಿಲ್ಲೆಯ ಸುಗ್ಗಿ ಕುಣಿತ ಕಲಾತಂಡವು ಕೊಡವರ ನೃತ್ಯ ಹಾಗೂ ಒಕ್ಕಲಿಗರ ಕುಣಿತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೋಣಕಾರ ಕರ್ಕಿ ಗ್ರಾಮದ ಹಾಲಕ್ಕಿ ಸುಗ್ಗಿ ಕುಣಿತ ಪ್ರದರ್ಶಿಸಿದರು.ಮಹಿಳಾ ಕೋಲಾಟ, ಪಟಾ ಕುಣಿತ
ಮಂಡ್ಯ ಜಿಲ್ಲೆಯ ವಿನಾಯಕ ಮಹಿಳಾ ಕೋಲಾಟ ತಂಡದ ಮಹಿಳಾ ಕಲಾವಿದರು ಕೋಲಾಟ ಹಾಗೂ ರಾಮನಗರ ಜಿಲ್ಲೆಯ ಕಸಬಾ ಹೋಬಳಿಯ ತೂನಿನಕೆರೆ ಗ್ರಾಮ ಹಾಗೂ ಮಂಡ್ಯ ಜಿಲ್ಲೆಯ ಪಡ್ಕಾ ಕುಣಿತ ಕಲಾತಂಡವು ಪಟಾ ಕುಣಿತ ನೋಡಗರನ್ನು ರಂಜಿಸಿದರು.ಚಿಕ್ಕಮಗಳೂರು ಜಿಲ್ಲೆಯ ಹೊಲಿಹಳ್ಳಿ, ಮಹಿಳಾ ವೀರಗಾಸೆ ಕಲಾ ತಂಡದಿಂದ ಮಹಿಳಾ ವೀರಗಾಸೆ, ಉತ್ತರ ಕನ್ನಡ ಜಿಲ್ಲೆಯ ಹಲಿಯಾಳದ ಸಿದ್ಧಿ ಡಮಾಮಿ ನೃತ್ಯ ಕಲಾತಂಡದಿಂದ ಸಿದ್ದಿ ಡಮಾಮಿ ನೃತ್ಯ, ಬಾಗಲಕೋಟೆಯ ಜಿಲ್ಲೆಯ ಜಾನಪದ ಕರಡಿ ಮಜಲು ತಂಡ, ಗದಗ ಜಿಲ್ಲೆಯ ಕೊಣ್ಣೂರು ಗ್ರಾಮದ ಕರಡಿಮೇಳ ಕಲಾ ತಂಡದಿಂದ ಕರಡಿ ಮಜಲು ಪ್ರದರ್ಶನ ನೀಡಿದರು.
ಕರಗ ನೃತ್ಯ, ಪೂಜಾ ಕುಣಿತ, ನವಿಲು ನೃತ್ಯ, ಹೆಜ್ಜೆ ಮೇಳ, ಗೊರವರಕುಣಿತ, ದಟ್ಟಿ ಕುಣಿತ, ಲೆಂಗಿ ನೃತ್ಯ, ತಮಟೆ ಮತ್ತು ನಗಾರಿ, ಕೋಲಾಟ, ಲಂಬಾಣಿ ನೃತ್ಯ, ಪುರವಂತಿಕ, ಉರಮೆ ವಾದನ, ಸಂಪಣಿ ನೃತ್ಯ, ಬೀಸು ಕಂಸಾಳೆ, ಬೆಳಗಾವಿ ಜಿಲ್ಲೆಯಿಂದ ಝಾಂಜ್ ಪಥಕ್, ರಾಮ ಪಳಕ ನೃತ್ಯ, ಕರಗ ಕೋಲಾಟ, ಹಕ್ಕಿಪಿಕ್ಕಿ ನೃತ್ಯ, ಕಥಕಳಿ ಗೊಂಬೆ, ಮರಗಾಲು, ತಟ್ಟಡಗುಲು, ವೀರಮಕ್ಕಳ ಕುಣಿತ, ಚೆಡಂಎ ವಾದನ, ಕಣಿವಾದನ, ತಮಟೆ ವಾದನ, ಬೇಡರ ವೇಷ ಹಾಗೂ ಗಾರುಡಿ ಗೊಂಬೆ ಕಲಾವಿದರು ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಿ ಕಲಾವಿದರು ನಾಡಿನ ವಿವಿಧ ಕಲೆಗಳನ್ನು ಪ್ರದರ್ಶಿಸಿ ಮನಸೂರೆಗೊಂಡರು.---------------