ಸಾರಾಂಶ
ಉಡುಪಿ : ನಾವು ಚಿಕಿತ್ಸಕ ಮತ್ತು ವಿಮರ್ಶಾತ್ಮಕ ಬುದ್ಧಿಯನ್ನು ಕಳೆದುಕೊಳ್ಳುತ್ತಿದ್ದೇವೆ, ಆದ್ದರಿಂದಲೇ ಯಾರೋ ನಮ್ಮ ಶ್ರದ್ಧಾಕೇಂದ್ರಗಳ ಬಗ್ಗೆ ಎಐ ಬಳಸಿ ಮಾಡಿರುವ ವಿಡಿಯೋಗಳನ್ನು ನಂಬಿ, ನಮ್ಮ ಶ್ರದ್ಧಾಕೇಂದ್ರಗಳ ಮೇಲಿನ ನಂಬಿಕೆಯನ್ನು ಕಳೆಕೊಳ್ಳುತಿದ್ದೇವೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ವಿಷಾದಿಸಿದ್ದಾರೆ.
ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದಂಗವಾಗಿ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಎಂಬ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು..ಈ ಜಗತ್ತಿನಲ್ಲಿ ಅತ್ಯಂತ ವಿಚಾರ ಸ್ವಾತಂತ್ರ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ, ಶ್ರೀ ಕೃಷ್ಣ ತಮ್ಮ ಭಗವದ್ಗೀತೆಯಲ್ಲಿಯೂ ಅದನ್ನು ಕಣ್ಣುಮುಚ್ಚಿ ನಂಬಬೇಡ, ವಿಮರ್ಶೆ ಮಾಡಿ ಸರಿ ಅನ್ನಿಸಿದರೆ ಮಾತ್ರ ನಂಬುವಂತೆ ಹೇಳುತ್ತಾನೆ.
ಆದರೆ ನಾವು ವಿಮರ್ಶೆ ಮಾಡುವುದನ್ನೇ ಬಿಟ್ಟಿದ್ದೇವೆ ಎಂದವರು ಕಳವಳ ವ್ಯಕ್ತಪಡಿಸಿದರು.ಅವರನ್ನು ಸನ್ಮಾನಿಸಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಇಂದು ಮೊಬೈಲ್‌ಗಳು ನಮ್ಮ ವಿವೇಚನಾ ಮತ್ತು ಜಿಜ್ಞಾಸುತನಗಳನ್ನೇ ಕುಂಠಿತಗೊಳಿಸಿವೆ.
ಆದ್ದರಿಂದ ಕೃಷ್ಣಾಷ್ಟಮಿ ಕೇವಲ ಸಂಭ್ರಮದ ಆಚರಣೆಯಾಗದೆ, ವಿವೇಚನೆಗೆ ಹಚ್ಚುವ, ಬದುಕಿನ ಗುಣಮಟ್ಟವನ್ನು ಹೆಚ್ಚಿಸುವ ಆಚರಣೆಯಾಗಬೇಕು ಎಂಬ ಕಾರಣಕ್ಕೆ 48 ದಿನಗಳ ಮಂಡಲೋತ್ಸವವನ್ನು ಆಯೋಜಿಸಿದ್ದೇವೆ ಎಂದರು.ಪುತ್ತಿಗೆ ಮಠದ ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ಮಹಿತೋಷ ಆಚಾರ್ಯರು ಕಾರ್ಯಕ್ರಮ ನಿರೂಪಿಸಿದರು.