ಕೃಷಿ ಚಟುವಟಿಕೆಗೆ ಸಿಗದ ನಿರೀಕ್ಷಿತ ಬಲ: ನಾರಾಯಣಸಾ ಭಾಂಡಗೆ

| Published : Aug 31 2025, 02:00 AM IST

ಕೃಷಿ ಚಟುವಟಿಕೆಗೆ ಸಿಗದ ನಿರೀಕ್ಷಿತ ಬಲ: ನಾರಾಯಣಸಾ ಭಾಂಡಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಚಟುವಟಿಕೆಗೆ ಸರ್ಕಾರಗಳಿಂದ ನಿರೀಕ್ಷಿತ ಮಟ್ಟದ ಆದ್ಯತೆ ಸಿಗುತ್ತಿಲ್ಲ. ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ಯಮಗಳ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರೆ, ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟು ಆರ್ಥಿಕವಾಗಿ ಸದೃಢರಾಗಿ ರೈತರೇ ಮರಳಿ ಸರ್ಕಾರಕ್ಕೆ ಸಾಲ ಕೊಡುವ ಮಟ್ಟಿಗೆ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೃಷಿ ಚಟುವಟಿಕೆಗೆ ಸರ್ಕಾರಗಳಿಂದ ನಿರೀಕ್ಷಿತ ಮಟ್ಟದ ಆದ್ಯತೆ ಸಿಗುತ್ತಿಲ್ಲ. ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ಯಮಗಳ ಮೂಲಕ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿದರೆ, ರೈತರೇ ಸರ್ಕಾರಕ್ಕೆ ಸಾಲ ನೀಡುವಷ್ಟು ಆರ್ಥಿಕವಾಗಿ ಸದೃಢರಾಗಿ ರೈತರೇ ಮರಳಿ ಸರ್ಕಾರಕ್ಕೆ ಸಾಲ ಕೊಡುವ ಮಟ್ಟಿಗೆ ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತನೆ ನಡೆಸಬೇಕಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು, ಕೆಪೆಕ್ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಿಪಂನೂತನ ಸಭಾಭವನದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಪಿಎಂಎಫ್ಎಂಇ ಯೋಜನೆಯ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರೈತರಿಗೆ ಅಗತ್ಯ ಅರಿವು ಮೂಡಿಸಿ ಅವರ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಿದರೆ ಸಾಲಮುಕ್ತರಾಗಿ ಮಾಡಲು ಸಾಧ್ಯವಿದೆ. ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಬಾಗಲಕೋಟೆ ಕ್ಷೇತ್ರದ ಶಾಸಕ ಎಚ್.ವೈ ಮೇಟಿ ಮಾತನಾಡಿ, ರಾಸಾಯನಿಕ ಬಳಕೆಗಳ ಪರಿಣಾಮ ಇಂದು ಮಾರುಕಟ್ಟೆಯಲ್ಲಿ ಕಲಬರಕೆ ಸಾಮಗ್ರಿಗಳ ಮಾರುಕಟ್ಟೆ ಸೃಷ್ಟಿಯಾಗಿದೆ. ಇದರಿಂದ ಮಾನವರ ಆರೋಗ್ಯದ ಮೇಲೆ ದುಷ್ಪರಿಣಾಮ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಕಿರು ಆಹಾರ ಸಂಸ್ಕರಣೆ ಉದ್ಯಮಗಳು ಕೇವಲ ನಗರ ಕೇಂದ್ರೀಕೃತವಾಗದೇ ಗ್ರಾಮೀಣ ಪ್ರದೇಶದಲ್ಲೂ ಚಟುವಟಿಕೆ ವಿಸ್ತರಿಸಿದರೆ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆಯಾಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಬಾಗಲಕೋಟೆ ಜಿಲ್ಲೆ ಫಲವತ್ತಾದ ಭೂಮಿ ಮತ್ತು ಸಾಕಷ್ಟು ನೀರಿನ ಲಭ್ಯತೆ, ಉತ್ತಮ ವಾತಾವರಣ ಹೊಂದಿದೆ. ಕೃಷಿಗೆ ಅತ್ಯುತ್ತಮ ಅವಕಾಶವಿದ್ದು, ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಬೆಳೆಯುವ ನಿಟ್ಟಿನಲ್ಲಿ ರೈತರಿಗೆ ಸೂಕ್ತ ತರಬೇತಿ ಹಾಗೂ ಆರ್ಥಿಕ ನೆರವು ನೀಡಬೇಕೆಂದರು.

