ಜ್ಞಾನದೀವಿಗೆ ವಿದ್ಯಾಸಂಸ್ಥೆಯಲ್ಲಿ ಆಕಾಶಯಾನ ಕಾರ್ಯಕ್ರಮ

| Published : Feb 10 2025, 01:49 AM IST

ಸಾರಾಂಶ

ಮಾನವ ಜೀವನದಲ್ಲಿ ಸೂರ್ಯ-ಚಂದ್ರರ ಸಂಬಂಧ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಖಗೋಳ ಮತ್ತು ಜ್ಯೋತಿಷ್ಯದ ಹುಟ್ಟಿಗೆ ಕಾರಣ. ಗ್ರಹ-ತಾರೆಗಳ ಶಿಸ್ತು ಬದ್ಧ ಚಲನೆಯ ಕ್ರಮಬದ್ಧ ವೀಕ್ಷಣೆಯಿಂದ ವಿಜ್ಞಾನ ವಿಕಾಸವಾಯಿತು. ಆ ವಿಜ್ಞಾನಕ್ಕೆ ತಾರ್ಕಿಕ ವಿವರಣೆ ಸಿಗದಾಗ ಕಲ್ಪನೆ ಮೊದಲು ಮನೆಮಾಡಿತು ಅದನ್ನೇ ಸರಿ ಎಂದು ದೃಢೀಕರಿಸಲು ಫಲಜೋತಿಷ್ಯ ತಲೆ ಎತ್ತಿತು. ಆ ತರ್ಕಕ್ಕೆ ಪ್ರಶ್ನೆಗಳನ್ನು ಹಾಕುತ್ತಾ ಖಗೋಳ ವಿಜ್ಞಾನ ಭಿನ್ನ ಭಿನ್ನ ವಿಜ್ಞಾನವನ್ನು ಬೆಳೆಸಿತು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಜ್ಯೋತಿಷ್ಯವು ಶನಿ ಕೆಡುಕೆಂದು, ಶುಕ್ರ ದೆಸೆಯೆಂದೂ, ಗುರು ಬಲವೆಂದೂ, ರಾಹು ಕೇತುಗಳು ಅಪಾಯವೆಂದೂ ವಿಶಿಷ್ಟ ರೂಪ ಮತ್ತು ಗುಣಗಳನ್ನು ಆರೋಪಿಸಿ ಆ ಗ್ರಹತಾರೆಗಳನ್ನು ಮಾನವನ ಬದುಕಿನ ಜೊತೆ ತಾಕಲಾಡಿಸಿ ಮಾನವನ ಜೀವನವನ್ನು ಹೆದರಿಸುವ ಗ್ರಹಗತಿ ನಾಟಕ. ಇದೆಂದೂ ಬದುಕನ್ನು ಸುಖಮಯವಾಗಿ ಕಟ್ಟಿಕೊಟ್ಟ ಉದಾಹರಣೆಯಿಲ್ಲ, ಇದನ್ನು ನಂಬಿದವನ ಬಾಳಂತು ಡೋಲಾಯಮಾನವಾಗಿರುವ ಉದಾಹರಣೆ ಬೀದಿಗೊಂದು ಸಿಗುತ್ತದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು.

