ಸಾರಾಂಶ
-450 ರುಪಾಯಿ ನೌಕರಿ, ಜೀವಕ್ಕಿಲ್ಲ ಖಾತರಿ । ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ । ಕಾರ್ಮಿಕರು-ಕುಟುಂಬಕ್ಕೆ ಭದ್ರತೆ, ಸುರಕ್ಷತೆ ಇಲ್ಲ!
- ಕೆಮಿಕಲ್ ಕಂಪನಿಗಳಲ್ಲಿ ಕಾರ್ಮಿಕರ ಪಟ್ಟಿಯೇ ನಿಗೂಢ !- ಕನ್ನಡಪ್ರಭ ಸರಣಿ ವರದಿ - ಭಾಗ : 27
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಸೇರಿದಂತೆ ವಿವಿಧ ರೀತಿಯ ಕಾರ್ಖಾನೆಗಳಲ್ಲಿನ ಕಾರ್ಮಿಕರ ಸ್ಥಿತಿಗತಿ ಹೇಗಿದೆ?ಬಲ್ಲ ಮೂಲಗಳ ಪ್ರಕಾರ, ಬಹುತೇಕರದ್ದು ಶೋಚನೀಯ ಬದುಕು. ಹೊರಗುತ್ತಿಗೆ ಆಧಾರದ ಮೇಲೆ, ದಿನಕ್ಕೆ 450 ರು.ಗಳ ಕೂಲಿ ಆಧಾರದ ಮೇಲೆ ನೌಕರಿ ಸಿಕ್ಕರಾದರೂ, ಕಾರ್ಮಿಕರ ಜೀವಕ್ಕಿಲ್ಲಿಲ್ಲ ಖಾತರಿ ! ಕೆಲವೊಮ್ಮೆ ಅವಘಡಗಳು ನಡೆದಾಗ ಕಾರ್ಮಿಕರ ಪಟ್ಟಿಯೇ ನಿಗೂಢವಾಗುತ್ತದೆ. ಉತ್ತರ ಭಾರತದ ರಾಜ್ಯಗಳಿಂದ ಆಗಮಿಸಿದ್ದ ಅನೇಕರಲ್ಲಿ ಇದ್ದವರೆಷ್ಟು ? ಸತ್ತವರೆಷ್ಟು? ಅನ್ನೋದು ಹೊರಜಗತ್ತಿಗೆ ತಿಳಿಯೋದೇ ಇಲ್ಲವಂತೆ.
ಕೆಮಿಕಲ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರಿಗೆ ಸುರಕ್ಷತೆಯ ಬಗ್ಗೆ ನಿಷ್ಕಾಳಜಿ ವಹಿಸಲಾಗುತ್ತದೆ. ಬಲ್ಕ್ ಡ್ರಗ್ ಫಾರ್ಮಗಳಲ್ಲಿ ಅಪಾಯಕಾರಿ ರಾಸಾಯನಿಕಗಳ ವಹಿವಾಟು ಅತೀ ಹೆಚ್ಚು. ಹೀಗಿರುವಾಗ, ಕಾರ್ಮಿಕರಿಗೆ ಸುರಕ್ಷತಾ ದೃಷ್ಟಿಯ ಸಾಧನ-ಸಲಕರಣಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ವಹಿಸುವ ಕಂಪನಿಗಳು, ಕಾರ್ಮಿಕರ ದಿನಾಚರಣೆ, ಗಣ್ಯರು ಅಥವಾ ಕಾರ್ಯ ಚಟುವಟಿಕೆಗಳ ಪರಿಶೀಲಿಸಲು ತಪಾಸಣಾ ತಂಡಗಳ ಭೇಟಿಯ ಸಂದರ್ಭಗಳಲ್ಲಿ ಮಾತ್ರವೇನೋ ಎಂಬಂತೆ ಸಂಪ್ರದಾಯದಂತೆ ಒಂದಿಷ್ಟು ಕೈಗವಸು, ಮುಖರಕ್ಷಕ ಕವಚ, ಬೂಟು-ಕೋಟು ಮುಂತಾದವಗಳ ನೀಡಿ ಎಲ್ಲವೂ ಸರಿಯಿದೆ ಎಂಬ ಷರಾ ಬರೆಯಿಸಿಕೊಳ್ಳುತ್ತಾರೆನ್ನಲಾಗಿದೆ.