ಅನುಭವದಿಂದ ಚಿತ್ರಕಲೆ ಮಹತ್ವದ ಬಗ್ಗೆ ಅರಿವು

| Published : Apr 29 2024, 01:38 AM IST

ಸಾರಾಂಶ

ಚಿತ್ರಕಲೆ ಶಿಬಿರಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಶ್ರೀ ಕಲಾನಿಕೇತನ ದೃಶ್ಯಕಲಾ ಕಾಲೇಜು ಉಪನ್ಯಾಸಕ ಡಾ.ವಿಠಲರೆಡ್ಡಿ ಎಫ್.ಚುಳಕಿ ಅಭಿಪ್ರಾಯಪಟ್ಟರು. ಹಾಸನದಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಲಾ ಉಪನ್ಯಾಸಕ ಡಾ.ವಿಠಲರೆಡ್ಡಿ ಎಫ್.ಚುಳಕಿ । ಸಾಂಪ್ರದಾಯಿಕ ಚಿತ್ರಕಲಾ ಶಿಬಿರೋತ್ಸವ

ಕನ್ನಡಪ್ರಭ ವಾರ್ತೆ ಹಾಸನ

ಕೈಚಳಕದ ಮೂಲಕ ಸುಂದರ ಅನುಭವವಾದರೆ ಮಾತ್ರ ಚಿತ್ರಕಲೆ ಎಂಬುದು ಗೊತ್ತಾಗುತ್ತದೆ. ಇಂತಹ ಚಿತ್ರಕಲೆ ಶಿಬಿರಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಶ್ರೀ ಕಲಾನಿಕೇತನ ದೃಶ್ಯಕಲಾ ಕಾಲೇಜು ಉಪನ್ಯಾಸಕ ಡಾ.ವಿಠಲರೆಡ್ಡಿ ಎಫ್.ಚುಳಕಿ ಅಭಿಪ್ರಾಯಪಟ್ಟರು.

ಹಾಸನದ ವಿದ್ಯಾನಗರ ಕಲಾಶ್ರೀ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಚಿತ್ರಕಲಾ ಫೌಂಡೇಷನ್ ಹಾಗೂ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಚಿತ್ರಕಲೆ ಎಂಬುದನ್ನು ಉಳಿಸಿ ಬೆಳೆಸಬೇಕು ಎನ್ನುವ ಆಸಕ್ತಿ ಇರಬೇಕು. ಬೆಳೆಸಬೇಕು ಎನ್ನುವ ಇಚ್ಛಾಶಕ್ತಿ ದೇಸಾಯಿ ಅವರಲ್ಲಿದೆ. ಸಾಂಪ್ರದಾಯಕ ಚಿತ್ರಕಲಾ ವಿಷಯ ಕುರಿತು ಹೇಳುವುದಾದರೆ ಮಕ್ಕಳಲ್ಲಿ ಮೊದಲು ಚಿತ್ರಕಲೆಯ ಬಗ್ಗೆ ತಿಳಿಸಬೇಕು. ಚಿತ್ರಕಲೆ ಎಂಬುದು ೧೫೬೫ ರಲ್ಲಿ ವಿಜಯನಗರ ಶೈಲಿಯು ಪತನವಾದ ನಂತರ ಅನೇಕ ಕಲಾವಿದರು ಅಲ್ಲಿಂದ ಮೈಸೂರಿಗೆ ಬಂದ ಕಲಾವಿದರು ಸೇರಿ ಅಲ್ಲೊಂದು ಸಾಂಪ್ರದಾಯಕ ಚಿತ್ರಕಲೆಯನ್ನು ಪ್ರಾರಂಭ ಮಾಡುತ್ತಾರೆ. ಮೈಸೂರಲ್ಲಿ ಸಿಗುವಂತಹ ಪರಿಕರಗಳು, ವಿಷಯಗಳು, ವಾತಾವರಣ ಎಲ್ಲವನ್ನು ಬಳಸಿಕೊಳ್ಳುತ್ತಾರೆ. ಮೈಸೂರು ಎನ್ನುವ ಹೆಸರು ಬಂದರೆ ಅಲ್ಲಿ ಮಾಡುವ ಬಹುತೇಕ ಚಿತ್ರಗಳು ದೇವರಿಗೆ ಸಂಬಂಧಪಟ್ಟಿದಾಗಿದೆ’ ಎಂದು ವಿವರಿಸಿದರು.

‘ಮೈಸೂರು ತುಂಬ ಶ್ರೀಮಂತವಾದಂತಹ ಪ್ರದೇಶವಾಗಿದೆ. ಬಂಗಾರದಿಂದ ಕೂಡಿದ ಕಲಾಕೃತಿಗಳನ್ನು ಇಲ್ಲಿ ನೋಡಬಹುದಾಗಿದೆ. ಮಹಾರಾಜರ ವೇಷಭೂಷಣ ಎಲ್ಲಾ ಬಂಗಾರ ಬಣ್ಣ ಇರುವುದು ಕಾಣಬಹುದು. ಭೂಮಿಯಲ್ಲಿ ಸಿಗುವ ಪ್ರಕೃತಿಯ ವಸ್ತುಗಳನ್ನು ಬಳಸಿ ಬಣ್ಣ ಸಿದ್ಧಪಡಿಸುತಿದ್ದರು. ಪ್ರಸ್ತುದಲ್ಲಿ ನಿಜವಾದ ಬಣ್ಣ ಸಿಗುವುದಿಲ್ಲ’ ಎಂದು ಹೇಳಿದರು.

ತುಮಕೂರು ಹಿರಿಯ ಚಿತ್ರಕಲಾವಿದ ಕಿಶೋರ್ ಕುಮಾರ್, ಚಿತ್ರಕಲಾವಿದ, ಫೌಂಡೇಷನ್ ಸ್ಥಾಪಕ ಅಧ್ಯಕ್ಷ ಬಿ.ಎಸ್. ದೇಸಾಯಿ, ನಿರ್ಮಲಾ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಆರ್.ಸಿ.ಕಾರದ ಕಟ್ಟಿ, ಚಿತ್ರ ಕಲಾವಿದರಾದ ಚೇತನ್, ತೇಜಸ್ವಿನಿ, ಶಿವಬಾಬು, ನಂದನ್, ಸುಪ್ರಿತ್, ಕೃಷ್ಣಚಾರಿ, ಚಂದ್ರಕಾಂತ್, ಬಸವರಾಜು ಇದ್ದರು.

ಹಾಸನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರೋತ್ಸವ ಉದ್ಘಾಟಿಸಲಾಯಿತು.