ಇತ್ತೀಚೆಗೆ ಹಗರೆಯ ಜ್ಞಾನ ದೀವಿಗೆ ವಿದ್ಯಾಸಂಸ್ಥೆಯು ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಜ್ಞಾನ ದೀವಿಗೆ ಶಾಲಾವರಣದಲ್ಲಿ ಆಯೋಜಿಸಿದ್ದ ಆಕಾಶಯಾನ ಕಾರ್ಯಕ್ರಮದಲ್ಲಿ ಖಗೋಳ ಮತ್ತು ಜೋತಿಷ್ಯದ ನಡುವಿನ ಸಂಬಂಧ ಹಾಗೂ ವ್ಯತ್ಯಾಸಗಳ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಭಾರತದ ಜನರ ದೇಹ ತುಂಡರಿಸಿ ನರನಾಡಿಗಳನ್ನೆಲ್ಲಾ ಜಾಲಾಡಿ ರಕ್ತದ ಕಣಕಣಗಳನ್ನು ಶೋಧಿಸಿ ನೋಡಿದರೆ ಸಿಗುವುದು ಧರ್ಮದ ಮೌಢ್ಯ, ಅಜ್ಞಾನದ ಅಂಧಕಾರ, ಇವೆಲ್ಲವನ್ನೂ ಭೀಭತ್ಸ ಸ್ವರೂಪದಲ್ಲಿ ಮೇಳೈಸಿಸಲು ಅಡಿಗಲ್ಲಾಗಿ ಜ್ಯೋತಿಷಿಯ ದನಿಗಳು ನಿಂತಿರುತ್ತವೆ ಎಂದು ವಿವರಿಸಿದರು. ಕೈಯಲ್ಲಿ ಎಂತಹ ಮೊಬೈಲ್ ಇರಲಿ, ರಿಮೋಟಿನಲ್ಲಿ ಬಾಗಿಲು ತೆರೆಯುವ ಐಷರಾಮಿ ಕಾರೇ ಇರಲಿ, ರಾಕೇಟು ಆಗಸದಂಗಳದಲಿ ತೇಲಾಡಲಿ ವಿಜ್ಞಾನವನ್ನು ನಂಬರು ಅದರ ಫಲಗಳನ್ನೆಲ್ಲಾ ಉಂಡುಂಡು ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಂಡರೂ ಅದಕ್ಕೆ ಜ್ಯೋತಿಷ್ಯದ ಕಂದಾಚಾರದ ಕರ್ಮಸಿದ್ಧಾಂತದ ಮಹಿಮೆಯೆಂದೇ ಉಸುರುವುದು ಎಂದು ಉದಾಹರಣೆಗಳ ಸಮೇತ ವಿವರಿಸಿದ ಅವರು, ಗ್ರಹಗಳು ಸಾಳುಗಟ್ಟಿನಿಂತದ್ದನ್ನು ತೋರಿಸಿ ತಮ್ಮ ತಮ್ಮ ರಾಶಿಗಳನ್ನು ಪತ್ತೆ ಹಚ್ಚುವುದು ಹೇಗೆ ಎಂದು ಪ್ರಾಯೋಗಿಕವಾಗಿ ತೋರಿಸಿದರು.ಕಾರ್ಯಕ್ರಮದಲ್ಲಿ ಆಕಾಶ ನೋಡುವುದು ಹೇಗೆ ಎಂದು ವಿವರಿಸಿದ ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್, ಮಾನವ ಜೀವನದಲ್ಲಿ ಸೂರ್ಯ-ಚಂದ್ರರ ಸಂಬಂಧ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು ಖಗೋಳ ಮತ್ತು ಜ್ಯೋತಿಷ್ಯದ ಹುಟ್ಟಿಗೆ ಕಾರಣ. ಗ್ರಹ-ತಾರೆಗಳ ಶಿಸ್ತು ಬದ್ಧ ಚಲನೆಯ ಕ್ರಮಬದ್ಧ ವೀಕ್ಷಣೆಯಿಂದ ವಿಜ್ಞಾನ ವಿಕಾಸವಾಯಿತು. ಆ ವಿಜ್ಞಾನಕ್ಕೆ ತಾರ್ಕಿಕ ವಿವರಣೆ ಸಿಗದಾಗ ಕಲ್ಪನೆ ಮೊದಲು ಮನೆಮಾಡಿತು ಅದನ್ನೇ ಸರಿ ಎಂದು ದೃಢೀಕರಿಸಲು ಫಲಜೋತಿಷ್ಯ ತಲೆ ಎತ್ತಿತು. ಆ ತರ್ಕಕ್ಕೆ ಪ್ರಶ್ನೆಗಳನ್ನು ಹಾಕುತ್ತಾ ಖಗೋಳ ವಿಜ್ಞಾನ ಭಿನ್ನ ಭಿನ್ನ ವಿಜ್ಞಾನವನ್ನು ಬೆಳೆಸಿತು. ಸಿರಿಯಸ್ ನಕ್ಷತ್ರ ಯಾವುದೋ ಸಂದರ್ಭದಲ್ಲಿ ಕಾಣಿಸಿದಾಗ ಈಜಿಪ್ಟಿನ ನೈಲ್ ನದಿಯಲ್ಲಿ ಪ್ರವಾಹ ಉಂಟಾಗುತಿತ್ತು, ಇದು ಈಜಿಪ್ಟ್‌ ಜನರಿಗೆ ಜೀವ ಸಂಜೀವಿನಿಯಾಗಿ ಗೋಚರಿಸಿತು. ಇದು ಜೋತಿಷ್ಯ ಮತ್ತು ಖಗೋಳ ಎರಡನ್ನೂ ಬೆಳೆಸಿತು ಎಂದರು.