ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದ ನಿವಾಸಿ ರಮೇಶ ತಿಲಾರಿ ಪೊಲೀಸರಿಂದ ಗುಂಡೇಟು ತಿಂದ ಆರೋಪಿ. ಕಳೆದ ಶನಿವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಕಿತ್ತೂರು ಪೊಲೀಸರು ಶೋಧ ನಡೆಸಿದ್ದರು. ಈ ಪ್ರಕರಣದಲ್ಲಿ ಐವರು ಆರೋಪಿಗಳು ತಂಡ ಕಟ್ಟಿಕೊಂಡು. ಜಿಲ್ಲೆಯಲ್ಲಿ ಸರಗಳ್ಳತನ ಮಾಡಿರೋದು ಗೊತ್ತಾಗಿತ್ತು. ಕಿತ್ತೂರು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಶನಿವಾರ ಬೆಳಗಿನ ಜಾವ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಮೇಶ ತಿಲಾರಿ ಪಲ್ಸರ್ ಬೈಕ್ ಮೇಲೆ ಹೋಗುವಾಗ ಅಡ್ಡಗಟ್ಟಿ ಪರಿಶೀಲನೆ ನಡೆಸುವ ವೇಳೆ ತನ್ನ ಬಳಿಯಿದ್ದ ಚಾಕುವಿನಿಂದ ಪೊಲೀಸರ ಮೇಲೆಯೇ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಮತ್ತೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದಾಗ ಕಿತ್ತೂರು ಪಿಎಸ್ಐ ಪ್ರವೀಣ ಗಂಗೊಳ್ಳಿ ಸ್ವಯಂ ರಕ್ಷಣೆಗೆ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ಒಂದು ಗುಂಡು ಕಾಲಿಗೆ ತಗುಲಿ ಸಿಕ್ಕಿಬಿದ್ದಿದ್ದಾನೆ. ಆತನನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆರೋಪಿ ರಮೇಶ ವಿರುದ್ಧ ನಾಲ್ಕು ದರೋಡೆ, ಡಕಾಯಿತಿ, ಗ್ಯಾಂಗ್ ರೇಪ್ ಸೇರಿ ಒಟ್ಟು 9 ಪ್ರಕರಣಗಳಿವೆ. ಈಗಾಗಲೇ ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದ. ಆರೋಪಿ ನಡೆಸಿದ ದಾಳಿಯಲ್ಲಿ ಪಿಎಸ್ಐ ಪ್ರವೀಣ ಗಂಗೊಳ್ಳಿ, ಪೊಲೀಸ್ ಪೇದೆಗಳಾದ ಷರೀಫ್ ದಫೇದಾರ್, ಅದೃಶ್ಯಪ್ಪ, ನಿಂಗರಾಜಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೈಲಹೊಂಗಲ ಡಿಸಿಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.