ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಬಳ ಪ್ರಕ್ರಿಯೆಯನ್ನು ಆರ್‌ಸಿಎಚ್ ( ರಿಪ್ರೊಡಕ್ಟೀವ್ ಆ್ಯಂಡ್ ಚೈಲ್ಡ್ ಹೆಲ್ತ್ ) ಪೋರ್ಟಲ್‌ನಿಂದ ಡೀಲಿಂಕ್ ಮಾಡಬೇಕು ಹಾಗೂ ಮಾಸಿಕ ಕನಿಷ್ಠ ₹15 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನಕ್ಕೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಆಶಾ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ (ಎಐಯುಟಿಯುಸಿ) ಧರಣಿ ಆರಂಭಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ, ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡಿದ್ದಕ್ಕೆ ತಕ್ಕಂತೆ ಪ್ರೋತ್ಸಾಹ ಧನ ಸಿಕ್ಕಿಲ್ಲ. ಹಾಗಾಗಿ ವೇತನದ ಪ್ರಕ್ರಿಯೆಯಿಂದ ಆರ್‌ಸಿಎಚ್ ಪೋರ್ಟಲ್ ಅನ್ನು ಡೀಲಿಂಕ್ ಮಾಡಬೇಕು.
ಕೇಂದ್ರ ಸರ್ಕಾರ ಕೆಲಸಕ್ಕೆ ₹ 7 ಸಾವಿರ ಹಾಗೂ ರಾಜ್ಯ ಸರ್ಕಾರದ ಕೆಲಸಕ್ಕೆ ₹ 8 ಸಾವಿರ ಸೇರಿ ಮಾಸಿಕ ಕನಿಷ್ಠ ₹ 15ಸಾವಿರ ಪ್ರೋತ್ಸಾಹ ಧನ ನೀಡಬೇಕು. ಸಮರ್ಪಕವಾಗಿ ಮೊಬೈಲ್, ಡಾಟಾ ಒದಗಿಸಬೇಕು ಎಂದು ಆಗ್ರಹಿಸಿದರು.
ಸಚಿವ ದಿನೇಶ್ ಗುಂಡೂರಾವ್ ಭರವಸೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮನವಿ ಸ್ವೀಕರಿಸಿ, ಹಂತ, ಹಂತವಾಗಿ ಎಲ್ಲ ಬೇಡಿಕೆ ಈಡೇರಿಸುವುದಾ ಒಪ್ಪಂದ ಮಾಡಿಕೊಳ್ಳಲಾಗುವುದು.
ಸಮವಸ್ತ್ರ, ಡೈರಿಯನ್ನು ತಕ್ಷಣ ಒದಗಿಸುತ್ತೇವೆ ಎಂದರು. ಆದರೆ, ಆರ್‌ಸಿಎಚ್ ಪೋರ್ಟಲ್ ಕುರಿತು ಭರವಸೆ ನೀಡದ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಬುಧವಾರವೂ ಧರಣಿ ಮುಂದುವರಿಸುವುದಾಗಿ ಹೇಳಿದರು.