ತುಮಕೂರು ವಿಜ್ಞಾನ ಕೇಂದ್ರದ ರವಿಶಂಕರ್ ಟೆಲೆಸ್ಕೋಪುಗಳ ಮೂಲಕ ಆಕಾಶದ ಶುಕ್ರ, ಶನಿ, ಗುರು ಹಾಗೂ ಚಂದ್ರರನ್ನು ತೋರಿಸಿ ಖಗೋಳ ವಿಜ್ಞಾನ ಎನ್ನುವುದು ವಿಜ್ಞಾನಗಳ ಮಹಾತಾಯಿ ಎನ್ನುತ್ತಾರೆ ಪಂಡಿತರು. ಕಾರಣ ಆಗಸದತ್ತ ನೆಟ್ಟ ನೋಟ ಹೊಸ ತಿಳಿವಳಿಕೆಗೆ ನಾಂದಿ ಹಾಡಿತು. ಆ ಕಾರಣ ಸೂರ್ಯ, ನಕ್ಷತ್ರ, ಗ್ರಹ, ಚಂದ್ರರ ಕುರಿತ ಸತ್ಯ ತಿಳಿಯುವ ಪ್ರಯತ್ನವಾಯಿತು. ನೈಸರ್ಗಿಕ ವಿಕೋಪ ಹಾಗೂ ಕಾಲನಿರ್ಣಯ ವಿಜ್ಞಾನವನ್ನು ಬೆಳೆಸಿತು, ಆ ವಿಜ್ಞಾನ ತಂತ್ರಜ್ಞಾನವನ್ನು ಬೆಳೆಸಿತು, ತಂತ್ರಜ್ಞಾನ ಪ್ರಜಾಪ್ರಭುತ್ವವನ್ನು ಬೆಳೆಸಿತು, ಪ್ರಜಾಪ್ರಭುತ್ವ ಸಮಾನತೆಯ ಹಾಡನ್ನು ಕಟ್ಟಿತು ಆಕಾಶ ನೋಡಿ, ಮೌಢ್ಯ ಅಳಿಸಿ ಎಂದು ಸಂದೇಶ ನೀಡಿದರು. ಜ್ಞಾನ ದೀವಿಗೆ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಆರ್. ಲಾವಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜ್ಞಾನ ದೀವಿಗೆ ವಿದ್ಯಾಸಂಸ್ಥೆ ವೈಜ್ಞಾನಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ಪರಿಸರ, ವಿಜ್ಞಾನ, ಸಾಹಿತ್ಯ ಮತು ಸಂಸ್ಕೃತಿ ಕುರಿತ ವಿಚಾರಗಳು ವಿಧ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಗಟ್ಟಿಯಾದ ಬುನಾದಿ ಹಾಕಿಕೊಡುತ್ತವೆ ಎನ್ನುವುದು ಮಾನವಶಾಸ್ತ್ರ ಹೇಳಿದೆ. ಹಾಗಾಗಿ ಶಾಲಾ ಪಠ್ಯದ ಜೊತೆಗೆ ವೈಜ್ಞಾನಿಕ ಮನೋಧರ್ಮ ಬಿತ್ತುವ ಜ್ಞಾನವನ್ನೂ ಕೂಡ ವಿದ್ಯಾರ್ಥಿ ಹಾಗೂ ಪೋಷಕರಿಗೆ ನೀಡುತ್ತಿದೆ ಎಂದರು.ಈ ಸಂದರ್ಭದಲ್ಲಿ ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು, ಜ್ಞಾನ ದೀವಿಗೆ ವಿದ್ಯಾಸಂಸ್ಥೆಯ ಅಧ್ಯಕ್ಷ ಎಚ್.ಟಿ. ಮಂಜೇಗೌಡ, ಖಜಾಂಚಿ ಸತೀಶ್ ಉಪಸ್ಥಿತರಿದ್ದರು. ಜ್ಞಾನ ದೀವಿಗೆ ಶಾಲೆಯ ಮುಖ್ಯ ಶಿಕ್ಷಕಿ ಕೋಮಲ ಸ್ವಾಗತಿಸಿ ಎಲ್ಲರನ್ನೂ ವಂದಿಸಿದರು.