ಸಾರಾಂಶ
ರಾಮ ಭಕ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ತನ್ನ ಧೋರಣೆ ಹೀಗೆ ಮುಂದುವರಿಸಿದರೆ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ. ಪೊಳ್ಳು ಪ್ರಕರಣ ದಾಖಲಿಸಿ, ಬಂಧನದ ಮೂಲಕ ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಯಶಸ್ವಿ ಆಗಲಾರದು.
ಶಿರಸಿ:
ಹುಬ್ಬಳ್ಳಿಯಲ್ಲಿ ರಾಮ ಭಕ್ತರ ಬಂಧನ ಖಂಡಿಸಿ ನಗರದ ಡಿವೈಎಸ್ಪಿ ಕಚೇರಿಯ ಆವರಣದಲ್ಲಿ ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಹಾಗೂ ವಿಚಾರ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಾಮ ಭಕ್ತರ ಬಂಧನವನ್ನು ವಿರೋಧಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಮಾತನಾಡಿ, ರಾಮ ಭಕ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ತನ್ನ ಧೋರಣೆ ಹೀಗೆ ಮುಂದುವರಿಸಿದರೆ ಹಿಂದೂ ಸಮಾಜ ತಕ್ಕ ಪಾಠ ಕಲಿಸುತ್ತದೆ. ಪೊಳ್ಳು ಪ್ರಕರಣ ದಾಖಲಿಸಿ, ಬಂಧನದ ಮೂಲಕ ಹಿಂದೂ ಸಮಾಜವನ್ನು ಹತ್ತಿಕ್ಕುವ ಪ್ರಯತ್ನ ಯಶಸ್ವಿ ಆಗಲಾರದು ಎಂಬುದು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ತಿಳಿದಿರಲಿ ಎಂದರು.
ಹಿಂದೂ ಜಾಗರಣಾ ವೇದಿಕೆಯ ಶಿರಸಿ ಜಿಲ್ಲಾ ಸಂಚಾಲಕ ಹರೀಶ ಕರ್ಕಿ ಮಾತನಾಡಿ, ಇಡೀ ರಾಷ್ಟ್ರ ಅಯೋಧ್ಯೆಯಲ್ಲಿ ರಾಮಲಲಾ ಪ್ರತಿಷ್ಠಾಪನೆ ಎದುರು ನೋಡುತ್ತಿದ್ದರೆ, ಹುಬ್ಬಳ್ಳಿಯಲ್ಲಿ ಶ್ರೀಕಾಂತ ಪೂಜಾರಿ ಅವರ ಬಂಧನ ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ರಾಮ ಭಕ್ತರ ಬಂಧನವನ್ನು ಕೂಡಲೇ ಕೈಬಿಡಲಿ, ಇಲ್ಲವೇ ಪರಿಣಾಮ ಎದುರಿಸಬೇಕಾಗುತ್ತದೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಉಷಾ ಹೆಗಡೆ, ಭಜರಂಗದಳ ಸಂಚಾಲಕ ಅಮಿತ್ ಶೇಟ್, ಮಧುಸೂದನ ಕಿರುಗಾರ, ಶ್ರೀಧರ ಹಿರೇಹದ್ದ, ನಗರಸಭಾ ಸದಸ್ಯರಾದ ಗಣಪತಿ ನಾಯ್ಕ, ವೀಣಾ ಶೆಟ್ಟಿ, ನಂದನ ಸಾಗರ ಹಾಗೂ ವಿಚಾರ ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.