ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
ಹಣಕಾಸು ವ್ಯವಸ್ಥೆ ಬದ್ಧತೆ ಇಟ್ಟುಕೊಂಡು ಯಾವ ಉದ್ದೇಶಕ್ಕೆ ಸಾಲ ಪಡೆದಿದ್ದೇವು ಅದೇ ಉದ್ದೇಶಕ್ಕಾಗಿ ಸಾಲ ಬಳಸಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದು ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಮಹೇಶ ಕೊಟಬಾಗಿ ಹೇಳಿದರು.ಇಲ್ಲಿನ ಹುಣಸಿಕೊಳ್ಳಮಠದ ಗುರುಸಿದ್ದೇಶ್ವರ ಶ್ರೀಗಳಳ ಸಭಾ ಭವನದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಯಮಕನಮರಡಿ ಶಾಖೆಯವರು ಶನಿವಾರ ಆಯೋಜಿಸಿದ್ದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಬ್ಯಾಂಕ್ ಗಳಲ್ಲಿ ಠೇವಣಿ ಇಡುವಾಗ, ಸಾಲ ಪಡೆಯುವಾಗ ಅನಗತ್ಯ ವ್ಯಕ್ತಿಗಳು ಮಧ್ಯಪ್ರವೇಶ ಮಾಡಬಾರದು. ತಮ್ಮ ಆರ್ಥಿಕ ಚಟುವಟಿಕೆ ಸುಧಾರಿಸಿಕೊಳ್ಳಲು ಸಾಲ ಪಡೆದುಕೊಳ್ಳಬೇಕೇ ಹೊರತು ಬೇರೆಯವರಿಗೆ ಸಾಲ ಕೊಡಿಸಬಾರದು. ಸಾಲ ಪಡೆಯುವ ವ್ಯಕ್ತಿ ಬಗ್ಗೆ ತಿಳಿದು ಸಾಕ್ಷಿಯಾಗಬೇಕು. ಸಾಲಗಾರನಷ್ಟೇ ಸಾಕ್ಷಿದಾರರನ್ನು ಜವಾಬ್ದಾರಿ ಆಗಿರುತ್ತಾನೆ. ಮೊಬೈಲ್‌ಗಳಲ್ಲಿ ಬರುವ ಮೆಸೇಜ್‌ಗಳಿಗೆ ವಂಚನೆಗೆ ಒಳಗಾಗಬಾರದು, ಒಟಿಪಿ ಶೇರ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದರು.
ಬೆಂಗಳೂರಿನ ಅವಲಹಳ್ಳಿಯ ಉಮೇಶ ಬಿ.ಕೆ.ಮಾತನಾಡಿ, ವಿನೋತಾ ರೆಡ್ಡಿ ನೇತೃತ್ವದಲ್ಲಿ ಕೇವಲ 5 ಜನರಿಂದ ಪ್ರಾರಂಭವಾದ ಕ್ರೆಡಿಟ್ ಆಕ್ಸಿಸ್ ಸಂಸ್ಥೆಯು ಕಳೆದ 26 ವರ್ಷಗಳಿಂದ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ವಲಯಗಳಲ್ಲಿ ಕಾರ್ಯ ಮಾಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ. ಈವರೆಗೆ 4000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಮಾದೇಗೌಡ.ಸಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಆರ್ಥಿಕ ಸಬಲೀಕರಣ ಜೊತೆಗೆ ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ವಲಯಗಳಲ್ಲಿ ಕೂಡ ಸಂಸ್ಥೆ ಕಾರ್ಯ ಮಾಡುತ್ತಿದೆ. ಅಂಗನವಾಡಿ ಕೇಂದ್ರ, ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಕೂಡ ನೀಡಲಾಗುತ್ತಿದೆ ಎಂದರು.
ಆರೋಗ್ಯ ಇಲಾಖೆಯ ವಿಜಯಕುಮಾರ ಹತ್ತರಗಿ ಆರೋಗ್ಯದ ಬಗ್ಗೆ ತಿಳಿಸಿದರು. ಮಂಜುನಾಥ, ಸತೀಶ ಸೇರಿಂದತೆ ಸಿಬ್ಬಂದಿ, ಸದಸ್ಯರು ಭಾಗವಹಿಸಿದ್ದರು. ಉಮೇಶ ಬಿ.ಕೆ. ಸಂಸ್ಥೆಯ ಪರಿಚಯ ಮಾಡಿದರು. ಮಂಜಪ್ಪ ನಡುವಿನಮನಿ ಸ್ವಾಗತಿಸಿ, ಸಿದ್ದಪ್ಪಾ ಡೊಂಬರ ನಿರೂಪಿಸಿ, ಚನ್ನಪ್ಪ ಯಲಿವಾಳ ವಂದಿಸಿದರು.