ಅಕಸ್ಮಾತ್ ಅವಘಡಗಳು ಸಂಭವಿಸಿದಾಗ, ಯಾವುದೇ ವಿವಾದ- ಕೇಸು ದಾಖಲಾಗದಂತೆ ಬಗೆಹರಿಸಲೆಂದು ಹೊರಗುತ್ತಿಗೆ ಆಧಾರದ ಮೇಲೆ ವಿವಿಧೆಡೆಯಿಂದ ಕಾರ್ಮಿಕರ ಕರೆತರುವ ಗುತ್ತಿಗೆದಾರನಿಗೆ ಒಂದಿಷ್ಟು ಹೆಚ್ಚಿನ ಹಣ ನೀಡಿ, ಕೈತೊಳೆದುಕೊಳ್ಳುತ್ತಾರೆ. ಕಾರ್ಮಿಕ ಇಲಾಖೆಯನ್ನೇ ಯಾಮಾರಿಸುವ ಕಂಪನಿಗಳು ಕಾರ್ಮಿಕರ ಪಟ್ಟಿಯನ್ನೇ ನಿಗೂಢವಾಗಿರಿಸುತ್ತವೆ.
"450 ರು.ಗಳ 500 ರು.ಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆಂದು ಕರೆದುಕೊಂಡು ಬರುವ ಕಂಪನಿಗಳು, ಅಪಾಯಕಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸುತ್ತವೆ. 8 ಗಂಟೆಗಿಂತ ಹೆಚ್ಚು ಕಾಲ, ಒಮ್ಮೊಮ್ಮೆ ಸತತ 12 ಗಂಟೆಗಳ ಕಾಲ ಕೆಲಸಕ್ಕೆ ದುಡಿಸಿಕೊಳ್ಳುವ ಇವರು, ನಮ್ಮಂತಹವರಿಗೆ ಏನಾದರೂ ಆದರೆ, ತಮಗೆ ಪರಿಚಯಸ್ಥ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ತಾತ್ಕಾಲಿಕ ಚಿಕಿತ್ಸೆ ಕೊಡಿಸುತ್ತಾರೆ. ಸಲ್ಫ್ಯೂರಿಕ್ ಆ್ಸಸಿಡ್ ಬಿದ್ದು ನನ್ನ ಮುಖಕ್ಕಾದ ಗಾಯ ಈಗಲೂ ಮಾಸಿಲ್ಲ. 5-6 ಬಾರಿ ಲೇಸರ್ ಚಿಕಿತ್ಸೆ ಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ತಿಂಗಳಿಗೆ ಒಮ್ಮೆ 6-7 ಸಾವಿರ ರು.ಗಳ ಹಣ ಇದಕ್ಕೆ ನೀಡಿದರೆ ಮನೆ ಹೇಗೆ ಸಾಗಿಸಬೇಕು.. " ಅಂತಾರೆ ಫಾರ್ಮಾ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಕಡೇಚೂರಿನ ಯುವಕ ರಂಗನಾಥ (ಹೆಸರು ಬದಲಾಯಿಸಲಾಗಿದೆ).ಕಾರ್ಮಿಕರ ಸಂಖ್ಯೆ, ಸ್ಥಿತಿಗತಿ, ವೇತನ- ಭತ್ಯೆಗಳು, ಅಪಾಯಕಾರಿ ಜಾಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಸುರಕ್ಷತೆ- ಭದ್ರತೆ, ಅವರ ಕುಟುಂಬದ ವಿವರ, ಸೌಲಭ್ಯಗಳ ಬಗ್ಗೆ ಕಂಪನಿಗಳು ಕಾಗದದದಲ್ಲಿ ನೀಡುವ ಮಾಹಿತಿಗೂ, ವಾಸ್ತವಕ್ಕೂ ತಾಳೆಯೇ ಆಗುವುದಿಲ್ಲ ಅಂತಾರೆ ಬದ್ದೇಪಲ್ಲಿಯ ರಮೇಶ.
