ಸಾರಾಂಶ
ಒಟ್ಟು 1828 ಕುಟುಂಬಗಳಿಗೆ, ದೈಹಿಕ- ಮಾನಸಿಕ ಸಮಸ್ಯೆಯ ಮಕ್ಕಳ ವಿಶೇಷ ಶಾಲೆಗಳು ಸೇರಿದಂತೆ 75ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು 4 ಕೋಟಿ ರು. ಮೊತ್ತದ ನೆರವು ನೀಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಎಂಆರ್‌ಜಿ ಗ್ರೂಪಿನ ಉದ್ಯಮಗಳ ಸಮಾಜ ಸೇವಾ ಕಾರ್ಯಕ್ರಮವಾದ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ‘ನೆರವು’ ವಿತರಣೆ ಸಮಾರಂಭ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸೋಮವಾರ ನಡೆಯಿತು. ಒಟ್ಟು 1828 ಕುಟುಂಬಗಳಿಗೆ, ದೈಹಿಕ- ಮಾನಸಿಕ ಸಮಸ್ಯೆಯ ಮಕ್ಕಳ ವಿಶೇಷ ಶಾಲೆಗಳು ಸೇರಿದಂತೆ 75ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು 4 ಕೋಟಿ ರು. ಮೊತ್ತದ ನೆರವನ್ನು ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಲನಚಿತ್ರ ನಟ, ನಿರ್ದೇಶಕ ರಮೇಶ್ ಅರವಿಂದ್ ಮಾತನಾಡಿ, ದಾನವನ್ನು ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಮತ್ತು ವಿನಯಪೂರ್ವಕವಾಗಿ ನೀಡಿದರೆ ಅದೇ ಒಳ್ಳೆಯ ದಾನ ಎಂದರು.ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ, ಜೀವನದಲ್ಲಿ ಹೋರಾಟದ ಮೂಲಕ ಮುಂದೆ ಬಂದ ಪ್ರಕಾಶ್ ಶೆಟ್ಟಿ ಅವರ ನೆರವು ಕಾರ್ಯಕ್ರಮದ ಹಿಂದೆ ಸಮಾಜಕ್ಕೆ ಅನೇಕ ಸಂದೇಶಗಳಿವೆ. ಗಳಿಸಿದ ಸಂಪತ್ತಿನ ಒಂದಂಶ ಹಂಚಿಕೆ ಮಾಡಿ ಅವಕಾಶ ವಂಚಿತರಿಗೆ ಸಬಲೀಕರಣದ ಹಾದಿ ತೋರಿಸುತ್ತಿದ್ದಾರೆ ಎಂದರು.ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮಾತನಾಡಿ, ಬಡತನದಿಂದ ಕಂಗೆಟ್ಟಿದ್ದ ನನಗೆ ಕೃಷ್ಣ ಪರಮಾತ್ಮ ಬೆಳಕಿನ ದಾರಿ ತೋರಿದ. ದೇವರು ತೋರಿದ ಬೆಳಕನ್ನು ಹಂಚುವ ಕೆಲಸ ಮಾಡಬೇಕು ಎಂದು ಹಂಬಲಿಸಿದೆ. ಅದರ ಫಲಿತಾಂಶವೇ ನೆರವು ಕಾರ್ಯಕ್ರಮ ಎಂದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಎಂ.ಆರ್.ಜಿ. ಗ್ರೂಪಿನ ಆಡಳಿತ ನಿರ್ದೇಶಕ ಗೌರವ ಶೆಟ್ಟಿ, ಅನುಷ್ಕಾ ಶೆಟ್ಟಿ, ಆಶಾ ಶೆಟ್ಟಿ ಇದ್ದರು. ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ದುಡಿದ ಈಶ್ವರ್ ಶೆಟ್ಟಿ, ಸಮೀಕ್ಷಾ ಶೆಟ್ಟಿ ತಂಡವನ್ನು ಗೌರವಿಸಲಾಯಿತು.