ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲೇ ವಿಡಿಸಿಸಿ ಬ್ಯಾಂಕ್ ಲಾಭದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷರು ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಆಯೋಜಿಸಿದ್ದ ಬ್ಯಾಂಕಿನ 106ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ನಮ್ಮ ಬ್ಯಾಂಕ್ 8.53 ಕೋಟಿ ತೆರಿಗೆ ಪಾವತಿ ಬಳಿಕ ₹ 25.18 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಐತಿಹಾಸಿಕ ದಾಖಲೆಯಾಗಿದೆ. 99 ವರ್ಷಗಳಲ್ಲಿ ₹ 245.90 ಕೋಟಿ ಲಾಭದಲ್ಲಿದ್ದು, ಆರ್ಥಿಕ ಸ್ಥಿರತೆ ಕಾಯ್ದುಕೊಂಡಿರುವುದು ಬ್ಯಾಂಕ್ ಸಾಧನೆಯಾಗಿದೆ. 7 ವರ್ಷಗಳಲ್ಲಿ ₹ 6.08 ಕೋಟಿ ನಷ್ಟದಿಂದ ಹೊರಬಂದು ಒಟ್ಟು ₹ 239.82 ಕೋಟಿ ಲಾಭ ಗಳಿಸಿದೆ. ನಷ್ಟದಲ್ಲಿದ್ದ ಹಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು, ಅರ್ಬನ್ ಬ್ಯಾಂಕುಗಳು, ಪತ್ತಿನ ಸಹಕಾರಿ ಸಂಘಗಳು, ಹಾಲು ಒಕ್ಕೂಟಗಳಿಗೆ ವಿಡಿಸಿಸಿ ಬ್ಯಾಂಕ್ ನೆರವು ನೀಡಿ ಎಲ್ಲ ಸಂಸ್ಥೆಗಳು ಪುನಶ್ಚೇತನವಾಗಲು ನೆರವಾಗಿದೆ ಎಂದು ವಿವರಿಸಿದರು.
30 ಸಹಕಾರಿ ಸಂಘಗಳಿಗೆ ಬಹುಮಾನ:ವಿಡಿಸಿಸಿ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ನಿರ್ವಹಣೆಗಾಗಿ ಸಹಕಾರಿ ವಲಯದ ವಿವಿಧ 30 ಸಂಸ್ಥೆಗಳಿಗೆ ಬಹುಮಾನ ನೀಡಿ ಸತ್ಕರಿಸಲಾಯಿತು.
ಬಾಳೆಹೊಸೂರ ಫಕ್ಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮತ್ತು ತಿಕೋಟದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಸುರೇಶ ಬಿರಾದಾರ, ಶೇಖರ ದಳವಾಯಿ, ಬಿ.ಎಸ್.ಪಾಟೀಲ ಯಾಳಗಿ, ಕಲ್ಲನಗೌಡ ಪಾಟೀಲ, ಹಣಮಂತರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ, ಚಂದ್ರಶೇಖರ ಪಾಟೀಲ ಮನಗೂಳಿ, ಅರವಿಂದ ಪೂಜಾರಿ, ಎಸ್.ಎಸ್.ಜಹಾಗೀರದಾರ, ಸಹಕಾರಿ ಸಂಘಗಳ ಉಪನಿಬಂಧಕಿ ಎಸ್.ಕೆ.ಭಾಗ್ಯಶ್ರೀ, ನಬಾರ್ಡ್ ಡಿಡಿಎಂ ವಿಕಾಸ್ ರಾಠೋಡ, ಸಹಕಾರಿ ಸಂಘಗಳ ನಿವೃತ್ತ ಅಪರ ನಿಬಂಧಕ ಅಭಿವೃದ್ಧಿ ಅಧಿಕಾರಿ ಎಂ.ಜಿ.ಪಾಟೀಲ, ನಿವೃತ್ತ ಜಂಟಿ ನಿಬಂಧಕ ಆಡಳಿತ ಮಂಡಳಿ ಸಲಹೆಗಾರ ಕೊಟ್ರೇಶ ಸೇರಿದಂತೆ ಇತರರಿದ್ದರು. ಸಿಇಒ ಎಸ್.ಎ.ಡವಳಗಿ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕರಾದ ಗುರುಶಾಂತ ನಿಡೋಣಿ ಸ್ವಾಗತಿಸಿದರು. ಆರ್.ಎಂ.ಬಣಗಾರ, ಅಶೋಕ ಹಂಚಲಿ, ನಾಗರಾಜ ಬಿರಾದಾರ ನಿರೂಪಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಿರಾದಾರ ವಂದಿಸಿದರು.ಕೋಟ್:ಪ್ರಾಮಾಣಿಕತೆ, ಪಾರದರ್ಶಕತೆ ಇದ್ದರೆ ಸಹಕಾರಿ ವಲಯ ನಿರೀಕ್ಷೆ ಮೀರಿ ಸಾಧನೆ ಮಾಡುತ್ತದೆ ಎಂಬುದಕ್ಕೆ ಸಚಿವ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಡಿಸಿಸಿ ಬ್ಯಾಂಕ್ ಮುನ್ನಡೆಯುತ್ತಿರುವುದೇ ಸಾಕ್ಷಿ. ಭವಿಷ್ಯದಲ್ಲಿ ನಿಮ್ಮ ಬ್ಯಾಂಕ್ ದೇಶದಲ್ಲೇ ಮೊದಲ ಸ್ಥಾನಕ್ಕೇರಲೆಂದು ಆಶಿಸುತ್ತೇನೆ.ಫಕೀರ ದಿಂಗಾಲೇಶ್ವರ ಶ್ರೀಗಳು, ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಮಠ, ಶಿರಹಟ್ಟಿ.