ಜಿಲ್ಲೆಯಲ್ಲಿ ಅರಿಷಿಣ ಬೆಳೆಯ ಕ್ಷೇತ್ರ ವಿಸ್ತಾರವಾಗುತ್ತಿದೆ. ಜೊತೆಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸೃಷ್ಟಿಗೆ ಜಿಲ್ಲೆಯ ಅಗ್ರಣೀಯ ಬ್ಯಾಂಕಿನಿಂದ ಆರ್ಥಿಕ, ತಾಂತ್ರಿಕ ನೆರವು ಪಡೆದು ರೈತರು ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆ ನಿಲ್ಲಲಿದೆ ಎಂದು ಭರವಸೆ ನೀಡಿದರು.

ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ ಮಾತನಾಡಿ, ಉದ್ಯಮಗಳ ಸ್ಥಾಪನೆ ಮತ್ತು ಅಭಿವೃದ್ಧಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಯೋಜನೆಗಳಲ್ಲಿ ಸಾರ್ಥಕತೆ ಕಾಣಬಹುದಾಗಿದೆ. ಮಾರುಕಟ್ಟೆಯನ್ನು ಸೃಷ್ಟಿಸಲು ಸರ್ಕಾರ ಹಲವು ರೀತಿಯ ಆರ್ಥಿಕ ನೆರವು ನೀಡುತ್ತಿದೆ. ಉಪಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸುವ ನಿಟ್ಟಿನಲ್ಲಿ ಅಧಿಕಾರಿ ವರ್ಗವೂ ಸಹ ಕಿರು ಉದ್ಯಮದಾರರ ಜೊತೆ ನಿಲ್ಲಲಿದೆ ಎಂದು ಹೇಳಿದರು.

ಕಪೆಕ್ ಸಂಸ್ಥೇಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶಿವಪ್ರಕಾಶ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ನಿಜ ಆದರೆ ಇಂತಹ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ಸಹಜವಾಗಿ ಉತ್ಪನ್ನಗಳ ಮೌಲ್ಯವರ್ಧನೆಯಾಗಲಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ತಿಳಿಸಿದರು.

ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಿಸುವ ನಿಟ್ಟಿನಲ್ಲಿ ಚಾಲುಕ್ಯ ನಾಡು ಎಂಬ ವೆಬ್‌ಸೈಟ್‌ ಗೆ ಚಾಲನೆ ನೀಡಲಾಯಿತು. ನಗರಸಭೆ ಅಧ್ಯಕ್ಷ ಸವಿತಾ ಲಂಕೆಣ್ಣವರ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಕಟ್ಟಿ, ಜಂಟೀ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆಣ್ಣವರ ಸೇರಿದಂತೆ ರೈತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಬಾಕ್ಸ್:

ಬಾಗಲಕೋಟೆಯಂತಹ ಪರಿಸರದಲ್ಲಿ ಗುಣಮಟ್ಟದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸೃಷ್ಟಿಗೆ ಅವಕಾಶವಿದೆ. ಇಲ್ಲಿನ ಫಲವತ್ತಾದ ಭೂಮಿಯಲ್ಲಿ ಬೆಳೆಯುವ ಅರಿಷಿಣ, ಜವೆ ಗೋಧಿ ಸೇರಿದಂತೆ ಇತರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಅರ್ಬನ್ ಮಾರುಕಟ್ಟೆಗೆ ಮುಂದಾಗುವ ಯೋಚನೆಯಿದೆ. ಉತ್ಪನ್ನಗಳ ಮಾರುಕಟ್ಟೆ ಸೃಷ್ಟಿಗೆ ಬೇಕಾದ ಹಾಗೂ ಸಾಧಕರ ಕುರಿತು ಕನ್ನಡ ಪ್ರಭ ಪತ್ರಿಕೆ ಸರಣಿ ವರದಿ ಮಾಡಿದ್ದು ನಿಜಕ್ಕೂ ಪ್ರೋತ್ಸಾಹ ನೀಡುವ ಪ್ರಯತ್ನವಾಗಿದೆ.

- ಸಿ.ಎಸ್.ಶಿವಪ್ರಕಾಶ ಕಪೆಕ್ ಸಂಸ್ಥೇಯ ವ್ಯವಸ್ಥಾಪಕ ನಿರ್ದೇಶಕ

ಗಮನ ಸೆಳೆದ ಪ್ರದರ್ಶನ

ಕಾರ್ಯಕ್ರಮದಲ್ಲಿ ಕಿರು ಆಹಾರ ಸಂಸ್ಕರಣೆಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಗಮನ ಸೆಳೆಯಿತು. ಸಿರಿಧಾನ್ಯಗಳು, ಬೆಲ್ಲದ ಉತ್ಪನ್ನಗಳು, ಮಸಾಲಾ ಉತ್ಪನ್ನಗಳು, ಸೆಲ್ಕೋ ಕಂಪನಿಯ ಸೋಲಾರ್‌ ಆಧಾರಿತ ಸಾಮಗ್ರಿಗಳು ಗಮನ ಸೆಳೆದವು.