===ಬಾಕ್ಸ್===ಸುರಕ್ಷತಾ ಸಾಧನ ನೀಡದ ಕೆಮಿಕಲ್ ಕಂಪನಿ: ಬದ್ದೇಪಲ್ಲಿ ತಾಂಡಾದ ಐವರಿಗೆ ಸುಟ್ಟ ಗಾಯ
ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಸುರಕ್ಷತೆ ಪ್ರಶ್ನೆ ಉದ್ಭವಿಸಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕೆಮಿಕಲ್ ಪೌಡರ್ ಬಿದ್ದು ಐವರು ಕಾರ್ಮಿಕರಿಗೆ ಸುಟ್ಟಗಾಯಗಳಾಗಿದ್ದರೂ, ಚಿಕಿತ್ಸೆ ನೀಡಿಸುವಲ್ಲಿ ಕಂಪನಿಯ ನಿರ್ಲಕ್ಷ್ಯ ವಹಿಸಿ, ಕಾರ್ಮಿಕರ ಅಲೆದಾಡಿಸಿದ ಆರೋಪ ಕೇಳಿ ಬಂದಿದೆ.ಲ್ಯಾಬೋರೇಟರೀಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬದ್ದೇಪಲ್ಲಿ ತಾಂಡಾದ ಐವರು ಯುವ ಕಾರ್ಮಿಕರ ಮೈಮೇಲೆ ಆಕಸ್ಮಿಕವಾಗಿ ಕೆಮಿಕಲ್ ಪೌಡರ್ ಬಿದ್ದು ಮೈಕೈಗಳಿಗೆ ಗಾಯವಾಗಿದೆ. ಘಟನೆ ನಡೆದು ಹದಿನೈದು ದಿನಗಳಾದರೂ, ಇವರಿಗೆ ಚಿಕಿತ್ಸೆ ಕೊಡಿಸಬೇಕಾದ ಕಂಪನಿ ಮಂಡಳಿ, ಕಾರ್ಮಿಕರದ್ದೇ ತಪ್ಪು ಎಂಬುವಂತೆ ಬಿಂಬಿಸಿ, ಬರಿಗೈಲಿ ವಾಪಸ್ಸು ಕಳುಹಿಸಿದ್ದ ಘಟನೆಯಿಂದ ಆಕ್ರೋಶಗೊಂಡ ಈ ನೊಂದ ಯುವಕರ ಗುಂಪು, ಶನಿವಾರ ಕಾರ್ಖಾನೆ ಆವರಣಕ್ಕೆ ಆಗಮಿಸಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ಸುದ್ದಿ ಅರಿಯುತ್ತಲೇ, ಮಾಧ್ಯಮಗಳು ಅಲ್ಲಿಗೆ ಆಗಮಿದ್ದಾಗ, ಆತಂಕಗೊಂಡ ಕಂಪನಿ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಮನವೊಲೈಸುವ ಯತ್ನ ನಡೆಸಿದ್ದಾರೆ. ಇದೇ ವೇಳೆ, ಕೈಗಾರಿಕಾ ಪ್ರದೇಶದ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್ ಅವರಿಗೂ ದೂರಿದ್ದಾರೆ. ಕೊನೆಗೆ, ಘಟನೆಯ ತೀವ್ರತೆ ಅರಿತ ಕಂಪನಿ ಮಂಡಳಿ, ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ.ಕೈಗಾರಿಕೆಗಳು ಹೊರಸೂಸುವ ವಿಷಗಾಳಿ, ತ್ಯಾಜ್ಯ ಘಾಟಿನಿಂದಾಗಿ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳ ಜೊತೆಗೆ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವಕ್ಕೂ ಯಾವುದೇ ರೀತಿಯ ಸುರಕ್ಷತೆ ಇಲ್ಲ ಎಂದು ಆರೋಪಿಸಲಾಗಿದೆ. ಇಂತಹ ಅವಘಡಗಳು ಈ ಹಿಂದೆ ನಡೆದಿವೆಯಾದರೂ, ಬೆಳಕಿಗೆ ಬರುವುದೇ ಇಲ್ಲ ಎನ್ನಲಾಗಿದೆ. ಉತ್ತರ ಭಾರತ, ಬಿಹಾರ್, ಓಡಿಸ್ಸಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಇಲ್ಲಿದ್ದಾರೆ. ಅವರ ಸುರಕ್ಷತೆ, ಆರೋಗ್ಯ ವಿಚಾರದಲ್ಲಿ ಕಂಪನಿಗಳು ಬೇಜವಾಬ್ದಾರಿ ವಹಿಸುತ್ತವೆ. 10-12 ಸಾವಿರ ರು.ಗಳಿಗೆ ಇಲ್ಲಿ ಉದ್ಯೋಗ ಅರಸಿ ಬರುವ ಅವರುಗಳಿಗೆ ಸುರಕ್ಷತೆ - ಬದುಕಿನ ಭದ್ರತೆ ಇರುವುದಿಲ್ಲ. ಈ ಹಿಂದೆ, ಕಾರ್ಖಾನೆಯೊಂದರ ಬಾಯ್ಲರ್ ಬ್ಲಾಸ್ಟ್ ಆಗಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು, ಕೆಮಿಕಲ್ ಮಿಶ್ರಿತ ನೀರು ಹಳ್ಳಕ್ಕೆ ಬಿಟ್ಟ ಪರಿಣಾಮ ಸಾವಿರಾರು ಜಲಚರಗಳು ಸಾವನ್ನಪ್ಪಿದ್ದ ಘಟನೆಗಳು ಇಲ್ಲಿನವರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ.
-ಕೋಟ್- 1 : ಇಂತಹ ಅನೇಕ ಅವಘಡಗಳು, ಪ್ರಕರಣಗಳು ಅಲ್ಲಿ ನಡೆಯುತ್ತಾವಾದರೂ, ಎಲ್ಲವನ್ನೂ ಮುಚ್ಚಿ ಹಾಕಲಾಗುತ್ತದೆ. ಕ್ರಮ ಕೈಗೊಳ್ಳಬೇಕಾದ ಕೆಲವು ಪೊಲೀಸ್, ಆರೋಗ್ಯ ಇಲಾಖೆ ವೈದ್ಯರೂ ಕಂಪನಿಗಳ ಪರವಾಗಿ ಏಜೆಂಟರಂತೆ ಕೆಲಸ ಮಾಡಿ, ಒಂದಿಷ್ಟು ದುಡ್ಡು ತೆಗೆದುಕೊಂಡು ಅಡ್ಜಸ್ಟ್‌ಮೆಂಟ್ ಆಗಿ ಅಂತಾರೆ. ನಮ್ಮಂತಹವರು ಬದುಕಲು ಉದ್ಯೋಗ ಅನಿವಾರ್ಯವಾಗಿದ್ದರಿಂದ ಸಹಿಸಿಕೊಳ್ಳುತ್ತೇವೆ. - ರಾಚನಹಳ್ಳಿಯ ಆಂಜನೇಯ (ಹೆಸರು ಬದಲಾಯಿಸಲಾಗಿದೆ) ಫಾರ್ಮಾ ಕಂಪನಿಯ ಹೊರಗುತ್ತಿಗೆ ಕಾರ್ಮಿಕ.
-4ವೈಡಿಆರ್1 : ಕೆಮಿಕಲ್ ಪೌಡರ್ ಬಿದ್ದು ತಮಗಾದ ಗಾಯಗಳನ್ನು ತೋರಿಸುತ್ತಿರುವ ಕಾರ್ಮಿಕರು.
4ವೈಡಿಆರ್2 : ಕೆಮಿಕಲ್ ಕಂಪನಿಗಳಲ್ಲಿ ಅಪಾಯಕಾರಿ ರಾಸಾಯನಿಕದಿಂದಾಗಿ ಕಾರ್ಮಿಕರಿಗಾದ ಗಾಯ4ವೈಡಿಆರ್3 : ಕೆಮಿಕಲ್ ಕಂಪನಿಗಳಲ್ಲಿ ಅಪಾಯಕಾರಿ ರಾಸಾಯನಿಕದಿಂದಾಗಿ ಕಾರ್ಮಿಕರಿಗಾದ ಗಾಯ